ಮಹಿಳಾ ಪ್ರೀಮಿಯರ್ ಲೀಗ್: ಅತ್ಯಂತ ದುಬಾರಿ ಆಟಗಾರ್ತಿ ಯಾರಾಗಬಹುದು..?
ಬಿಸಿಸಿಐ ಪ್ರಸ್ತುತ ಫೆಬ್ರವರಿ 2ನೇ ವಾರದಲ್ಲಿ ಡಬ್ಲ್ಯುಪಿಎಲ್ ಆಟಗಾರ್ತಿಯರನ್ನು ಹರಾಜು ಹಾಕುವ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಆಟಗಾರ್ತಿಯರ ಹರಾಜು ಪ್ರಕ್ರಿಯೆ ಸಿದ್ಧತೆ ಆರಂಭವಾಗಿರುವ ನಡುವೆ, ಎಲ್ಲರ ಮನಸ್ಸಲ್ಲಿರುವ ಏಕೈಕ ಪ್ರಶ್ನೆ ಎಂದರೆ, ಈ ಬಾರಿಯ ಅತ್ಯಂತ ದುಬಾರಿ ಆಟಗಾರ್ತಿ ಯಾರಾಗಬಹುದು ಎನ್ನುವುದು.
2022ರಲ್ಲಿ ಮಹಿಳಾ ಟೀಂ ಇಂಡಿಯಾದ ಟಿ20 ನಿರ್ವಹಣೆಯನ್ನು ನೋಡಿ ಹೇಳುವುದಾದರೆ ಆರಂಭಿಕ ಆಟಗಾರ್ತಿ ಸ್ಮೃತಿ ಮಂದನಾ ಹಾಗೂ ಹರ್ಮಾನ್‌ಪ್ರೀತ್ ಕೌರ್, ಡಬ್ಲ್ಯುಪಿಎಲ್‌ನ ಅತ್ಯಂತ ದುಬಾರಿ ಆಟಗಾರ್ತಿಯರಾಗುವ ಸಾಲಿನಲ್ಲಿ ಮುಂಚೂಣಿಯಲ್ಲಿದ್ದಾರೆ. ಟಿ20 ಮಾದರಿಯಲ್ಲಿ 2022ರಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಇವರಿಬ್ಬರೂ ಅಗ್ರ ಎರಡು ಸ್ಥಾನಗಳಲ್ಲಿದ್ದಾರೆ.
ಈ ಆಟಗಾರರ ವೇತನವು ಅವರ ಲೀಗ್‌ನಲ್ಲಿ ಅತ್ಯಧಿಕವಾಗಿರುವುದು ಮಾತ್ರವಲ್ಲದೆ ಐಪಿಎಲ್ ಹೊರತುಪಡಿಸಿ ವಿಶ್ವದ ಯಾವುದೇ ಪುರುಷರ ಲೀಗ್‌ನ ಅಗ್ರ ಆಟಗಾರರಿಗಿಂತ ಹೆಚ್ಚಾಗಿರುವ ಸಾಧ್ಯತೆ ದಟ್ಟವಾಗಿದೆ. ಸದ್ಯದ ಅಂದಾಜಿನ ಪ್ರಕಾರ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಪಾಕ್ ತಂಡದ ಸೂಪರ್‌ಸ್ಟಾರ್ ಪ್ಲೇಯರ್ ಬಾಬರ್ ಅಜಮ್ ಅವರಿಗಿಂತ ಹೆಚ್ಚಿನ ಸ್ಯಾಲರಿಯನ್ನು ಸ್ಮೃತಿ ಮಂದನಾ ಹಾಗೂ ಹರ್ಮಾನ್‌ಪ್ರೀತ್ ಕೌರ್ ಪಡೆಯುವ ಸಾಧ್ಯತೆ ಇದೆ.
ಪ್ರಸ್ತುತ ವಿಶ್ವದ ಅಗ್ರ ಮೂರು ಕ್ರಿಕೆಟ್ ಲೀಗ್‌ಗಳ ಬಹುಮಾನ ಮೊತ್ತವನ್ನು ನೋಡುವುದಾದರೆ, ಐಪಿಎಲ್‌ನ ಬಹುಮಾನ ಮೊತ್ತ 20 ಕೋಟಿ ಆಗಿದ್ದರೆ, ಡಬ್ಯುಪಿಎಲ್‌ನಲ್ಲಿ 6 ಕೋಟಿ ಬಹುಮಾನ ಮೊತ್ತವಿದೆ. ಪಾಕಿಸ್ತಾನ ಸೂಪರ್ ಲೀಗ್‌ನ ಬಹುಮಾನ ಮೊತ್ತ 3.4 ಕೋಟಿ ರೂಪಾಯಿ ಆಗಿದೆ. ಇನ್ನು ಮಹಿಳಾ ಕ್ರಿಕೆಟ್ ಲೀಗ್‌ಗೆ ಹೋಲಿಸಿದರೆ, ಡಬ್ಲ್ಯುಪಿಎಲ್ ಅಗ್ರಪಂಕ್ತಿಯಲ್ಲಿ ನಿಲ್ಲುತ್ತದೆ. ಡಬ್ಯುದಹಂಡ್ರೆಡ್ ಕ್ರಿಕೆಟ್ ಟೂರ್ನಿಯಲ್ಲಿ 1.50 ಕೋಟಿ ಬಹುಮಾನ ಮೊತ್ತವಿದೆ.
ಅಂದಾಜಿನ ಪ್ರಕಾರ ಆಟಗಾರ್ತಿಯರ ಮೂಲ ಬೆಲೆ 10 ರಿಂದ 50 ಲಕ್ಷದ ಒಳಗಿನ ಆಸುಪಾಸು ಇರುವ ಸಾಧ್ಯತೆ ಇದೆ. ರಾಷ್ಟ್ರೀಯ ತಂಡಕ್ಕೆ ಆಡಿರುವ ಆಟಗಾರ್ತಿಯ ಮೂಲ ಬೆಲೆ 30 ರಿಂದ 50 ಲಕ್ಷ ರೂಪಾಯಿ ನಿಗದಿ ಮಾಡುವ ಸಾಧ್ಯದೆ ಇದೆ. ರಾಷ್ಟ್ರೀಯ ತಂಡದ ಪರವಾಗಿ ಆಡದ ಆಟಗಾರ್ತಿಯ ಬೆಲೆ 10 ರಿಂದ 20 ಲಕ್ಷದ ಒಳಗೆ ಇರಬಹುದು. ಒಟ್ಟು 5 ವಿಭಾಗಗಳಲ್ಲಿ ಆಟಗಾರ್ತಿಯರ ಹರಾಜು ನಡೆಯಲಿದೆ. ಹರಾಜಿನಲ್ಲಿ ಆಟಗಾರರನ್ನು ಖರೀದಿಸಲು WPL ತಂಡವು 12 ಕೋಟಿ ರೂಪಾಯಿಗಳ ಪರ್ಸ್ ಅನ್ನು ಪಡೆಯುತ್ತದೆ. ಪ್ರತಿ ವರ್ಷ ಪರ್ಸ್‌ನಲ್ಲಿ 1.5 ಕೋಟಿ ರೂಪಾಯಿ ಹೆಚ್ಚಳವಾಗಲಿದೆ.