ಚಿಕ್ಕಬಳ್ಳಾಪುರ: ಲೋಕಸಭೆ ಚುನಾವಣೆಗೆ ಮೊದಲ ಬಾರಿಗೆ ಸ್ಪರ್ಧಿಸುತ್ತಿರುವ ಎನ್ಡಿಎ ಅಭ್ಯರ್ಥಿ ಡಾ.ಕೆ.ಸುಧಾಕರ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ. 2019ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಲೆ ಮತ್ತು ಒಕ್ಕಲಿಗರ ಬೆಂಬಲದೊಂದಿಗೆ ಬಿಜೆಪಿ ಪ್ರಥಮ ಬಾರಿಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್ನಿಂದ ಕಸಿದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಇದೀಗ ಬಿಜೆಪಿಯ ಡಾ.ಕೆ.ಸುಧಾಕರ್ಗೆ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ತೀವ್ರ ಪೈಪೋಟಿ ನೀಡುತ್ತಿದ್ದಾರೆ.
ರಕ್ಷಾ ರಾಮಯ್ಯ ಮತ್ತು ಕೆ.ಸುಧಾಕರ್ ಸ್ಪರ್ಧಿಸುವ ಚಿಕ್ಕಬಳ್ಳಾಪುರ ಕ್ಷೇತ್ರ ಈ ಬಾರಿ ಯಾರ ತೆಕ್ಕೆಗೆ.?
2023ರ ವಿಧಾನಸಭಾ ಚುನಾವಣೆಯಲ್ಲಿ ಕೊಟ್ಟ ಮಾತಿನಂತೆ ಜಾರಿಯಾಗಿರುವ ಗ್ಯಾರಂಟಿ ಯೋಜನೆಗಳ ಜನಪ್ರಿಯತೆ, ಯಶಸ್ಸಿನ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್, ಮಾಜಿ ಸಚಿವ ಎಂ.ಆರ್.ಸೀತಾರಾಮ್ ಅವರ ಪುತ್ರ ಎಂ.ಎಸ್.ರಕ್ಷಾ ರಾಮಯ್ಯ ಅವರನ್ನು ಕಣಕ್ಕಿಳಿಸಿದೆ. ಬಿಜೆಪಿ ಮಾಜಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರನ್ನು ಸ್ಪರ್ಧೆಗಿಳಿಸಿದೆ. ಅಖಾಡದಲ್ಲಿ ಇನ್ನೂ 27 ಮಂದಿ ಕಣದಲ್ಲಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಅವರು ಚುನಾವಣಾ ರಾಜಕೀಯಕ್ಕೆ ಹೊಸ ಮುಖ. ಆದರೆ, ಶ್ರೀಮಂತ ಮತ್ತು ಪ್ರಭಾವಿ ರಾಜಕೀಯ ಕುಟುಂಬ, ಎಂ ಎಸ್ ರಾಮಯ್ಯ ಮನೆತನದಿಂದ ಬಂದವರು. ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಚಿಕ್ಕಬಳ್ಳಾಪುರ, ದೇವನಹಳ್ಳಿ ಮತ್ತು ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರಗಳಲ್ಲಿ ಇವರು ಭಾರೀ ಪ್ರಭಾವವನ್ನು ಹೊಂದಿದೆ. ಜನರ ಅಭಿಮಾನಕ್ಕೆ ಪಾತ್ರವಾಗಿದೆ.ರಕ್ಷಾ ರಾಮಯ್ಯ ಸೇರಿರುವ ಬಲಿಜ ಸಮುದಾಯದ ಸದಸ್ಯರು ಬಿಜೆಪಿಯ ಕಟ್ಟಾ ಬೆಂಬಲಿಗರು ಎಂದೇ ಪರಿಗಣಿಸಲಾಗಿದೆ. ಆದರೆ ಈ ಬಾರಿ ಅವರೆಲ್ಲಾ ತಮ್ಮದೆ ಸಮುದಾಯದ ರಕ್ಷಾ ರಾಮಯ್ಯ ಹಿಂದೆ ನಿಲ್ಲುವ ಸಾಧ್ಯತೆ ದಟ್ಟವಾಗಿದೆ. ಜೊತೆಗೆ ಕ್ಷೇತ್ರದಲ್ಲಿ ಮುಸ್ಲಿಮರು, ಪರಿಶಿಷ್ಟ ಜಾರಿ ಮತ್ತು ಪರಿಶಿಷ್ಟ ಪಂಗಡ ಮತ್ತು ಇತರ ಸೂಕ್ಷ್ಮ ಸಮುದಾಯಗಳ ಗಣನೀಯ ಜನಸಂಖ್ಯೆಯನ್ನು ಹೊಂದಿದೆ ಇವರೆಲ್ಲಾ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡಲಿದ್ದಾರೆ.
ಚಿಕ್ಕಬಳ್ಳಾಪುರ ವ್ಯಾಪ್ತಿಯ ಗ್ರಾಮೀಣ ಮತದಾರರು ಕಾಂಗ್ರೆಸ್ನತ್ತ ಒಲವು ತೋರುತ್ತಿದ್ದಾರೆ. ಗ್ರಾಮೀಣ ಭಾಗದ ಮತಗಳು ಹೆಚ್ಚಾಗಿರುವುದಿಂದ ರಕ್ಷಾ ರಾಮಯ್ಯ ಅವರಿಗೆ ಅನುಕೂಲವಾಗಲಿದೆ. ಆದರೆ, ಯಲಹಂಕ ಮತ್ತು ದೊಡ್ಡಬಳ್ಳಾಪುರದಂತಹ ನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಮೋದಿ ಅಲೆ ಕಾಣಿಸುತ್ತಿದೆ.ಕಳೆದ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನ ಪ್ರದೀಪ್ ಈಶ್ವರ್ ಅವರ ಕೈಯಲ್ಲಿ ಸೋತ ನಂತರ, ಒಕ್ಕಲಿಗರಾದ ಸುಧಾಕರ್ ಕೂಡ ತಮ್ಮ ಸಮುದಾಯವನ್ನು ಮತ್ತೆ ತಮ್ಮತ್ತ ಸೆಳೆದಿದ್ದಾರೆ. ಜೊತೆಗೆ ಜೆಡಿಎಸ್ ಜೊತೆ ಮೈತ್ರಿ ಇರುವ ಕಾರಣ ಅವರ ಮತಗಳು ತನಗೆ ಬರುವುದರಿಂದ ತನ್ನ ಗೆಲುವು ಖಚಿತ ಎಂದು ವಿಶ್ವಾಸದಲ್ಲಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಕುರುಬರ ಸಂಖ್ಯೆಯು ಹೆಚ್ಚಿದೆ. ಸಿದ್ದರಾಮಯ್ಯ ಕಾರಣಕ್ಕೆ ಸುಧಾಕರ್ಗೆ ಮತ ಹಾಕಿದ್ದೆ ಎಂದು ಹೇಳುವ ಅನೇಕ ಮಂದಿಯಿದ್ದಾರೆ. ಈ ಬಾರಿಯ ಚುನಾವಣೆ ಬಳಿಕವು ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರಿಯುವ ನಿರೀಕ್ಷೆಯಲ್ಲಿದ್ದಾರೆ. ಆದ್ದರಿಂದ, ಅವರ ಕುರುಬ ಸಮುದಾಯವು ರಕ್ಷಾ ರಾಮಯ್ಯ ಅವರನ್ನು ಬೆಂಬಲಿಸಲು ನಿರ್ಧರಿಸಿದೆ.
ಇನ್ನು, ರಕ್ಷಾ ರಾಮಯ್ಯ ಅವರ ಗೆಲುವಿಗೆ ಪ್ರಮುಖವಾಗಿ ಸಹಾಯಕವಾಗುವ ಅಂಶ ಅವರ ಕುಟುಂಬದ ವರ್ಚಸ್ಸು. ಕಾಂಗ್ರೆಸ್ಗೆ ಕ್ಷೇತ್ರದಲ್ಲಿ ಸವಾಲುಗಳು ದೊಡ್ಡದಾಗಿಯೇ ಇವೆ. ಆದರೆ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಜಿಲ್ಲೆಯ ರಾಜಕೀಯದೊಂದಿಗೆ ರಾಮಯ್ಯ ಕುಟುಂಬದ ಒಡನಾಟ ಅದನ್ನು ಮೀರಿಸಲು ಸಹಾಯ ಮಾಡುತ್ತದೆ.
1977 ರಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬಂದಾಗ ಕಾಂಗ್ರೆಸ್ನಿಂದ ಒಕ್ಕಲಿಗ ಸಮುದಾಯದ ಎಂ.ವಿ. ಕೃಷ್ಣಪ್ಪ ಸ್ಪರ್ಧಿಸಿ ಗೆದ್ದಿದ್ದರು. ಇದಾದ ನಂತರ 1980ರಲ್ಲಿ ಆರ್ಯವೈಶ್ಯ ಜನಾಂಗಕ್ಕೆ ಸೇರಿದ ಎಸ್.ಎನ್.ಪ್ರಸನ್ನ ಕುಮಾರ್ ಕಾಂಗ್ರೆಸ್ನಿಂದ ಜಯ ಗಳಿಸಿದ್ದರು. ಆನಂತರ 1984, 1989, 1991ರಲ್ಲಿ ಬ್ರಾಹ್ಮಣ ಸಮುದಾಯದ ವಿ.ಕೃಷ್ಣರಾವ್ ಕಾಂಗ್ರೆಸ್ನಿಂದ 3 ಬಾರಿ ಸಂಸದರಾಗಿದ್ದರು. 1996ರಲ್ಲಿ ಜನತಾದಳದಿಂದ ಸ್ಪರ್ಧಿಸಿ ಸಂಸದರಾಗಿದ್ದ ಈಡಿಗ ಸಮುದಾಯದ ಆರ್.ಎಲ್.ಜಾಲಪ್ಪ , ನಂತರ 1998, 1999, 2004ರಲ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸಂಸದರಾಗಿದ್ದರು. 2009 ಮತ್ತು 2014ರಲ್ಲಿ ದೇವಾಡಿಗ ಸಮುದಾಯಕ್ಕೆ ಸೇರಿದ ವೀರಪ್ಪ ಮೊಯಿಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿ ಗೆದ್ದಿದ್ದರು. 2019ರಲ್ಲಿನಡೆದ ಸಾರ್ವತ್ರಿಕ ಚುನಾವಣೆಯಲ್ಲಿಬಿ.ಎನ್.ಬಚ್ಚೇಗೌಡ ಅವರು ಚಿಕ್ಕಬಳ್ಳಾಪುರದಿಂದ ಬಿಜೆಪಿಯ ಮೊದಲ ಸಂಸದರಾದರು. ಒಕ್ಕಲಿಗ ಸಮುದಾಯದ ಬೆಂಬಲ ಅವರ ಗೆಲುವಿಗೆ ಪ್ರಮುಖ ಕಾರಣವಾಗಿತ್ತು.