ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!
ಕಾರವಾರ: ಮುರುಡೇಶ್ವರ ದಲ್ಲಿ (Murudeshwar) ನೀರು ಪಾಲಾಗಿ ನಾಲ್ವರು ವಿದ್ಯಾರ್ಥಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಶಿಕ್ಷಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೋಲಾರದಿಂದ (Kolar) ಮುರುಡೇಶ್ವರಕ್ಕೆ ಪ್ರವಾಸ ತೆರಳಿದ್ದವರ ಪೈಕಿ ನಾಲ್ಕು ಜನ ವಿದ್ಯಾರ್ಥಿನಿಯರು ನೀರು ಪಾಲಾದ ಬಳಿಕ ಉತ್ತರ ಕನ್ನಡ (Uttara Kannada) ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ಒಂದೆಡೆ ಮುರುಡೇಶ್ವರ ಕಡಲ ತೀರದಲ್ಲಿ ನಿರ್ಬಂಧ ಹೇರಲಾಗಿದ್ದು, ಇನ್ನೊಂದೆಡೆ ಮುಖ್ಯ ಶಿಕ್ಷಕಿ ಸೇರಿ ಒಟ್ಟು 7 ಶಿಕ್ಷಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಿಕ್ಷಕರ ವಿರುದ್ದ ಪ್ರಕರಣ ದಾಖಲಿಸಲಾಗಿದ್ದು, ನಾಲ್ಕು ವಿದ್ಯಾರ್ಥಿನಿಯರ ಸಾವಿಗೆ ಕಾರಣ, ನಿರ್ಲಕ್ಷ್ಯ ಕುರಿತು ತನಿಖೆ ಕೈಗೊಂಡಿದ್ದಾರೆ.
ಈ ಮಧ್ಯೆ ಪ್ರವಾಸಿಗರಿಗೆ ಜಿಲ್ಲಾಡಳಿತ ಕಡಲ ತೀರಕ್ಕೆ ನಿರ್ಬಂಧ ಹೇರಿದೆ. ಇದೀಗ ಮುರುಡೇಶ್ವರ ಬಿಟ್ಟಿರುವ ಪಾರ್ಥಿವ ಶರೀರಗಳು ಇಂದು (ಡಿ.12) ಕೋಲಾರ ಜಿಲ್ಲಾಧಿಕಾರಿಗಳ ಕಚೇರಿ ಆವರಣಕ್ಕೆ ತಲುಪಲಿದೆ. ಬಳಿಕ ಜಿಲ್ಲಾಡಳಿತದ ವತಿಯಿಂದ ಅಂತಿಮ ನಮನ ಸಲ್ಲಿಸಿ, ನಂತರ ಅವರವರ ಕುಟುಂಬಗಳಿಗೆ ಮೃತದೇಹಗಳನ್ನು ಹಸ್ತಾಂತರಿಸಲಾಗುತ್ತದೆ.
ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ಜಿಲ್ಲಾಡಳಿತ ತಾತ್ಕಾಲಿಕ ನಿರ್ಬಂಧ ವಿಧಿಸಿದೆ. ಮುಂದಿನ ಆದೇಶದವರೆಗೂ ಕಡಲತೀರಕ್ಕೆ ನಿರ್ಬಂಧ ವಿಧಿಸಿ, ಈ ಕುರಿತು ಎಸ್ಪಿ ಎಂ.ನಾರಾಯಣ್ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕೊತ್ತೂರು ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆ ಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ಯಲಾಗಿತ್ತು. ನಿನ್ನೆ ಸಂಜೆ ಸುಮಾರು 54 ವಿದ್ಯಾರ್ಥಿನಿಯರು ಮುರುಡೇಶ್ವರ ಕಡಲ ತೀರದಲ್ಲಿ ಆಟವಾಡಲು ಇಳಿದಿದ್ದರು. ಶಿಕ್ಷಕರು ಮುನ್ನೆಚ್ಚರಿಕೆ ವಹಿಸದೆ ಸಮುದ್ರದಲ್ಲಿ ಮಕ್ಕಳನ್ನು ಆಟವಾಡಲು ಬಿಟ್ಟಿದ್ದರು. ಇದರಿಂದಾಗಿ ಅಲೆಗಳ ಹೊಡೆತಕ್ಕೆ ಸಿಲುಕಿ 7 ವಿದ್ಯಾರ್ಥಿನಿಯರು ಹಾಗೂ ಓರ್ವ ಶಿಕ್ಷಕ ನೀರು ಪಾಲಾಗಿದ್ದರು.
ತಕ್ಷಣೇ ಸ್ಥಳದಲ್ಲಿದ್ದ ಸ್ಥಳೀಯರು ಯಾವುದೇ ಲೈಫ್‌ಗಾರ್ಡ್ ಮತ್ತು ಪರಿಕರಗಳು ಇಲ್ಲದೇ ಮೂವರು ವಿದ್ಯಾರ್ಥಿನಿಯರು ಮತ್ತು ಓರ್ವ ಶಿಕ್ಷಕನ ರಕ್ಷಿಸಿದ್ದಾರೆ. ಆದರೆ ಇನ್ನುಳಿದ ಮೂವರು ವಿದ್ಯಾರ್ಥಿನಿಯರು ಸಾವನ್ನಪ್ಪಿದ್ದಾರೆ.