ಮೊಟ್ಟೆಯಿಂದ ತಯಾರಿಸುವ ಮೇಯನೇಸ್ ಉತ್ಪಾದನೆ ನಿಷೇಧಿಸಿದ ಕೇರಳ ಸರಕಾರ
ತಿರುವನಂತಪುರಂ: ಹಸಿ ಮೊಟ್ಟೆಯ ಮೇಯನೇಸ್ ಉತ್ಪಾದನೆ, ಸಂಗ್ರಹಣೆ ಮತ್ತು ಮಾರಾಟವನ್ನು ನಿಷೇಧಿಸಿ ಕೇರಳ ಸರ್ಕಾರದ ಆಹಾರ ಸುರಕ್ಷತಾ ಇಲಾಖೆ ಆದೇಶ ಹೊರಡಿಸಿದೆ. ಹಸಿ ಮೊಟ್ಟೆಗಳಿಂದ ತಯಾರಿಸುವ ಮೇಯನೇಸ್‌ನ್ನು ಶೇಖರಿಸಿಟ್ಟು ತಿನ್ನುವುದು ಆರೋಗ್ಯದ ಸುರಕ್ಷತೆಯ ದೃಷ್ಟಿಯಿಂದ ತುಂಬಾ ಅಪಾಯಕಾರಿ ಅನ್ನೋ ಕಾರಣಕ್ಕೆ ಎಫ್ಎಸ್ಎಸ್ಎ ಕಾಯ್ದೆಯಡಿ ತುರ್ತಾಗಿ ಆದೇಶ ಹೊರಡಿಸಲಾಗಿದೆ ಎಂದು ವರದಿಯಾಗಿದೆ. ಆದೇಶವು ಪಾಶ್ಚರೀಕರಿಸಿದ ಮೊಟ್ಟೆಗಳಿಂದ ತಯಾರಿಸಿದ ತರಕಾರಿ ಮೇಯನೇಸ್ ಗೆ ವಿನಾಯಿತಿ ನೀಡುತ್ತದೆ.
ಇದರ ಬೆನ್ನಲ್ಲೇ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಮೇಯನೇಸ್ ಅನ್ನು ತಕ್ಷಣದಿಂದಲೇ ನಿಷೇಧಿಸಲಾಗಿದೆ ಎಂದು ಘೋಷಿಸಿದ್ದಾರೆ. ಹೋಟೆಲ್,ರೆಸ್ಟೊರೆಂಟ್,ಬೇಕರಿ,ಬೀದಿಬದಿ ವ್ಯಾಪಾರಿಗಳು ಮತ್ತು ಕ್ಯಾಟರಿಂಗ್ ವಲಯದ ಸಂಘಟನೆಗಳು ಹಸಿ ಮೊಟ್ಟೆಯಿಂದ (Raw Egg) ತಯಾರಿಸು ಮೇಯನೇಸ್ ನಿಷೇಧಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿವೆ. ಸ್ಯಾಂಡ್‌ವಿಚ್‌ಗಳು ಮತ್ತು ಷವರ್ಮಾಗಳಲ್ಲಿ ಮೇಯನೇಸ್ ಅನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಸರಿಯಾಗಿ ಪಾಶ್ಚರೀಕರಿಸದೆ ಮೇಯನೇಸ್ ತಯಾರಿಸಿ ಸಂಗ್ರಹಿಸಿದರೆ ಹಲವು ರೋಗ (Disease)ಗಳನ್ನು ಉಂಟುಮಾಡುತ್ತದೆ. ಇದು ಆರೋಗ್ಯವಂತ ವ್ಯಕ್ತಿಯ ಮೇಲೂ ಪರಿಣಾಮ ಬೀರಬಹುದು.
ಹಸಿ, ಬೇಯಿಸದ ಮೊಟ್ಟೆಗಳಿಂದ ತಯಾರಿಸಿದ ಮೇಯನೇಸ್ ಉತ್ಪಾದನೆ ನಿಷೇಧಿಸಿದ ಕೇರಳ
ಮೇಯನೇಸ್ ಹೊಂದಿರುವ ವಿವಿಧ ಆಹಾರಗಳನ್ನು ಸೇವಿಸಿದ ಜನರು ಅಸ್ವಸ್ಥರಾಗಿರುವ ಬಗ್ಗೆ ಈ ಹಿಂದೆಯೇ ಹಲವು ದೂರುಗಳು ದಾಖಲಾಗಿತ್ತು. ಲ್ಯಾಬ್ ವರದಿಗಳಿಂದ ಇಂತಹ ಮೇಯನೇಸ್ ನಲ್ಲಿ ರೋಗಕಾರಕಗಳು ಕಂಡುಬಂದಿರುವ ಬಗ್ಗೆ ವರದಿಯಾಗಿವೆ. ಹೀಗಾಗಿ ಹಸಿ, ಬೇಯಿಸದ ಮೊಟ್ಟೆಗಳಿಂದ ತಯಾರಿಸಿದ ಮೇಯನೇಸ್ ಉತ್ಪಾದನೆಯನ್ನು ಕೇರಳ ನಿಷೇಧಿಸಿದೆ (Ban). ಆಹಾರ ಸುರಕ್ಷತಾ ಇಲಾಖೆಯು ಕಳೆದ ಕೆಲವು ದಿನಗಳಿಂದ ಕೇರಳ ರಾಜ್ಯಾದ್ಯಂತ ಆಹಾರ ಸೇವಿಸುವ ಮನೆಗಳ ಮೇಲೆ ಭಾರಿ ದಾಳಿ ನಡೆಸುತ್ತಿದ್ದು, ಮೂಲ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದೆ.
ಹೊರಬಿದ್ದಿರುವ ಮತ್ತೊಂದು ಹೊಸ ಮಾರ್ಗಸೂಚಿ (Guidelines) ಏನೆಂದರೆ, ಇನ್ನು ಮುಂದೆ ಈಟಿಂಗ್ ಔಟ್‌ಲೆಟ್‌ಗಳಿಂದ ಎಲ್ಲಾ ಆಹಾರ ಪೊಟ್ಟಣಗಳು ತಯಾರಿಸುವ ದಿನಾಂಕ ಮತ್ತು ವಿತರಣೆಯ ಸಮಯ ಮತ್ತು ಅದನ್ನು ಸೇವಿಸುವ ಮೊದಲು ಸ್ಟಿಕ್ಕರ್ ಅನ್ನು ಅಂಟಿಸಬೇಕು ಎಂಬುದಾಗಿದೆ. ದೂರುಗಳ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಹೊರಡಿಸಲಾಗುವುದು ಎಂದು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಭರವಸೆ ನೀಡಿದ್ದರು.
ಸರಿಯಾಗಿ ಸಂಗ್ರಹಿಸದ ಮೇಯನೇಸ್‌ನಲ್ಲಿ ಬ್ಯಾಕ್ಟೀರಿಯಾ ಸಂಗ್ರಹ
ಕಳೆದ ಎರಡು ವಾರಗಳಲ್ಲಿ ಕೇರಳ ರಾಜ್ಯಾದ್ಯಂತ ಕನಿಷ್ಠ ಎರಡು ಡಜನ್‌ಗೂ ಅಧಿಕ ಶಂಕಿತ ಪುಡ್ ಪಾಯಿಸನಿಂಗ್ ಪ್ರಕರಣಗಳು ವರದಿಯಾಗಿವೆ. ಅದರಲ್ಲಿ ಹೆಚ್ಚಿನವು ಮಯೋನೆಸ್ ಸೇವನೆಯಿಂದಾಗಿ ಉಂಟಾಗಿದೆ. ಎಣ್ಣೆ, ಮೊಟ್ಟೆಯ ಹಳದಿ ಲೋಳೆ ಮತ್ತು ಆಮ್ಲೀಯ ದ್ರವ (ನಿಂಬೆ ರಸ ಅಥವಾ ವಿನೆಗರ್) ಇದರ ತಯಾರಿಗೆ ಬಳಸಲಾಗುತ್ತದೆ. ಮೇಯನೇಸ್ ನ್ನು ಹೆಚ್ಚಾಗಿ ಸ್ಯಾಂಡ್‌ವಿಚ್‌ಗಳು, ಬರ್ಗರ್‌ಗಳು, ಸಲಾಡ್‌ಗಳು ಮತ್ತು ಫ್ರೆಂಚ್ ಫ್ರೈಗಳಲ್ಲಿ ಬಳಸಲಾಗುತ್ತದೆ. ಸರಿಯಾಗಿ ಸಂಗ್ರಹಿಸದ ಮೇಯನೇಸ್ ಬ್ಯಾಕ್ಟೀರಿಯಾದ ತಾಣವಾಗಿರಬಹುದು ಎಂದು ಆಹಾರ ತಜ್ಞರು ಹೇಳಿದ್ದಾರೆ. ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಬಳಸುವ ಹಸಿ ಮೊಟ್ಟೆಯ ಬಿಳಿಭಾಗವು ಹಳೆಯದಾದರೆ, ಅವು ಹಾನಿಕಾರಕ ಬ್ಯಾಕ್ಟೀರಿಯಾವನ್ನು ಉತ್ಪಾದಿಸಲು ಪ್ರಾರಂಭಿಸುತ್ತವೆ ಎಂದು ಅವರು ಹೇಳಿದರು.
ಇದಲ್ಲದೆ, ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾಗಳು ಹೆಚ್ಚಾಗಿ ಬೇಯಿಸದ ಮೊಟ್ಟೆಗಳಲ್ಲಿ ಕಂಡುಬರುತ್ತವೆ.ಇನ್ನು ತರಕಾರಿ ‘ಮಯೋನೆಸ್’ ಗಳಿಗೆ ವಿನಾಯಿತಿ ನೀಡಲಾಗಿದೆ. ಇನ್ನು ಎಲ್ಲಾ ಆಹಾರ ಪೊಟ್ಟಣಗಳ ಮೇಲೆ ಆಹಾರ ತಯಾರಿಸುವ ದಿನಾಂಕ ಮತ್ತು ವಿತರಣೆಯ ಸಮಯ ಮತ್ತು ಅದರ ಬಳಕೆ ಯೋಗ್ಯವಾದ ದಿನಾಂಕವನ್ನು ನಮೂದಿಸುವುದು ಕೂಡ ಕಡ್ಡಾಯವಾಗಿದೆ.