ಯುವ ನಟ ಸುಧೀರ್ ವರ್ಮಾ ಆತ್ಮಹತ್ಯೆಗೆ ಶರಣು
ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಯುವ ನಟ ಸುಧೀರ್ ವರ್ಮಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೋಮವಾರ (ಜ. 23) ತಮ್ಮ ವೈಜಾಗ್ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂಲಗಳ ಪ್ರಕಾರ ಕೆಲವು ವೈಯಕ್ತಿಕ ಸಮಸ್ಯೆಗಳಿಂದ ನಟ ಸುಧೀರ್ ವರ್ಮಾ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.
ಸುಧೀರ್ ವರ್ಮಾ ಅವರು 2013ರಲ್ಲಿ ಸ್ವಾಮಿ ರಾ ರಾ ಚಿತ್ರದಿಂದ ತೆಲುಗು ಚಿತ್ರರಂಗಕ್ಕೆ ಪ್ರವೇಶ ಮಾಡಿದರು. ಬಳಿಕ 2016ರಲ್ಲಿ ಕುಂದನಪು ಬೊಮ್ಮ ಚಿತ್ರದಲ್ಲಿ ಮುಖ್ಯ ಪಾತ್ರ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಸದ್ಯ ಅವರ ಸಾವಿನ ಸುದ್ದಿ ತಿಳಿದ ಇಡೀ ಚಿತ್ರರಂಗ, ಸ್ನೇಹಿತರು ಮತ್ತು ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.
ವರ್ಮಾ ಸಾವಿನ ಸುದ್ದಿಯನ್ನು ಸಹನಟ ಸುಧಾಕರ ಕೋಮಕುಲ ಅವರು ಟ್ವೀಟ್ ಮಾಡುವ ಮೂಕಲ ಖಚಿತಪಡಿಸಿದ್ದಾರೆ. ಸುಧೀರ್ ಒಳ್ಳೆಯ ವ್ಯಕ್ತಿತ್ವ ಹೊಂದಿರುವಂತಹ ವ್ಯಕ್ತಿ. ನಿಮ್ಮೊಂದಿಗೆ ಕೆಲಸ ಮಾಡುವುದು ತುಂಬಾ ಸಂತೋಷದಾಯಕ ಸಹೋದರ. ನೀವು ಇನ್ನಿಲ್ಲ ಎಂಬ ಸತ್ಯವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಓಂ ಶಾಂತಿ ಎಂದು ಟ್ವೀಟ್ ಮಾಡಿದ್ದಾರೆ.