ಮೋದಿ ಪದೇ ಪದೇ ರಾಜ್ಯಕ್ಕೆ ಬರುವುದರಿಂದ JDS, ಕಾಂಗ್ರೆಸ್‍ಗೆ ಭಯ ಶುರುವಾಗಿದೆ: ಶಂಕರ್ ಪಾಟೀಲ್ ಮುನೇನಕೊಪ್ಪ

ರಾಯಚೂರು: ಪ್ರಧಾನಿ ನರೇಂದ್ರ ಮೋದಿ (Narendra Modi) ಪದೇ ಪದೇ ರಾಜ್ಯಕ್ಕೆ ಬರುವುದರಿಂದ ಜೆಡಿಎಸ್ (JDS) ಮತ್ತು ಕಾಂಗ್ರೆಸ್‍ನವರಿಗೆ (Congress) ಭಯ ಶುರುವಾಗಿದೆ ಎಂದು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ವ್ಯಂಗ್ಯವಾಡಿದ್ದಾರೆ.
ರಾಯಚೂರಿನ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ರಾಷ್ಟ್ರಧ್ವಜಾರೋಹಣ ಬಳಿಕ ಮಾತನಾಡಿದ ಮುನೇನಕೊಪ್ಪ, ಕರ್ನಾಟಕಕ್ಕೆ ಮೋದಿಯವರು ಬರುವುದರಿಂದ ರಾಜ್ಯಕ್ಕೆ ಒಳಿತಾಗಲಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಸರ್ಕಾರ ಇದ್ರೆ ಹೆಚ್ಚಿನ ಅಭಿವೃದ್ಧಿಯಾಗುತ್ತೆ. ಇದು ಜನರಲ್ಲಿ ಇರುವ ನಿರೀಕ್ಷೆಯಾಗಿದೆ. ಸಿದ್ದರಾಮಯ್ಯ (Siddaramaiah), ಡಿಕೆಶಿ (D.K Shivakumar), ಕುಮಾರಸ್ವಾಮಿ (H.D Kumaraswamy) ಮಾತನಾಡುತ್ತಾರೆ. ಕುಮಾರಸ್ವಾಮಿ ಈ ರಾಜ್ಯದ ಮಾಜಿ ಮುಖ್ಯಮಂತ್ರಿ, ಅವರು ಮೋದಿಯವರ ಬಗ್ಗೆ ಮಾತನಾಡುವುದು ಸರಿಯಲ್ಲ. ಮೋದಿ ಬಂದ್ರೆ ಆ ಭಾಗದಲ್ಲಿ ಬಿಜೆಪಿ (BJP) ಗೆಲ್ಲುತ್ತದೆ ಅನ್ನೋ ಮಾತು ನೂರಕ್ಕೆ ನೂರು ಸತ್ಯ. ರಾಜ್ಯದಲ್ಲಿ ಅವರೆಷ್ಟೇ ಪ್ರಯತ್ನ ಮಾಡಲಿ, ಮುಂದಿನ ದಿನಗಳಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದಿದ್ದಾರೆ.
ರಮೇಶ್ ಜಾರಕಿಹೊಳಿ ಕೇಸ್ ಸಿಬಿಐ (CBI) ತನಿಖೆ ವಿಚಾರವಾಗಿ ಮಾತನಾಡಿದ ಮುನೇನಕೊಪ್ಪ, ಅದು ರಮೇಶ್ ಜಾರಕಿಹೊಳಿಯ ವೈಯಕ್ತಿಕ ವಿಚಾರ. ರಮೇಶ್ ಜಾರಕಿಹೊಳಿ ಮತ್ತು ಡಿ.ಕೆ ಶಿವಕುಮಾರ್‌ಗೆ ಅನೇಕ ವಿಚಾರದಲ್ಲಿ ಆಂತರಿಕ ಭಿನ್ನಾಭಿಪ್ರಾಯಗಳಿವೆ. ಅವರಿಬ್ಬರೂ ಈ ಹಿಂದೆ ಒಂದೇ ಪಾರ್ಟಿಯಲ್ಲಿದ್ದರು. ಸರ್ಕಾರ ಕೆಡವಿದ ಮೇಲೆ ಅವರ ನಡುವೆ ದ್ವೇಷ ಶುರುವಾಗಿದೆ. ಅವರ ಸಿಡಿ ಕೇಸ್ ಬಗ್ಗೆ ನನಗೆ ಏನು ಗೊತ್ತಿಲ್ಲ. ತನಿಖೆ ನಡೆಸಲಿ ಎನ್ನುವುದು ಕೂಡ ಜನರ ಅಭಿಪ್ರಾಯ ಎಂದು ತಿಳಿಸಿದ್ದಾರೆ.