ಮೊಬೈಲ್ ನಲ್ಲಿ ಅತ್ತೆಯನ್ನೇ ಹೊಡೆದು ಕೊಂದ ಸೊಸೆ; ಕುಸಿದು ಬಿದ್ದು ಸಾವು ಎಂದು ಕಥೆ..!
ಮಡಿಕೇರಿ: ಅತ್ತೆಯನ್ನು ಕೊಲೆಗೈದು ಬಳಿಕ ಸಹಜ ಸಾವು ಎಂದು ಬಿಂಬಿಸಿದ್ದ ಆರೋಪದಡಿ ಸೊಸೆಯನ್ನು ಮಡಿಕೇರಿ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಮಡಿಕೇರಿ (Madikeri) ತಾಲೂಕಿನ ಮರಗೋಡಿನ ನಿವಾಸಿ ಪೂವಮ್ಮ (73) ಅವರನ್ನು ಕೊಲೆಗೈದ ಸೊಸೆ ಬಿಂದು (26) ಬಂಧಿತ ಆರೋಪಿ.
ಏನಿದು ಘಟನೆ?
ಮರಗೋಡಿನಲ್ಲಿ ಅತ್ತೆ ಪೂವಮ್ಮ, ವೃತ್ತಿಯಲ್ಲಿ ಶಿಕ್ಷಕರಾಗಿರುವ ಪತಿ ಪ್ರಸನ್ನ, ಒಂದು ವರ್ಷದ ಪುತ್ರಿ ಜೊತೆಗೆ ಬಿಂದು ವಾಸವಾಗಿದ್ದು. ಅತ್ತೆ-ಸೊಸೆ ನಡುವೆ ಹಲವು ವರ್ಷಗಳಿಂದ ಮನಸ್ತಾಪ ಇತ್ತು. ಇಬ್ಬರ ನಡುವೆ ಕಲಹವೂ ಆಗಾಗ್ಗೆ ನಡೆಯುತ್ತಿತ್ತು ಎನ್ನಲಾಗಿದೆ. ಏ.15 ರಂದು ಪತಿ ಮೌಲ್ಯಮಾಪನ ಕರ್ತವ್ಯಕ್ಕಾಗಿ ಮಡಿಕೇರಿಗೆ ತೆರಳಿದ್ದ ಸಂದರ್ಭ ಪೂವಮ್ಮ ಕುಸಿದು ಬಿದ್ದಿರುವುದಾಗಿ ಪತಿ ಪ್ರಸನ್ನ ಅವರಿಗೆ ಬೆಳಗ್ಗೆ ಬಿಂದು ಕರೆ ಮಾಡಿ ತಿಳಿಸಿದ್ದಾಳೆ. ಅವರು ಬಂದು ನೋಡುವಷ್ಟರಲ್ಲಿ ಮೃತಪಟ್ಟಿರುವುದು ದೃಢಪಟ್ಟಿದೆ. ನಂತರ ಮೃತ ಪೂವಮ್ಮ ಅವರನ್ನು ಅಗ್ನಿಸ್ಪರ್ಶದ ಮೂಲಕ ಅಂತ್ಯಸಂಸ್ಕಾರವನ್ನು ನೆರವೇರಿಸಲಾಗಿದೆ. ಪೂವಮ್ಮ ಹೃದ್ರೋಗ ಕಾಯಿಲೆಯಿಂದ ಬಳಲುತ್ತಿದ್ದ ಹಿನ್ನೆಲೆ ಆ ಕ್ಷಣದಲ್ಲಿ ಸಾವಿನ ಕುರಿತು ಹೆಚ್ಚಿನ ಅನುಮಾನವೂ ಕುಟುಂಬಸ್ಥರಲ್ಲಿ ಮೂಡಿರಲಿಲ್ಲ. ಅಂತ್ಯಸಂಸ್ಕಾರದ ಬಳಿಕ ಗ್ರಾಮದಲ್ಲಿ ಸಾವಿನ ಕುರಿತು ಊಹಾಪೋಹಗಳು ಕೇಳಿ ಬರುತ್ತಿದ್ದವು.
ದಿನಕಳೆದಂತೆ ಪೂವಮ್ಮ ಸಾವಿನ ಬಗ್ಗೆ ಕುಟುಂಬಸ್ಥರಿಗೆ ತೀವ್ರ ಅನುಮಾನ ಮೂಡಿದೆ. ಅದರಲ್ಲೂ ಪತಿ ಪ್ರಸನ್ನ ಅವರಿಗೆ ಘಟನೆ ನಡೆದ ಸ್ಥಳ, ದಿಂಬಿನ ಕವರ್, ಬಟ್ಟೆಯ ಮೇಲೆ ರಕ್ತದ ಕಲೆ, ಮುಖದಲ್ಲಿ ಕೆಲವೊಂದು ಪರಚಿದ ಕಲೆಗಳು ಗಮನಿಸಿ ಸಂಶಯ ಮತ್ತಷ್ಟು ಹೆಚ್ಚಾಗಿದೆ. ಇದರೊಂದಿಗೆ ಬಿಂದು ನಡವಳಿಕೆಯಲ್ಲಿನ ಬದಲಾವಣೆಯೂ ಹೆಚ್ಚಿನ ಅನುಮಾನಕ್ಕೆ ಎಡೆಮಾಡಿ ಕೊಟ್ಟಿದೆ. ಆದರೆ, ಘಟನೆ ನಡೆದ ದಿನದಂದು ಪೊಲೀಸರಿಗೆ ಮಾಹಿತಿ ನೀಡುವುದಾಗಲಿ ಯಾರೂ ಮಾಡಿರುವುದಿಲ್ಲ.
ಮೊಬೈಲ್‌ನಿಂದ ಹಲ್ಲೆ
ಏ.28 ರಂದು ಅತ್ತೆಗೆ ಬೆಳಗ್ಗಿನ ಉಪಾಹಾರ ಮಾಡಲು ಬರುವಂತೆ ಬಿಂದು ಕರೆದಿದ್ದಾಳೆ. ಈ ಸಂದರ್ಭ ತಿಂಡಿ ಮಾಡಲು ನಿರಾಕರಿಸಿದ ಹಿನ್ನೆಲೆ ವಾಗ್ವಾದ ಉಂಟಾಗಿದೆ. ಈ ಸಂದರ್ಭ ಕೋಪಗೊಂಡ ಬಿಂದು ಕೈಯಲ್ಲಿದ್ದ ಮೊಬೈಲ್‌ನಿಂದ ತಲೆಯ ಹಿಂಭಾಗಕ್ಕೆ ಹಲ್ಲೆಗೈದಿದ್ದಾಳೆ. ಹಾಸಿಗೆ ಮೇಲೆ ಕುಸಿದು ಬಿದ್ದ ಪೂವಮ್ಮ ಅವರನ್ನು ನೋಡದೆ ಹಾಗೆಯೇ ತೆರಳಿದ್ದಾಳೆ. ತೀವ್ರ ರಕ್ತಸ್ರಾವವಾದ ಪರಿಣಾಮ ಪೂವಮ್ಮ ಕೊನೆಯುಸಿರೆಳೆದಿದ್ದಾರೆ. ನಂತರ ಸಾವಿನ ವಿಚಾರ ತಿಳಿದ ಬಿಂದು ಮನೆಯಲ್ಲಿ ಹರಿದಿದ್ದ ರಕ್ತವನ್ನು ಶುಚಿಮಾಡಿದ್ದಲ್ಲದೆ, ಹಾಸಿಗೆ ಮೇಲಿದ್ದ ಬೆಡ್‌ಶೀಟ್ ಸೇರಿದಂತೆ ಕೆಲ ಬಟ್ಟೆಯನ್ನು ಒಗೆಯಲು ಶೇಖರಿಸಿಡುವ ಬಾಸ್ಕೆಟ್‌ಗೆ ಹಾಕಿ ನೆಲಕ್ಕೆ ಹಾಸಿದ್ದ ಮ್ಯಾಟ್‌ನ್ನು ಬದಲಾಯಿಸಿ ಆಕೆ ಧರಿಸಿದ್ದ ಬಟ್ಟೆಯನ್ನೂ ಬದಲಾಯಿಸಿಕೊಂಡು ಪ್ರಕರಣವನ್ನು ಮರೆಮಾಚುವ ಯತ್ನಕ್ಕೆ ಮುಂದಾಗಿದ್ದಳು ಎಂದು ಪತಿ ಪ್ರಸನ್ನ ದೂರಿನಲ್ಲಿ ಉಲ್ಲೇಖಿಸಿ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ಪೊಲೀಸರು ವಿಚಾರಣೆ ನಡೆಸಿದ ಸಂದರ್ಭ ತಪ್ಪೊಪ್ಪಿಕೊಂಡಿರುವ ಬಿಂದು ವಿರುದ್ಧ ಪ್ರಕರಣ ದಾಖಲಿಸಿಕೊಂಡು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಇದೀಗ ಆರೋಪಿತೆ ಮಡಿಕೇರಿ ಬಂಧಿಖಾನೆಯಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾಳೆ.