‘ಮಿಸ್ ಯೂನಿವರ್ಸ್’ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸ್ತಿದ್ದಾರೆ ಮಂಗಳೂರು ಬೆಡಗಿ
ಭಾರತೀಯ ಕಾಲಮಾನ ಪ್ರಕಾರ ಜನವರಿ 15 ರಂದು ಬೆಳಗ್ಗೆ 6.30ಕ್ಕೆ 71ನೇ ಭುವನ ಸುಂದರಿ ಸ್ಪರ್ಧೆಯು ದಕ್ಷಿಣ ಅಮೆರಿಕಾದ ಲೌಸಿಯಾನಾ ರಾಜ್ಯದ ನ್ಯೂ ಆರಿಲಿನ್ಸ್ ನಗರದ ಎರ್ನೆಸ್ಟ್ ಎನ್ ಮೋರಿಯಲ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆಯಲಿದೆ. ಈ ಸ್ಪರ್ಧೆಯಲ್ಲಿ ನಾನಾ ದೇಶಗಳ 86 ಸುಂದರಿಯರು ಭಾಗಿ ಆಗುತ್ತಿದ್ದು, ಭಾರತದಿಂದ ದಿವಿತಾ ರೈ ಪ್ರತಿನಿಧಿಸುತ್ತಿದ್ದಾರೆ. ದಿವಿತಾ ಕರ್ನಾಟಕದ ಮಂಗಳೂರು ಮೂಲದವರು ಎನ್ನುವುದು ವಿಶೇಷ.
ಈಗಾಗಲೇ 2022ರಲ್ಲಿ ‘ದಿವಾ ಮಿಸ್ ಯೂನಿವರ್ಸ್’ ಟೈಟಲ್ ಅನ್ನು ಗೆದ್ದಿರುವ ದಿವಿತಾ ರೈ ಮತ್ತು ಕುಟುಂಬ ನೆಲೆಸಿರುವುದು ಮುಂಬೈನಲ್ಲಿ. ಹಾಗಾಗಿ ಮುಂಬೈನಲ್ಲಿ ಇವರು ವಿದ್ಯಾಭ್ಯಾಸ ಮುಗಿಸಿದ್ದಾರೆ. ಜೆಜೆ ಕಾಲೇಜ್ ಆಫ್ ಇಂಜಿನಿಯರಿಂಗ್ ನಲ್ಲಿ ಆರ್ಕಿಟೆಕ್ಚರ್ ಪದವಿಯನ್ನು ಪೂರೈಸಿರುವ ಇವರು ಹತ್ತಾರು ಹವ್ಯಾಸಗಳನ್ನು ಹೊಂದಿದ್ದಾರೆ. ಅವರೇ ಹೇಳಿಕೊಂಡಂತೆ ಬ್ಯಾಡ್ ಮಿಂಟನ್ ಆಟಗಾರ್ತಿ, ಚಿತ್ರಕಲೆಯಲ್ಲೂ ಆಸಕ್ತಿ ಹೊಂದಿದ್ದಾರೆ. ಮಾಡೆಲಿಂಗ್ ಅನ್ನು ವೃತ್ತಿಯನ್ನಾಗಿ ಸ್ವೀಕರಿಸಿದ್ದಾರೆ.
2021ರಲ್ಲಿ ಭುವನ ಸುಂದರಿ ಟೈಟಲ್ ಅನ್ನು ಭಾರತದವರೇ ಆದ ಹರ್ನಾಜ್ ಸಂಧು ಗೆದ್ದಿದ್ದರು. ಈ ಬಾರಿ ದಿವಿತಾ ರೈ ಗೆ ಅಂಥದ್ದೊಂದು ಕಿರೀಟ ಗೆಲ್ಲುವ ಅವಕಾಶ ಸಿಕ್ಕಿದೆ. ಈ ಬಾರಿಯ ಭುವನ ಸುಂದರಿ ಕಿರೀಟ ಯಾರ ಪಾಲಾಗುತ್ತದೆಯೋ ನಾಳೆಯವರೆಗೂ ಕಾದು ನೋಡಬೇಕು.