ಮುಂಗಾರು ಚುರುಕು ; ಕರಾವಳಿದಾದ್ಯಂತ ಯುವಕರ ಭರ್ಜರಿ ಏಡಿ ಬೇಟೆ!
ಈ ಬಾರಿ ಮಳೆಯ ಅಭಾವ ಇದ್ದುದರಿಂದ ರಾಜ್ಯದಲ್ಲಿ ಮೊದಲ ವಾರದಲ್ಲಿ ಪ್ರವೇಶಿಸಬೇಕಿದ್ದ ಮುಂಗಾರು ಜೂನ್ ಅಂತ್ಯದಲ್ಲಿ ಆಗಮಿಸಿದೆ. ಬತ್ತಿ ಹೋಗಿದ್ದ ನದಿಗಳು ಮರುಜೀವ ಹೊಂದಿದ್ದು ಗದ್ದೆ ಹಳ್ಳ- ಕೊಳ್ಳ ತೊರೆಗಳಿಗೆಲ್ಲ ಜೀವ ಕಳೆ ಬಂದು ಮೈತುಂಬಿ ಹರಿಯುತ್ತಿವೆ. ಕರಾವಳಿದಾದ್ಯಂತ ಜುಲೈ ಮೊದಲ ವಾರದಿಂದ ಮುಂಗಾರು ಬಿರುಸಾಗಿದೆ.
ಮಳೆ ಬಂದ ನಂತರ ಕೃಷಿಯ ಎಲ್ಲಾ ಕೆಲಸಗಳು ಆರಂಭಗೊಂಡಿದ್ದು ಈ ಮೊದಲ ಮಳೆಗೆ ಕರಾವಳಿದಾದ್ಯಂತ ಯುವಕರು ಏಡಿ ಮತ್ತು ಮೀನುಗಳನ್ನು ಹಿಡಿಯಲು ಪ್ರಾರಂಭಿಸಿದ್ದಾರೆ.
ತುಳುನಾಡಲ್ಲಿ ಹಳ್ಳಿಗಳಲ್ಲಿ ಮೀನು ಮತ್ತು ಏಡಿ ಹಿಡಿಯುವುದೆಂದರೆ ಅದೊಂದು ಹವ್ಯಾಸ. ಜೂನ್ ಜುಲೈ ತಿಂಗಳಲ್ಲಿ ಸಮುದ್ರದಲ್ಲಿ ಮೀನುಗಾರಿಕೆ ನಿಷೇಧವಿರುತ್ತದೆ ಮತ್ತು ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚಾಗಿ ಏಡಿಯನ್ನು ಹಿಡಿಯುತ್ತಾರೆ. ಬೇಸಿಗೆಕಾಲದಲ್ಲಿ ಏಡಿಗಳು ಮಣ್ಣಿನೊಳಗೆ ಇದ್ದು ಮತ್ತು ಮೀನುಗಳು ಸ್ವಲ್ಪ ನೀರು ಇರುವ ಸ್ಥಳಗಳಲ್ಲಿ ವಾಸಿಸುತ್ತವೆ. ಆದರೆ ಮೊದಲ ಮಳೆಗೆ ಈ ಮೀನು ಅಥವಾ ಏಡಿ ನದಿ ಹಳ್ಳ ಕೊಳ್ಳಗಳಲ್ಲಿ ಹೊರಬರುತ್ತವೆ ಇದನ್ನು ತುಳುನಾಡಲ್ಲಿ ಉಬರ್ ಎಂದು ಕರೆಯುತ್ತಾರೆ.