ಮುಕೇಶ್ ಅಂಬಾನಿ ಪುತ್ರ ಅನಂತ್ ಜೊತೆ ರಾಧಿಕಾ ಮರ್ಚೆಂಟ್ ನಿಶ್ಚಿತಾರ್ಥ
ನವದೆಹಲಿ: ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ (Mukesh Ambani) ಅವರ ಕಿರಿಯ ಪುತ್ರ ಅನಂತ್ ಅಂಬಾನಿ (Anant Ambani) ಹಾಗೂ ರಾಧಿಕಾ ಮರ್ಚೆಂಟ್ (Radhika Merchant) ಅವರ ನಿಶ್ಚಿತಾರ್ಥ ಇಂದು ನೆರವೆರಿತು.
ರಾಜಸ್ಥಾನದ ನಾಥದ್ವಾರದಲ್ಲಿರುವ ಶ್ರೀನಾಥ್ ದೇವಸ್ಥಾನದಲ್ಲಿ ಸಾಂಪ್ರದಾಯಿಕವಾಗಿ ನಿಶ್ಚಿತಾರ್ಥ (Engagement) ಸಮಾರಂಭ ನಡೆಯಿತು. ಅನಂತ್ ಮತ್ತು ರಾಧಿಕಾ ಹಲವು ವರ್ಷಗಳಿಂದ ಪರಸ್ಪರ ಸ್ನೇಹಿತರಾಗಿದ್ದಾರೆ. ಅಷ್ಟೇ ಅಲ್ಲದೇ ಅನಂತ್ ಮತ್ತು ರಾಧಿಕಾ ಬಹಳ ಸಮಯದಿಂದ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಅಂಬಾನಿ ಕುಟುಂಬದ ಹಲವಾರು ಕಾರ್ಯಕ್ರಮಗಳಲ್ಲಿ ಕುಟುಂಬದ ಇತರ ಸದಸ್ಯರೊಂದಿಗೆ ರಾಧಿಕಾ ಕಾಣಿಸಿಕೊಂಡಿದ್ದರು.
ರಾಧಿಕಾ ತಂದೆ ವೀರೇನ್ ಮರ್ಚೆಂಟ್ ಔಷಧೀಯ ತಯಾರಿಕಾ ಕಂಪನಿಯ ಸಿಇಒ, ಕೈಗಾರಿಕೋದ್ಯಮಿಯಾಗಿದ್ದಾರೆ. ರಾಧಿಕಾ ನ್ಯೂಯಾರ್ಕ್ ವಿಶ್ವವಿದ್ಯಾನಿಲಯದ ಪದವೀಧರರಾಗಿದ್ದು, ಎನ್ಕೋರ್ ಹೆಲ್ತ್‌ಕೇರ್ ಮಂಡಳಿಯಲ್ಲಿ ನಿರ್ದೇಶಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇನ್ನೂ ಅನಂತ್ ಅಮೆರಿಕದ ಬ್ರೌನ್ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನವನ್ನು ಪೂರ್ಣಗೊಳಿಸಿದ್ದು, ಜಿಯೋ ಫ್ಲಾಟ್ಫಾರ್ಮ್ ಹಾಗೂ ರಿಲಯನ್ಸ್ ರಿಟೇಲ್ ವೆಂಚರ್ಸ್ನ ಮಂಡಳಿಗಳಲ್ಲಿ ಸದಸ್ಯರಾಗಿ ಸೇರಿದಂತೆ ಅನೇಕ ರಿಲಯನ್ಸ್ ಇಂಡಸ್ಟ್ರೀಸ್ನಲ್ಲಿ ಸೇವೆ ಸಲ್ಲಿಸಿದ್ದಾರೆ.