ಮೀನು ಹಿಡಿಯಲು ಹೋಗಿದ್ದವರಿಗೆ ಗುಂಡೇಟು- ಓರ್ವ ಸಾವು, ಇಬ್ಬರು ಗಂಭೀರ
ಹಾಸನ: ಮೀನು (Fish) ಹಿಡಿಯಲು ಹೋಗಿದ್ದವರ ಮೇಲೆ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದು ಸ್ಥಳದಲ್ಲೇ ಓರ್ವ ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹಾಸನ (Hassan) ಜಿಲ್ಲೆಯ ಸಕಲೇಶಪುರ ತಾಲೂಕಿನ ಯಸಳೂರು ಹೋಬಳಿ ತಂಬಲಗೇರಿ ಗ್ರಾಮದಲ್ಲಿ ಸೋಮವಾರ ತಡರಾತ್ರಿ ನಡೆದಿದೆ.
ತಂಬಲಗೇರಿ ಗ್ರಾಮದ ನವೀನ್ ಅಲಿಯಾಸ್ ಪಚ್ಚಿ (39) ಮೃತ ವ್ಯಕ್ತಿಯಾಗಿದ್ದು, ದಯಾನಂದ ಹಾಗೂ ಪದ್ಮನಾಭ ಎಂಬವರು ಗುಂಡಿನ ತಗುಲಿ ಗಂಭೀರವಾಗಿ ಗಾಯಗೊಂಡಿದ್ದು ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನವೀನ್, ದಯಾನಂದ, ಪದ್ಮನಾಭ, ರಾಜಾಚಾರಿ ಸೇರಿ ನಾಲ್ವರು ರಾತ್ರಿ ಮೀನು ಹಿಡಿಯಲು ತೆರಳಿದ್ದರು. ಹೇಮಾವತಿ ನದಿಯ ದಡದಲ್ಲಿ ಮೀನು ಹಿಡಿಯಲು ಬೆಂಕಿ ಹಾಕಿಕೊಂಡು ಕೂಳಿತಿದ್ದ ವೇಳೆ ನಾಲ್ವರು ಸ್ನೇಹಿತರ ಮೇಲೆ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದಾರೆ. ನವೀನ್ ಸ್ಥಳದಲ್ಲೇ ಗುಂಡಿಗೆ ಬಲಿಯಾದರೆ, ದಯಾನಂದ ಹಾಗೂ ಪದ್ಮನಾಭ ಗಂಭೀರವಾಗಿ ಗಾಯಗೊಂಡಿದ್ದಾರೆ.
ಅದೃಷ್ಟವಶಾತ್ ರಾಜಾಚಾರಿ ಗುಂಡಿನ ದಾಳಿಯಿಂದ ಪಾರಾಗಿದ್ದಾರೆ. ಹತ್ಯೆಗೀಡಾದ ನವೀನ್ ಬಿಜೆಪಿ (BJP Activist) ಯ ಸಕ್ರಿಯ ಕಾರ್ಯಕರ್ತನಾಗಿದ್ದು, ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿಯೂ ಗುರುತಿಸಿಕೊಂಡಿದ್ದರು. ಶಿಕಾರಿಗೆ ತೆರಳಿದ್ದವರಿಂದ ಗುಂಡಿನ ದಾಳಿ ನಡೆದಿದೆಯೋ ಅಥವಾ ಹತ್ಯೆ ಮಾಡಲೆಂದು ನಡೆಸಿದ ದಾಳಿಯೋ ಎಂಬ ಬಗ್ಗೆ ತನಿಖೆ ತೀವ್ರಗೊಂಡಿದ್ದು, ಸ್ಥಳ ಪರಿಶೀಲನೆಗಾಗಿ ವಿಧಿ ವಿಜ್ಞಾನ ಪ್ರಯೋಗಾಯದ ತಜ್ಞರು ತಯಾರಿ ನಡೆಸಿದ್ದಾರೆ.