ಮಹಿಳಾ ಆಟಗಾರ್ತಿಯ ಸ್ನಾನದ ವಿಡಿಯೋ ಸೆರೆ ಹಿಡಿದ ಆಟಗಾರ್ತಿ
ಬೆಂಗಳೂರು: ಇಲ್ಲಿನ ಭಾರತೀಯ ಕ್ರೀಡಾ ಪ್ರಾಧಿಕಾರದ (ಎಸ್ಎಐ) ಸೌಲಭ್ಯದಲ್ಲಿ ವಾಲಿಬಾಲ್ ತರಬೇತಿಯಲ್ಲಿ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದ ಮಹಿಳೆಯೊಬ್ಬರು, ಸಹಪಾಠಿಯು ಸ್ನಾನ ಮಾಡುವಾಗ ವಿಡಿಯೋ ರೆಕಾರ್ಡ್ ಮಾಡಿಕೊಂಡ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ವಿಷಯ ಬೆಳಕಿಗೆ ಬಂದ ನಂತರ ಎಸ್ಎಐ ಅಧಿಕಾರಿಗಳು ಆರೋಪಿಯನ್ನು ಅಮಾನತುಗೊಳಿಸಿದ್ದಾರೆ.
ಟೇಕ್ವಾಂಡೋ ಕೋಚಿಂಗ್ನಲ್ಲಿ ಡಿಪ್ಲೊಮಾ ವ್ಯಾಸಂಗ ಮಾಡುತ್ತಿರುವ ಸಂತ್ರಸ್ತೆ, ಮಾರ್ಚ್ 28 ರಂದು ರಾತ್ರಿ ಸ್ನಾನ ಮಾಡುತ್ತಿದ್ದಾಗ ಯಾರೋ ವಿಡಿಯೋ ರೆಕಾರ್ಡ್ ಮಾಡುತ್ತಿದ್ದುದನ್ನು ಗಮನಿಸಿದ್ದಾಗಿ ಎಸ್ಎಐ ಅಧಿಕಾರಿಗಳು ಮತ್ತು ಜ್ಞಾನಭಾರತಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಕೂಡಲೇ ಹೊರಗೆ ಬಂದು ನೋಡಿದಾಗ, ವಾಲಿಬಾಲ್ ಕೋಚ್ ಆಗಲು ತರಬೇತಿ ಪಡೆಯುತ್ತಿದ್ದ ಮತ್ತೋರ್ವ ಮಹಿಳೆಯೇ ವಿಡಿಯೋ ಮಾಡುತ್ತಿರುವುದು ಕಂಡುಬಂದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಮರುದಿನ ಬೆಳಿಗ್ಗೆ ಆರೋಪಿಯನ್ನು ಅಮಾನತುಗೊಳಿಸಲಾಯಿತು ಎಂದು ಎಸ್ಎಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪಿ ಮಹಿಳೆ ವಿರುದ್ಧ ಐಪಿಸಿಯ ಸೆಕ್ಷನ್ 354 ಮತ್ತು 201 (ಸಾಕ್ಷಾಧಾರಗಳನ್ನು ನಾಶಪಡಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.