'ಮಹಾರಾಷ್ಟ್ರ ಭೂಷಣ' ಪ್ರಶಸ್ತಿ ಸಮಾರಂಭ: ಅಮಿತ್ ಶಾ ಕಾರ್ಯಕ್ರಮದಲ್ಲಿ ಬಿಸಿಲಿನ ತಾಪದಿಂದ 11 ಮಂದಿ ಸಾವು, 123 ಜನ ಅಸ್ವಸ್ಥ
ಮುಂಬೈ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾಗವಹಿಸಿದ್ದ ನವಿ ಮುಂಬೈನಲ್ಲಿ ನಡೆದ ‘ಮಹಾರಾಷ್ಟ್ರ ಭೂಷಣ’ ಪ್ರಶಸ್ತಿ ಸಮಾರಂಭದಲ್ಲಿ ಬಿಸಿಲಿನ ತಾಪದಿಂದ ಸಾವನ್ನಪ್ಪಿದವರ ಸಂಖ್ಯೆ ಸೋಮವಾರ 11 ಕ್ಕೆ ಏರಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನವಿ ಮುಂಬೈನಲ್ಲಿ ಕಾರ್ಯಕ್ರಮ ನಡೆದಿದ್ದು, ದಿನದ ತಾಪಮಾನ ಗರಿಷ್ಠ 38 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಸಾಮಾಜಿಕ ಕಾರ್ಯಕರ್ತ ದತ್ತಾತ್ರೇಯ ನಾರಾಯಣ ಅಲಿಯಾಸ್ ಅಪ್ಪಾಸಾಹೇಬ್ ಧರ್ಮಾಧಿಕಾರಿ ಅವರಿಗೆ ಮಹಾರಾಷ್ಟ್ರ ಭೂಷಣ ಪ್ರಶಸ್ತಿ ಪ್ರದಾನ ಮಾಡಲಾದ ಈ ಮೆಗಾ ಕಾರ್ಯಕ್ರಮದಲ್ಲಿ ನಿನ್ನೆ 120ಕ್ಕೂ ಹೆಚ್ಚು ಜನ ಬಿಸಿಲಿನ ಝಳದಿಂದ ಡಿಹೈಡ್ರೇಶನ್ ಹಾಗೂ ಶಾಖ-ಸಂಬಂಧಿತ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಇವರಲ್ಲಿ ಹದಿಮೂರು ಜನರನ್ನು ವಿವಿಧ ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಖಾರ್ಘರ್ನ 306 ಎಕರೆ ವಿಸ್ತಾರವಾದ ಮೈದಾನದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಅಪ್ಪಾಸಾಹೇಬ್ ಧರ್ಮಾಧಿಕಾರಿಯ ಲಕ್ಷಾಂತರ ಅಭಿಮಾನಿಗಳು ಭಾಗವಹಿಸಿದ್ದರು.
ಮಹಾರಾಷ್ಟ್ರ ಸರ್ಕಾರ ನೀಡುವ ‘ಮಹಾರಾಷ್ಟ್ರ ಭೂಷಣ’ ಪ್ರಶಸ್ತಿಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಧರ್ಮಾಧಿಕಾರಿಗೆ ಪ್ರದಾನ ಮಾಡಿದರು.
ನಿನ್ನೆ ಬೆಳಗ್ಗೆಯಿಂದಲೇ ಜನ ಕಾರ್ಯಕ್ರಮಕ್ಕೆ ಆಗಮಿಸಿದ್ದರು ಮತ್ತು ಬೆಳಗ್ಗೆ 11.30ರ ಸುಮಾರಿಗೆ ಆರಂಭವಾದ ಕಾರ್ಯಕ್ರಮ ಮಧ್ಯಾಹ್ನ 1 ಗಂಟೆವರೆಗೆ ನಡೆಯಿತು.