ಮಹಾಲಕ್ಷ್ಮಿ ಭೀಕರ ಹತ್ಯೆ ಪ್ರಕರಣ; ಶಂಕಿತ ಕೊಲೆ ಆರೋಪಿ ಒಡಿಶಾದಲ್ಲಿ ಆತ್ಮಹತ್ಯೆ!
ಬೆಂಗಳೂರು(ಸೆ.25) ಮಹಾಲಕ್ಷ್ಮಿ ಹತ್ಯೆ ಪ್ರಕರಣದ ತನಿಖೆ ತೀವ್ರಗೊಳ್ಳುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಶಂಕಿತ ಆರೋಪಿ ಒಡಿಶಾದಲ್ಲಿ ಬದುಕು ಅಂತ್ಯಗೊಳಿಸಿದ್ದಾನೆ. ಬೆಂಗಳೂರಿನ ವೈಯಾಲಿಕಾವಲ್‌ನಲ್ಲಿ ವಾಸವಿದ್ದ ನೇಪಾಳ ಮೂಲದ ಮಹಾಲಕ್ಷ್ಮಿಯನ್ನು ಹತ್ಯೆ ಮಾಡಿ 40 ತುಂಡುಗಳಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿಟ್ಟು ಪರಾರಿಯಾಗಿದ್ದ ಶಂಕಿತ ಆರೋಪಿ, ಸಹದ್ಯೋಗಿ ಮುಕ್ತಿ ರಂಜನ್ ರಾಯ್ ಇದೀಗ ಒಡಿಶಾದಲ್ಲಿ ಬದುಕು ಅಂತ್ಯಗೊಳಿಸಿದ್ದಾನೆ. ಬೆಂಗಳೂರಿನ ತನಿಖಾ ತಂಡ ಇದೀಗ ಒಡಿಶಾಗೆ ಪ್ರಯಾಣ ಬೆಳೆಸಿದೆ.
ಮಹಾಲಕ್ಷ್ಮಿ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಹತ್ಯೆ ಹಿಂದಿನ ಆರೋಪಿ ಒಡಿಶಾ ಮೂಲದ ಮುಕ್ತಿ ರಂಜನ್ ರಾಯ್ ಅನ್ನೋದು ಪತ್ತೆ ಹಚ್ಚಿದ್ದರು. ಮಹಾಲಕ್ಷ್ಮಿಯ ಸಹೋದ್ಯೋಗಿಯಾಗಿದ್ದ ಮುಕ್ತಿ ರಂಜನ್ ರಾಯ್ ಬರ್ಬರವಾಗಿ ಹತ್ಯೆ ಮಾಡಿ ದೇಹವನ್ನು 40 ತುಂಡುಗಳಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿಟ್ಟು ಪರಾರಿಯಾಗಿದ್ದ. ಈ ಕುರಿತು ಕೆಲ ಸಾಕ್ಷ್ಯಗಳು ಪೊಲೀಸರಿಗೆ ಲಭ್ಯವಾಗಿತ್ತು. ಈತನ ಹುಡುಕಾಟ ಆರಂಭಿಸಿದ ಪೊಲೀಸರು ಪಶ್ಚಿಮ ಬಂಗಾಳಕ್ಕೂ ತೆರಳಿ ಹುಡಕಾಟ ನಡೆಸಿದ್ದರು. ಇದೀಗ ತಲೆಮರೆಸಿಕೊಂಡಿದ್ದ ಆರೋಪಿ ಮುಕ್ತಿ ರಂಜನ್ ಬದುಕುಅಂತ್ಯಗೊಳಿಸಿದ್ದಾನೆ. ಈ ಮೂಲಕ ಈ ಪ್ರಕರಣದ ಪ್ರಮುಖ ಆರೋಪಿ ಹಾಗೂ ಸಾಕ್ಷ್ಯವೊಂದು ನಾಶವಾಗಿದೆ.
ಫ್ಯಾಶನ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಮುಕ್ತಿ ರಂಜನ್ ರಾಯ್, ಅದೇ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ನೇಪಾಳ ಮೂಲದ ಮಹಾಲಕ್ಷ್ಮಿಯನ್ನು ಪ್ರೀತಿಸುತ್ತಿದ್ದ. ಇದಕ್ಕಿದ್ದಂತೆ ಮಹಾಲಕ್ಷ್ಮಿ ಕೊಲೆಯಾಗಿದ್ದಳು. ಇತ್ತ ಹೆಬ್ಬಗೋಡಿಯಲ್ಲಿ ತಮ್ಮನ ಜೊತೆ ವಾಸವಿದ್ದ ಮುಕ್ತಿ ರಂಜನ್ ಪರಾರಿಯಾಗಿದ್ದ. ಹೀಗಾಗಿ ಪೊಲೀಸರು ಈತನ ಹುಡುಕಾಟದಲ್ಲಿರುವಾಗಲೇ ಪ್ರಕರಣ ತಿರುುವು ಪಡೆದುಕೊಂಡಿದೆ.
ಮಹಾಲಕ್ಷ್ಮಿ ಹತ್ಯೆ ಮಾಡಿ ಪರಾರಿಯಾಗಿದ್ದ ಮುಕ್ತಿ ರಂಜನ್ ಫೋನ್ ಕೂಡ ಬಳಸುತ್ತಿರಲಿಲ್ಲ. ಹೀಗಾಗಿ ಈತನ ಪತ್ತೆ ಹಚ್ಚುವುದು ಪೊಲೀಸರಿಗೆ ತಲೆನೋವಾಗಿತ್ತು. ಈತನ ಒಡಿಶಾದ ವಿಳಾಸದಲ್ಲಿ ಹುಡುಕಾಟ ನಡೆಸಲಾಗಿತ್ತು. ಈ ವೇಳೆ ಈತ ತವರಿಗೆ ತೆರಳದೆ ಪಶ್ಚಿಮ ಬಂಗಾಳ ತೆರಳಿರುವ ಮಾಹಿತಿ ಸಿಕ್ಕಿತ್ತು. ಹೀಗಾಗಿ ತನಿಖಾ ತಂಡ ಪಶ್ಚಿಮ ಬಂಗಾಳಕ್ಕೂ ತೆರಳಿತ್ತು.
ಇದರ ನಡುವೆ ಪಶ್ಚಿಮ ಬಂಗಾಳದಿಂದ ಈತ ಒಡಿಶಾಗೆ ತೆರಳಿದ್ದ ಅನ್ನೋ ಅನಧಿಕೃತ ಮಾಹಿತಿಗಳು ಲಭ್ಯವಾಗಿತ್ತು. ಈ ಕುರಿತು ತನಿಖಾ ತಂಡ ತೀವ್ರ ವಿಚಾರಣೆ ಕೈಗೊಂಡಿತ್ತು. ಈ ವಿಚಾರಣೆ ನಡುವೆ ಶಂಕಿತ ಆರೋಪಿ ಮೃತದೇಹ ಪತ್ತೆಯಾಗಿದೆ. ತಾನು ಜೈಲು ಸೇರುವುದು ಪಕ್ಕಾ ಎಂದು ಖಚಿತವಾಗುತ್ತಿದ್ದಂತೆ ಬೇರೆ ದಾರಿ ಕಾಣದೆ ಬದುಕು ಅಂತ್ಯಗೊಳಿಸಿರುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ತನಿಖೆ ಚುರುಕು:
ಸೆಪ್ಟೆಂಬರ್ 1ರ ತನಕ ಮಹಾಲಕ್ಷ್ಮಿ ಕೆಲಸಕ್ಕೆ ಹೋಗಿದ್ದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 2 ಅಥವಾ 3 ರಂದು ಕೊಲೆ ಆಗಿರಬಹುದು ಎಂದು ಪೊಲೀಸರು ಸದ್ಯಕ್ಕೆ ಅಂದಾಜಿಸಿದ್ದಾರೆ. ಇನ್ನೂ ಆಕೆ ಕೆಲಸ ಮಾಡ್ತಿದ್ದ ಶಾಪ್‌ನ ಟೀಂ ಲೀಡರ್ ಮುಕ್ತಿರಂಜನ್ ಕೂಡ ಸೆಪ್ಟೆಂಬರ್ 1ರ ನಂತರ ಕೆಲಸಕ್ಕೆ ಬಾರದೇ ಇರೋದು ಹಲವು ಅನುಮಾಗಳಿಗೆ ಕಾರಣವಾಗಿತ್ತು. ಒಡಿಶಾದಲ್ಲಿ ಹಂತಕ ಇರುವ ಶಂಕೆ ಮೇರೆಗೆ ಪೊಲೀಸರು ಅಲ್ಲಿಗೆ ತೆರಳಿದ್ದರು. ಕೊಲೆ ಪ್ರಕರಣದ ಬಗ್ಗೆ ಒಡಿಶಾ ಪೊಲೀಸರಿಗೂ ಸಹ ಮಾಹಿತಿ ನೀಡಿದ್ದರು.
ಈ ಮಧ್ಯೆ, ಮಹಾಲಕ್ಷ್ಮಿ ಶವವನ್ನು 59 ತುಂಡು ಮಾಡಿರುವ ಹಂತಕ ತುಂಬಾನೆ ಅಪಾಯಕಾರಿ ಎಂದು ಮನೋವೈದ್ಯರು ವಿಶ್ಲೇಷಣೆ ಮಾಡಿದ್ದರು. ಸುಡೋ ಮ್ಯಾಚೋಯಿಸಂ ಎಂಬ ಅಪರಾಧ ಸ್ವಭಾವ ಇರಬಹುದು. ಆತನನ್ನು ತಕ್ಷಣವೇ ಬಂಧಿಸದಿದ್ರೆ ಇನ್ನಷ್ಟು ಮಂದಿ ಇದೇ ರೀತಿ ಬಲಿಯಾಗಬಹುದು ಎಂದು ಎಚ್ಚರಿಕೆ ಸಹ ನೀಡಿದ್ದರು.
ವಿನಾಯಕ ನಾಯ್ಕ್ ಹತ್ಯೆ ಕೇಸ್ ಉದ್ಯಮಿ ಆತ್ಮಹತ್ಯೆ!
ಕಾರವಾರ: ನಗರದ ಹಣಕೋಣದಲ್ಲಿ ಉದ್ಯಮಿ ವಿನಾಯಕ ನಾಯ್ಕ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆ ಮಾಡಲು ಸುಪಾರಿ ಕೊಟ್ಟಿದ್ದರು ಎನ್ನಲಾದ ಗೋವಾ ಮೂಲದ ಉದ್ಯಮಿ ಇದೀಗ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನಡೆದಿದೆ. ಗುರುಪ್ರಸಾದ ರಾಣೆ ಮೃತ ಉದ್ಯಮಿ. ಗೋವಾದ ಮಾಂಡೋವಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಾರವಾರ ತಾಲೂಕಿನ ಹಣಕೋಣದಲ್ಲಿ ಸೆಪ್ಟೆಂಬರ್ 22 ರಂದು ಬೆಳಿಗ್ಗೆ 5:30ಕ್ಕೆ ಉದ್ಯಮಿ ವಿನಾಯಕ ನಾಯ್ಕ್ ಮನೆಗೆ ನುಗ್ಗಿ ಮಾರಾಕಾಸ್ತ್ರಗಳಿಂದ ಬರ್ಬರ್ ಹತ್ಯೆ ಮಾಡಿ ಹಂತಕರು ಪರಾರಿ ಆಗಿದ್ದರು. ಬಳಿಕ ಹಂತಕರಿಗಾಗಿ ಉತ್ತರ ಕನ್ನಡ ಪೊಲೀಸರು ಬಲೆ ಬಿಸಿದ್ದರು. ಅದರಂತೆಯೇ ನಿನ್ನೆ ಮೂವರನ್ನು ಬಂಧಿಸಲಾಗಿತ್ತು.
ಬಂಧಿತರು ಕೊಲೆಗೆ ಗುರುಪ್ರಸಾದ ರಾಣೆ ಸುಪಾರಿ ಕೊಟ್ಟಿದ್ದಾರೆ ಎಂದು ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದಾರೆ. ಅತ್ತ ಉದ್ಯಮಿ ಗುರುಪ್ರಸಾದ ಹೆಸರು ಹೇಳುತ್ತಿದ್ದಂತೆ ಗೋವಾ, ಮುಂಬೈ, ದೆಹಲಿಯಲ್ಲಿ ಹುಡುಕಾಟ ನಡೆಸಿದ್ದರು. ಬಳಿಕ ಕೆಲವೇ ನಿಮಿಷಗಳಲ್ಲಿ ಗೋವಾದ ಮಾಂಡೋವಿ ನದಿಯಲ್ಲಿ ಮೃತ ದೇಹ ಒಂದು ಪತ್ತೆಯಾಗಿದೆ. ಪತ್ತೆಯಾದ ಮೃತದೇಹ ಗುರುಪ್ರಸಾದ ರಾಣೆದೆ ಎಂಬುವುದು ದೃಢವಾಗಿದೆ.
ಗುರುಪ್ರಸಾದ ರಾಣೆ ಉದ್ಯಮಿ ವಿನಾಯಕ ನಾಯ್ಕ್ ಅವರನ್ನು ವೈಯಕ್ತಿಕ ಕಾರಣಕ್ಕೆ ಹತ್ತೆ ಮಾಡಿಸಿದ್ದಾರೆ ಎಂಬುವುದು ತಿಳಿದುಬಂದಿದೆ. ಬಂಧಿತ ಮೂವರ ಪೈಕಿ ಇಬ್ಬರೂ ಬಿಹಾರಿಗಳು ಹಾಗೂ ಓರ್ವ ಗುರುಪ್ರಸಾದ ಸ್ನೇಹಿತ ಎನ್ನಲಾಗಿದೆ. ಸದ್ಯ ಆರೋಪಿಗಳನ್ನು ಚಿತ್ತಾಕುಲ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ.
ಬೈಕ್‌ಗೆ ಬೆಂಕಿ ಹಚ್ಚಿದ್ದ ಆರೋಪಿ ಅರೆಸ್ಟ್:
ಬೆಂಗಳೂರು: ಪಿಜಿ ಮುಂದೆ ನಿಲ್ಲಿಸಿದ್ದ ಬುಲೆಟ್ ಬೈಕ್‌ಗೆ (Bullet Bike) ಬೆಂಕಿ ಹಚ್ಚಿದ್ದ ಆರೋಪಿಯನ್ನು ಪೀಣ್ಯ ಪೊಲೀಸರು (Peenya Police) ಬಂಧಿಸಿದ್ದಾರೆ.
ಪುಲ್ಕಿತ್ (25) ಬಂಧಿತ ಆರೋಪಿ. ಈತ ಪೀಣ್ಯಾದ ಹೆಚ್‌ಎಂಟಿ ಲೇಔಟ್‌ನ (HMT Layout) ಪಿಜಿಯೊಂದರ ಮುಂದೆ ನಿಲ್ಲಿಸಿದ್ದ ಬುಲೆಟ್ ಬೈಕ್‌ಗೆ ಬೆಂಕಿ ಹಚ್ಚಿದ್ದ. ಸೆ.19ರಂದು ಬೈಕ್‌ನಿಂದಲೇ ಪೆಟ್ರೋಲ್ ತೆಗೆದು ಅದೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ. ಇಷ್ಟು ಮಾತ್ರವಲ್ಲದೇ ಬೈಕ್‌ಗೆ ಹೊತ್ತಿಕೊಂಡ ಬೆಂಕಿಯಿಂದಲೇ ಸಿಗರೇಟ್‌ಗೆ ಬೆಂಕಿ ಹಚ್ಚಿ ಧಮ್ ಹೊಡೆದು ಎಸ್ಕೇಪ್ ಆಗಿದ್ದ. ಬುಲೆಟ್ ಬೈಕ್‌ಗೆ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಅಕ್ಕಪಕ್ಕದಲ್ಲಿದ್ದ ಮೂರು ಬೈಕ್‌ಗಳು ಬೆಂಕಿಗೆ ಆಹುತಿಯಾಗಿತ್ತು.
ಬೈಕ್ ಬೆಂಕಿಗಾಹುತಿಯಾದ ಬಳಿಕ ಬುಲೆಟ್ ಬೈಕ್ ಸವಾರ ದೀಪಾಂಶು ಎಂಬವರು ಈ ಬಗ್ಗೆ ಪೀಣ್ಯಾ ಪೊಲೀಸರಿಗೆ ದೂರು ನೀಡಿದ್ದರು. ಸದ್ಯ ಬುಲೆಟ್ ಬೈಕ್‌ಗೆ ಬೆಂಕಿ ಹಚ್ಚಿದ್ದ ಪುಲ್ಕಿತ್‌ನನ್ನು ಪೀಣ್ಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹಲವು ದಿನಗಳಿಂದ ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್ ಖರೀದಿಸುವ ಆಸೆಯನ್ನು ಪುಲ್ಕಿತ್ ಹೊಂದಿದ್ದ. ಬುಲೆಟ್ ಖರೀದಿಗೆ ಹಣ ಹೊಂದಿಸಲಿಕ್ಕೆ ಆಗದಿದ್ದಾಗ ಬೇರೆಯವರ ಬುಲೆಟ್ ಬೈಕ್ ಸೌಂಡ್ ಆದರೆ ಕೋಪಗೊಳ್ಳುತ್ತಿದ್ದ. ಬುಲೆಟ್ ಬೈಕ್ ತೆಗೆದುಕೊಳ್ಳುವ ಆಸೆಯಿತ್ತು. ಹಣವಿಲ್ಲದ್ದಕ್ಕೆ ಅದು ಸಾಧ್ಯವಾಗಲಿಲ್ಲ. ಹೀಗಾಗಿ ಕೋಪಬಂದು ಪಿಜಿಗಳ ಮುಂದೆ ನಿಲ್ಲಿಸಿದ್ದ ಬುಲೆಟ್ ಬೈಕ್‌ಗೆ ಬೆಂಕಿ ಹಚ್ಚಿದೆ ಎಂದು ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.
ಗಂಡ ಹೆಂಡತಿ ನಡುವಿನ ಗಲಾಟೆಗೆ 5 ವರ್ಷದ ಮಗಳು ಬಲಿ
ಚಿಕ್ಕಮಗಳೂರು: ಅಜ್ಜಂಪುರ ತಾಲೂಕಿನ ಶಿವನಿ ಗ್ರಾಮದ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಕೊಲೆ ಮಾಡಲಾಗಿದೆ ಎಂಬ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ತಂದೆಯಿಂದಲೇ ಬಾಲಕಿ ಕೊಲೆಯಾಗಿದ್ದಾಳೆ ಎಂಬ ವಿಚಾರ ಪೊಲೀಸ್ ತನಿಖೆ ವೇಳೆ ತಿಳಿದುಬಂದಿದೆ. ಮಗಳನ್ನು ಹತ್ಯೆಗೈದ ತಂದೆ ಮಂಜುನಾಥ್ನನ್ನು ಪೊಲೀಸರು ಬಂಧಿಸಿದ್ದಾರೆ.
ಮಂಜುನಾಥ್ ಹೆಂಡತಿ ಮೇಲೆ ಅನೈತಿಕ ಸಂಬಂಧದ ಅನುಮಾನ ಹೊಂದಿದ್ದನು. ಇದೇ ಅನುಮಾನದಲ್ಲಿ ಮಂಜುನಾಥ್ ನಿತ್ಯವೂ ಕುಡಿದು ಬಂದು, ಮನೆಯಲ್ಲಿ ಗಲಾಟೆ ಮಾಡುತ್ತಿದ್ದನು. ಇದೇ ಸೆಪ್ಟೆಂಬರ್ 19 ರಂದು ಕುಡಿದು ಮಧ್ಯಾಹ್ನ ಮನೆಗೆ ಬಂದ ಮಂಜುನಾಥ್ನನ್ನು ಐದು ವರ್ಷದ ಮಗಳು ಪ್ರಶ್ನಿಸಿದ್ದಾಳೆ. ಇದರಿಂದ ಕ್ರೋಧಗೊಂಡ ಮಂಜುನಾಥ್ ಕೊಳಪೆಯಿಂದ ಮಗಳ ಮೇಲೆ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾನೆ. ಅಜ್ಜಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.