ಮೇ 12 ರ ಒಳಗಾಗಿ SSLC ಪಲಿತಾಂಶ ಪ್ರಕಟಣೆ ನಿರೀಕ್ಷೆ!
ಬೆಂಗಳೂರು (ಮೇ.06): ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಪೂರ್ಣಗೊಂಡಿದ್ದು, ಇನ್ನು 3-4 ದಿನಗಳಲ್ಲಿ ಫಲಿತಾಂಶದ ಕಂಪ್ಯೂಟರೀಕರಣ ನಡೆಯಲಿದೆ. ಅಂದುಕೊಂಡಂತೆ ಎಲ್ಲವೂ ನಡೆದರೆ ಮೇ 10ರ ಮತದಾನಕ್ಕೂ ಮೊದಲೇ, ಸಾಧ್ಯವಾಗದಿದ್ದರೆ ಮತದಾನದ ನಂತರ ಫಲಿತಾಂಶ ಪ್ರಕಟಿಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಿರ್ಧರಿಸಿದೆ. ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಮೇ 10ಕ್ಕೆ ಮೊದಲೇ ನೀಡಲಾಗುತ್ತದೆಯೇ? ಅಥವಾ ಮತದಾನ ದಿನದ ನಂತರ ನೀಡಲಾಗುವುದೇ ಎಂಬುದನ್ನು ಇನ್ನು ಒಂದೆರಡು ದಿನಗಳಲ್ಲಿ ಅಂತಿಮಗೊಳಿಸಿ ಅಧಿಕೃತವಾಗಿ ಪ್ರಕಟಿಸುವುದಾಗಿ ಮಂಡಳಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಧಿಕಾರಿಗಳು ಹೇಳುವ ಪ್ರಕಾರ, ಮೌಲ್ಯಮಾಪನ ಕಾರ್ಯ ಶುಕ್ರವಾರಕ್ಕೆ ಪೂರ್ಣಗೊಂಡಿದೆ. ಮಕ್ಕಳ ಫಲಿತಾಂಶವನ್ನು ಕಂಪ್ಯೂಟರ್‌ನಲ್ಲಿ ದಾಖಲಿಸುವ ಕೆಲಸಕ್ಕೆ ಇನ್ನು ಮೂರು- ನಾಲ್ಕು ದಿನ ಬೇಕಾಗುತ್ತದೆ. ತಂಡಗಳನ್ನು ಮಾಡಿಕೊಂಡು ಹಗಲು-ರಾತ್ರಿ ಕೆಲಸ ಮಾಡುತ್ತಿದ್ದೇವೆ. ಮತದಾನದ ದಿನಕ್ಕೂ ಮೊದಲೇ ಫಲಿತಾಂಶ ಪ್ರಕಟಿಸಬೇಕೆಂಬುದು ನಮ್ಮ ಇಚ್ಛೆ.
ಇದಕ್ಕಾಗಿ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದೇವೆ. ಅಂದುಕೊಂಡಂತೆ ನಡೆದರೆ ಮೇ 9ರಂದೇ ಫಲಿತಾಂಶ ನೀಡುತ್ತೇವೆ. ಒಂದು ವೇಳೆ ಇದು ಸಾಧ್ಯವಾಗದೇ ಹೋದರೆ ಮೇ 13ರ ಚುನಾವಣಾ ಫಲಿತಾಂಶಕ್ಕೂ ಮುನ್ನ ಅಂದರೆ ಮೇ 11 ಇಲ್ಲವೇ 12ರಂದು ಫಲಿತಾಂಶ ಪ್ರಕಟಿಸಲಾಗುವುದು ಎಂದು ಮಂಡಳಿಯ ಉನ್ನತ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.