ಮಾಜಿ ಗರ್ಲ್‌ಫ್ರೆಂಡ್‌ಗಾಗಿ ಚಳಿಯಲ್ಲೂ ಬರೋಬ್ಬರಿ 21 ಗಂಟೆ ಮಂಡಿಯೂರಿ ಕುಳಿತ ಪ್ರೇಮಿ!

ಲವ್ ಅನ್ನೋ ಫೀಲಿಂಗ್ ಮನಸ್ಸಿಗೆ ತುಂಬಾ ಖುಷಿ ನೀಡುತ್ತದೆ. ಅದೇ ಬ್ರೇಕಪ್ ಮಾಡಿಕೊಳ್ಳುವುದು ತುಂಬಾ ಕಷ್ಟದ ವಿಷಯ. ಸಣ್ಣಪುಟ್ಟ ವಿಚಾರ ಅಥವಾ ದೊಡ್ಡ ವಿಚಾರಕ್ಕೆ ಜಗಳವಾಡಿ ಬ್ರೇಕಪ್ ಮಾಡಿಕೊಂಡರೂ ಆ ನೋವು ಮಾತ್ರ ಮನಸ್ಸಿನಲ್ಲಿ ಹಾಗೆಯೇ ಇರುತ್ತದೆ. ಬಿಟ್ಟು ಹೋದ ಪ್ರೇಮಿಯನ್ನು ಮರಳಿ ಪಡೆಯಲು ಹುಡುಗ-ಹುಡುಗಿಯರು ನಾನಾ ರೀತಿಯಲ್ಲಿ ಸರ್ಕಸ್ ಮಾಡುತ್ತಾರೆ. ಎಲ್ಲಾ ರೀತಿಯಲ್ಲೂ ಅವರ ಮನವೊಲಿಸಲು ಪ್ರಯತ್ನಿಸುತ್ತಾರೆ. ಆದ್ರೆ ಇಲ್ಲೊಬ್ಬ ಪ್ರೇಮಿ ಬಿಟ್ಟುಹೋದ ಗರ್ಲ್ ಫ್ರೆಂಡ್ ಮರಳಿ ಬರಲು ಚಳಿ, ಗಾಳಿಯಲ್ಲೂ ಆಕೆಗಾಗಿ ಕಾದಿದ್ದಾನೆ. ಅದೂ ಒಂದೆರಡು ಗಂಟೆಯಲ್ಲ. ಬರೋಬ್ಬರಿ 21 ಗಂಟೆಗಳ ಕಾಲ ಮಂಡಿಯೂರಿ ಬೇಡಿಕೊಂಡಿದ್ದಾನೆ. ಚೀನಾದ ನೈಋತ್ಯ ಸಿಚುವಾನ್ ಪ್ರಾಂತ್ಯದಲ್ಲಿ ನಡೆದ ಈ ಘಟನೆ ನಡೆದಿದೆ.
ಶೀತ ವಾತಾವರಣದಲ್ಲಿ ಹೂಗುಚ್ಛ ಹಿಡಿದು ಮಂಡಿಯೂರಿ ಕುಳಿತ ಪ್ರೇಮಿ
ಮಾರ್ಚ್ 28 ರಂದು ಮಧ್ಯಾಹ್ನ 1 ಗಂಟೆಯಿಂದ ಮರುದಿನ ಬೆಳಿಗ್ಗೆ 10 ಗಂಟೆಯ ವರೆಗೆ ಚೀನಾದ ನೈಋತ್ಯ ಸಿಚುವಾನ್ ಪ್ರಾಂತ್ಯದ ದಾಝೌನಲ್ಲಿ ಮಹಿಳೆಯ ಕಚೇರಿ ಕಟ್ಟಡದ ಪ್ರವೇಶ ದ್ವಾರದ ಹೊರಗೆ ವ್ಯಕ್ತಿ ಗುಲಾಬಿ ಹೂಗಳ ಗುಚ್ಛ ಹಿಡಿದು ಮಂಡಿಯೂರಿ (Man on knees) ಕುಳಿತಿದ್ದಾನೆ. ಶೀತ ವಾತಾವರಣದಿಂದ ಹವಾಮಾನ (Weather) ಹದಗೆಟ್ಟಿದ್ದರೂ ವ್ಯಕ್ತಿ ಕುಳಿತಲ್ಲಿದ್ದ ಕದಲಲ್ಲಿಲ್ಲ. ಸುತ್ತಲೂ ನೆರೆದ ಜನರು ಪ್ರಯತ್ನವನ್ನು ಕೈ ಬಿಡುವಂತೆ ವ್ಯಕ್ತಿಯನ್ನು ಒತ್ತಾಯಿಸಿದ್ದಾರೆ. ಆದರೂ ವ್ಯಕ್ತಿ ತನ್ನ ಮಾಜಿ ಪ್ರೇಯಸಿಗಾಗಿ (Ex-girlfriend) ಕಾಯುತ್ತಲೇ ಕುಳಿತಿದ್ದಾನೆ.
ಕೆಲವು ದಿನಗಳ ಹಿಂದೆ ತನ್ನ ಮಾಜಿ ಗೆಳತಿ ತನ್ನನ್ನು ಬಿಟ್ಟು ಹೋಗಿದ್ದಾಳೆ. ಹೀಗಾಗಿ ಈ ರೀತಿ ಆಕೆಯ ಬಳಿ ಕ್ಷಮೆ ಕೋರುತ್ತಿರುವುದಾಗಿ ಹೇಳಿದ್ದಾನೆ. ಪೊಲೀಸ್ ಅಧಿಕಾರಿಗಳು ಕೂಡ ಸ್ಥಳಕ್ಕೆ ಆಗಮಿಸಿ ವ್ಯಕ್ತಿ ತನ್ನ ಪ್ರಯತ್ನವನ್ನು ಕೈಬಿಡುವಂತೆ ಒತ್ತಾಯಿಸಿದ್ದಾರೆ. ಆದರೆ ಆತ ಅವರ ಸಲಹೆಯನ್ನು ಸ್ವೀಕರಿಸಲು ನಿರಾಕರಿಸಿದ್ದಾನೆ. ಇಂತಹ ಪ್ರೀತಿಯ ವರ್ತನೆಯನ್ನು ನೋಡಿದ ನಂತರ, ಸಾಮಾಜಿಕ ಮಾಧ್ಯಮ ಬಳಕೆದಾರರು (Social media) ಅವನಿಂದ ದೂರವಿರಿ ಎಂದು ಮಾಜಿ ಗೆಳತಿಗೆ ಸಲಹೆ ನೀಡಿದ್ದಾರೆ.