ಮಾಜಿ ಸಚಿವ ಬಿ.ಸಿ ಪಾಟೀಲ್ ಅಳಿಯ ವಿಷ ಸೇವಿಸಿ ಆತ್ಮಹತ್ಯೆ
ದಾವಣಗೆರೆ: ಮಾಜಿ ಸಚಿವ ಬಿ.ಸಿ. ಪಾಟೀಲ್ ಅಳಿಯ ಪ್ರತಾಪ್ ಕುಮಾರ್ ಕೆಜಿ (41) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಬಿಜೆಪಿ ನಾಯಕ ಬಿಸಿ ಪಾಟೀಲ್ ಅವರ ದೊಡ್ಡ ಮಗಳ ಗಂಡ ಪ್ರತಾಪ್ ಕುಮಾರ್ ಇಂದು (ಜುಲೈ 08) ದಾವಣಗೆರೆ ಜಿಲ್ಲೆಯ ಹೊನ್ನಾಳಿ ಅರಣ್ಯ ಪ್ರದೇಶದಲ್ಲಿ ರಸ್ತೆ ಬದಿ ಕಾರು ನಲ್ಲಿಸಿ ವಿಷ ಸೇವಿಸಿದ್ದಾರೆ. ಇದನ್ನು ಗಮಿಸಿದ ಸ್ಥಳೀಯರು ಪ್ರತಾಪ್ ಕುಮಾರ್ ನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗೆಂದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಪ್ರತಾಪ್ ಕುಮಾರ್ ಮೃತಪಟ್ಟಿದ್ದಾರೆ.
ದಾವಣಗೆರೆ ಕತ್ತಲಗೆರೆ ಗ್ರಾಮದ ಮೃತ ಪ್ರತಾಪ್ ಕುಮಾರ್, 15 ವರ್ಷದ ಹಿಂದೆ ಬಿಸಿ ಪಾಟೀಲ್ ಅವರ ದೊಡ್ಡ ಮಗಳು ಸೌಮ್ಯಳನ್ನು ಮದುವೆಯಾಗಿದ್ದರು. ಆದ್ರೆ, ಇದೀಗ ಏಕಾಏಕಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಹರಿಹರ-ಶಿವಮೊಗ್ಗ ರಾಜ್ಯ ಹೆದ್ದಾರಿಯಲ್ಲಿ ಬರುವ ಹೊನ್ನಾಳಿ ತಾಲೂಕಿನ ಅರಕೆರೆ ಗ್ರಾಮದ ಬಳಿ ಕಾರು ನಿಲ್ಲಿಸಿ ವಿಷ ಸೇವಿಸಿದ್ದಾರೆ. ಕಾರಿನಲ್ಲಿ ವಿಷದ ಬಾಟಲಿ ಪತ್ತೆಯಾಗಿದೆ. ಆದ್ರೆ, ಪ್ರತಾಪಕುಮಾರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಪ್ರತಾಪ್ ಕುಮಾರ್ ಬೇರೆ ಯಾರು ಅಲ್ಲ. ಬಿ.ಸಿ ಪಾಟೀಲ್ ಪತ್ನಿ ವನಜಾ ಅವರ ಸಹೋದರ. ಇನ್ನು ತಮಗೆ ಗಂಡು ಮಕ್ಕಳು ಇಲ್ಲದಿದ್ದರಿಂದ ಸಂಬಂಧಿ ಪ್ರತಾಪ್ ಕುಮಾರ್ಗೆ ಬಿ.ಸಿ. ಪಾಟೀಲ್ ತಮ್ಮ ಹಿರಿ ಪುತ್ರಿ ಸೌಮ್ಯಳನ್ನು ಮದುವೆ ಮಾಡಿಕೊಟ್ಟಿದ್ದರು.
ಮದುವೆ ಬಳಿಕ ಪ್ರತಾಪ್, ತಮ್ಮ ಮಾವ ಬಿ.ಸಿ ಪಾಟೀಲ್ ಅವರ ಕೃಷಿಗೆ ಸಂಬಂಧಿಸಿದ ವ್ಯವಹಾರ ನೋಡಿಕೊಳ್ಳುತ್ತಿದ್ದರು. ಆದ್ರೆ, ಇದೀಗ ಅಳಿಯ ದಿಢೀರ್ ಆತ್ಮಹತ್ಯೆಗೆ ಶರಣಾಗಿದ್ದರಿಂದ ಬಿ.ಸಿ. ಪಾಟೀಲ್, ಕುಗ್ಗಿ ಹೋಗಿದ್ದು, ಹಿರೇಕೆರೂರಿನಲ್ಲಿ ಇದ್ದ ಬಿ.ಸಿ ಪಾಟೀಲ್ ಇದೀಗ ಮೃತದೇಹವಿರುವ ಶಿಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದೌಡಾಯಿಸಿದ್ದಾರೆ.
ಬೆಂಗ್ಳೂರಲ್ಲಿ ಪಶ್ಚಿಮ ಬಂಗಾಳ ಮೂಲದ ವಿದ್ಯಾರ್ಥಿನಿ ನೇಣಿಗೆ ಶರಣು
ಬೆಂಗಳೂರು: ನರ್ಸಿಂಗ್ ವಿದ್ಯಾರ್ಥಿನಿಯೊಬ್ಬಳು (Nursing student) ಹಾಸ್ಟೆಲ್‍ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಜಾಲಹಳ್ಳಿಯಲ್ಲಿ (Jalahalli) ನಡೆದಿದೆ.
ಆತ್ಮಹತ್ಯೆಗೆ ಶರಣಾದ ಯುವತಿಯನ್ನು ಪಶ್ಚಿಮ ಬಂಗಾಳ ಮೂಲದ ದಿಯಾ ಮಂಡೋಲ್ ಎಂದು ಗುರುತಿಸಲಾಗಿದೆ. ಮೃತ ಯುವತಿ ನಗರದ ನರ್ಸಿಂಗ್ ಕಾಲೇಜ್ ಒಂದರಲ್ಲಿ ವ್ಯಾಸಾಂಗ ಮಾಡುತ್ತಿದ್ದಳು. ಮೂರು ದಿನಗಳ ಹಿಂದೆ ಆಕೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲಿಸರು ತಿಳಿಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕೌಟುಂಬಿಕ ಕಲಹದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ (Jalahalli Police) ಪ್ರಕರಣ ದಾಖಲಾಗಿದೆ.
ಗ್ರಾಮ ಪಂಚಾಯತಿ ಸದಸ್ಯನ ಬರ್ಬರ ಹತ್ಯೆ
ಬೆಂಗಳೂರು: ಹಳೆಯ ದ್ವೇಷದಿಂದ ಗ್ರಾಮ ಪಂಚಾಯತಿ ಸದಸ್ಯನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಹೊಸಕೋಟೆಯಲ್ಲಿ (Hosakote) ನಡೆದಿದೆ. ಮೃತನನ್ನು ಅಮೀರ್ ಖಾನ್ (45) ಎಂದು ಗುರುತಿಸಲಾಗಿದೆ. ಇವರು ಕಾಂಗ್ರೆಸ್ ಪಕ್ಷದ ಗ್ರಾಮ ಪಂಚಾಯ್ತಿ ಸದಸ್ಯ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ನಂದಗುಡಿ ಪೊಲಿಸ್ ಠಾಣಾ ವ್ಯಾಪ್ತಿಯ ಬೈಲ್ ನರಸಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಗ್ರಾಮ ಪಂಚಾಯತಿ ಕಛೇರಿಯ ಬಳಿ ಮೊಬೈಲ್ ಫೋನ್‍ನಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಗ್ರಾಮದ ಮೆಹಬೂಬ್ ಇತರೊಂದಿಗೆ ಬಂದು ಲಾಂಗ್ ನಿಂದ ತಲೆಗೆ ಹೊಡೆದು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.
ಇತ್ತ ಘಟನೆಯಿಂದ ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಮೀರ್ ಖಾನ್ ಅವರನ್ನು ಕೂಡಲೇ ಎಂ ವಿಜಿ ಆಸ್ಪತ್ರೆಗೆ ಸೇರಿಸಲು ಕರೆದೊಯ್ಯಲಾಗುತ್ತಿತ್ತು. ಆದರೆ ಮಾರ್ಗ ಮಧ್ಯದಲ್ಲಿ ಅಮೀರ್ ಖಾನ್ ಮೃತಪಟ್ಟರು.
ಘಟನಾ ಸ್ಥಳಕ್ಕೆ ನಂದಗುಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಎಂವಿಜೆ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಮಲಗಿದ್ದ ದಂಪತಿ ಮತ್ತು ಅವರ ಮಗನನ್ನು ಕತ್ತು ಸೀಳಿ ಹತ್ಯೆ
ಉತ್ತರ ಪ್ರದೇಶ: ಉತ್ತರ ಪ್ರದೇಶದಲ್ಲಿ ತ್ರಿವಳಿ ಕೊಲೆ ಪ್ರಕರಣವೊಂದು ವರದಿಯಾಗಿದೆ. ಭಾನುವಾರ ಮಧ್ಯರಾತ್ರಿ ಅಪರಿಚಿತ ದುಷ್ಕರ್ಮಿಗಳು ಮಲಗಿದ್ದ ದಂಪತಿ ಮತ್ತು ಅವರ ಮಗನನ್ನು ಕತ್ತು ಸೀಳಿ ಹತ್ಯೆ ಮಾಡಿದ್ದಾರೆ.
ದುಷ್ಕರ್ಮಿಗಳು ಪತಿ, ಪತ್ನಿ ಹಾಗೂ ಮಗನ ಕತ್ತು ಸೀಳಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಗಾಜಿಪುರದಲ್ಲಿ ನಡೆದಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಎಸ್‌ಪಿ ಓಂವಿರ್ ಸಿಂಗ್ ನೇತೃತ್ವದ ಎಸ್‌ಒಜಿ ತಂಡವು ಘಟನಾ ಸ್ಥಳಕ್ಕೆ ತಲುಪಿ ಗಂಟೆಗಳ ಕಾಲ ತನಿಖೆ ನಡೆಸಿತು, ಆದರೆ ಕೊಲೆಯ ಕಾರಣವನ್ನು ಕಂಡುಹಿಡಿಯಲು ಸಾಧ್ಯವಾಗಲಿಲ್ಲ. ಪೊಲೀಸರು ಮೂವರ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಖಿಲ್ವಾ ಗ್ರಾಮದ ನಿವಾಸಿ ಮುನ್ಶಿ ಬಿಂದ್ (45) ಮತ್ತು ಅವರ ಪತ್ನಿ ದೇವಂತಿ (40) ಮನೆಯ ಹೊರಗಿನ ಗುಡಿಸಲಿನಲ್ಲಿ ಪ್ರತ್ಯೇಕ ಹಾಸಿಗೆಗಳ ಮೇಲೆ ಮಲಗಿದ್ದರು.
ಹಿರಿಯ ಮಗ ರಮಶಿಶ್ (20) ಮನೆಯಲ್ಲಿ ಮಲಗಿದ್ದ. ಕಿರಿಯ ಮಗ ಆಶಿಶ್ ಗ್ರಾಮಕ್ಕೆ ಬಂದಿದ್ದ ಆರ್ಕೆಸ್ಟ್ರಾ ನೋಡಲು ಹೋಗಿದ್ದ. ರಾತ್ರಿ 2 ಗಂಟೆಗೆ ಆಶಿಶ್ ಮನೆಗೆ ಬಂದು ನೋಡಿದಾಗ ಪೋಷಕರು ಹೊರಗೆ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡಿದ್ದಾನೆ.
ಮಾಹಿತಿ ಮೇರೆಗೆ ಪೊಲೀಸರು ಅಲ್ಲಿಗೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಮಾಹಿತಿ ತಿಳಿದ ತಕ್ಷಣ ಎಸ್ಪಿ ಓಂವೀರ್ ಸಿಂಗ್ ಆಗಮಿಸಿ ತನಿಖೆ ಆರಂಭಿಸಿ ಕುಟುಂಬಸ್ಥರು ಹಾಗೂ ಗ್ರಾಮಸ್ಥರ ವಿಚಾರಣೆ ನಡೆಸಿದ್ದಾರೆ. ಒಂದೇ ಕುಟುಂಬದ ಮೂವರ ಕೊಲೆಯಾದ ಘಟನೆ ಇಡೀ ಗ್ರಾಮದಲ್ಲಿ ಸಂಚಲನ ಮೂಡಿಸಿದೆ.