ಮಹಾನಾಯಕಿಯನ್ನು ಮನೆಗೆ ಕಳಿಸ್ತೇವೆ: ರಮೇಶ ಜಾರಕಿಹೊಳಿ
ಬೆಳಗಾವಿ(ಮಾ.01): ಬೆಳಗಾವಿ ಗ್ರಾಮೀಣ ಶಾಸಕಿ ಕಳೆದ ಚುನಾವಣೆಯಲ್ಲಿ ಕುಕ್ಕರ್ ಕೊಟ್ಟಿದ್ದರು. ಈಗ ಮಿಕ್ಸರ್ ಕೊಡುತ್ತಿದ್ದಾರೆ. ಅವು ಡುಬ್ಲಿಕೇಟ್ ಇವೆ. ಹಾಗಾಗಿ, ಬೆಂಗಳೂರಿನ ಕಾಂಗ್ರೆಸ್ ಎಂಎಲ್‌ಎ ಕ್ಷೇತ್ರದಲ್ಲಿ 14 ಕಡೆಗಳಲ್ಲಿ ಬ್ಲಾಸ್ಟ್ ಆಗಿವೆ. ಕುಕ್ಕರ್ ಫ್ಯಾಕ್ಟರಿ ಕನಕಪುರದಲ್ಲಿದೆ. ಅಲ್ಲಿ ಡುಪ್ಲಿಕೇಟ್ ಮಾಡುವ ಮಹಾನಾಯಕರಿದ್ದಾರೆ. ಕುಕ್ಕರ್ ಬಗ್ಗೆ ಗ್ರಾಮೀಣ ಕ್ಷೇತ್ರದ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಉಚಗಾವಿಯಲ್ಲಿ ಮಂಗಳವಾರ ಮಳೆಕರಣಿ ದೇವಿ ದೇವಸ್ಥಾನದಲ್ಲಿ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಐಎಎಸ್ ಮಾರ್ಕ್ ಹೊಂದಿರುವ ಕುಕ್ಕರ್ ಮಾರುಕಟ್ಟೆಯಲ್ಲಿ 1200 ದಿಂದ ಲಭ್ಯಇವೆ. ಆದರೆ, ಗ್ರಾಮೀಣ ಶಾಸಕರು ಹಂಚುತ್ತಿರುವ ಕುಕ್ಕರ್ 100 ಸಿಗುತ್ತವೆ. ಇವು ಬಡವರ ಪ್ರಾಣಕ್ಕೆ ಮಾರಕ. ಹಾಗಾಗಿ, ಜನರು ಎಚ್ಚರಿಕೆಯಿಂದ ಇವುಗಳನ್ನು ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಮಹಾನಾಯಕಿಯನ್ನು ಚುನಾವಣೆಯಲ್ಲಿ ಮನೆಗೆ ಕಳುಹಿಸುತ್ತೇವೆ. ಯಾರಿಗೆ ಬಿಜೆಪಿ ಟಿಕೆಟ್ ನೀಡಿದರೂ ಅವರನ್ನು ಗೆಲ್ಲಿಸಿ ತರುವ ಸಂಕಲ್ಪ ಮಾಡಿದ್ದೇವೆ. ಕಳೆದ ಚುನಾವಣೆಯಲ್ಲಿ ಕುಕ್ಕರ್ ಕೊಟ್ಟರು. ಈಗ ಮಿಕ್ಸರ್ ಕೊಟ್ಟು ಮತದಾರರನ್ನು ತನ್ನ ಹದ್ದು ಬಸ್ತಿನಲ್ಲಿಡುವ ನಾಟಕವಾಡಿ ಗ್ರಾಮೀಣ ಶಾಸಕಿ ಇಡೀ ಕ್ಷೇತ್ರವನ್ನು ತನ್ನ ಮನೆಯಲ್ಲಿ ಒತ್ತೆಏಇಟ್ಟುಕೊಳ್ಳುವ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ. ಪ್ರತಿ ಗ್ರಾಮಕ್ಕೂ ಮಿಕ್ಸರ್ ಕೊಟ್ಟಿದ್ದಾರೆ. ಮೊದಗಾ ಗ್ರಾಮದಲ್ಲಿ ಬಹಿರಂಗವಾಗಿಯೇ ಕುಕ್ಕರ್ ಹಂಚಿದರು. ಇದನ್ನು ನಾನು ಸಭೆಯಲ್ಲಿ ಪ್ರಸ್ತಾಪ ಮಾಡಿದ್ದೆ. ಮಹಾನಾಯಕ ಹೋಗಿ ನನ್ನ ವಿರುದ್ಧ ದೂರು ಕೊಟ್ಟರು. ಮಹಾನಾಯಕನ ಕಣ್ಣು ಗ್ರಾಮೀಣ ಕ್ಷೇತ್ರದ ಮೇಲಷ್ಟೇ ಇದೆ. ಅವರಿಗೆ ಬೇರೆ ಕ್ಷೇತ್ರ ಕಾಣುವುದಿಲ್ಲ. ಗ್ರಾಮೀಣ ಶಾಸಕಿಯನ್ನು ಈ ಬಾರಿ ಸೋಲಿಸಲೇಬೇಕು. ನಾವು ಹುಷಾರಾಗಿರಬೇಕು. ಇಲ್ಲ ಎಂದರೆ ಅವರು ಅಲರ್ಟ ಆಗುತ್ತಾರೆ ಎಂದರು.
ವಿಧಾನ ಪರಿಷತ್ ಚುನಾವಣೆಯಲ್ಲಿ ನಾವು ಫೇಲ್ ಆದೇವು. ಜೀವನದಲ್ಲಿ ಮೊದಲ ಬಾರಿಗೆ ಚುನಾವಣೆಯನ್ನು ಬಹಳ ಸರಳವಾಗಿ ತೆಗೆದುಕೊಂಡಿದ್ದೇ ದೋಖಾ ಆಯಿತು. ಹಾಗಾಗಿ ಸೋತೇವು. ನಮ್ಮ ಟೀಮ್‌ದವರೇ ಮತ ಹಾಕಲಿಲ್ಲ. ಅವರ ಹೆಸರು ಕೇಳುವುದಕ್ಕೆ ಬರಲ್ಲ. ಮಹಾಂತೇಶ ಕವಟಗಿಮಠ ಗೆಲ್ಲಬೇಕಿತ್ತು. ದುರ್ದೈವ ಬಿಜೆಪಿ ತಪ್ಪು ಗ್ರಹಿಕೆ ಯಿಂದ ಫೇಲ್ ಆಗಿದೆ ಎಂದರು.
ಬಿಜೆಪಿಗೆ ಬೆಂಬಲಿಸುವಂತೆ ಎಂಇಎಸ್‌ಗೆ ಮನವಿ
ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ನೀಡುವಂತೆ ಎಂಇಎಸ್‌ಗೆ ಮನವಿ ಮಾಡಿದ ಜಾರಕಿಹೊಳಿ, ಎರಡು ಮರಾಠ ಅಭ್ಯರ್ಥಿ ನಿಲ್ಲಿಸಿದರೆ ದೋಖಾ ಆಗುತ್ತದೆ. ಗಡಿ ಕೇಸ್ ಸುಪ್ರೀಂಕೋರ್ಟನಲ್ಲಿದೆ. ಕೋರ್ಟ ತೀರ್ಪಿಗೆ ಎಲ್ಲರೂ ಒಪ್ಪಬೇಕಾಗುತ್ತದೆ. ನಾವಂತೂ ಮಹಾಜನ್ ಆಯೋಗ ವರದಿ ಒಪ್ಪಿದ್ದೇವೆ. ನೀವು ಅದನ್ನು ವಿರೋಧಿಸಿ ಕೋರ್ಟಗೆ ಹೋಗಿದ್ದೀರಿ. ಕೋರ್ಟ ತೀರ್ಪಿಗೆ ಎಲ್ಲರೂ ಬದ್ಧರಾಗೋಣ. ಬಿಜೆಪಿಗೆ ಬೆಂಬಲ ನೀಡಬೇಕು ಎಂದರು.
ಎಲ್ಲ ನೀರಾವರಿ ಯೋಜನೆ, ಆಸ್ಪತ್ರೆ ಸೇರಿ ಒಳ್ಳೆಯ ಕ್ಷೇತ್ರ ಮಾಡೋಣ. ಕಳೆದ 5 ವರ್ಷದಲ್ಲಿ ಗ್ರಾಮೀಣ ಕ್ಷೇತ್ರ ಕೆಡಿಸಿದ ಮಹಾನಾಯಕಿಯನ್ನು ಮನೆಗೆ ಕಳಿಸಿ, ಒಬ್ಬ ಸಂಭಾಯಿತ ಒಳ್ಳೆಯ ಮನುಷ್ಯನನ್ನು ಎಂಎಲ್‌ಎ ಮಾಡಿ. ಕಮಿಷನ್ ಏಜೆಂಟರ ಹಿಂದೆ ಬೀಳದೇ ಬಡವರ ಸೇವೆ ಮಾಡುವ ಎಂಎಲ್‌ಎ ಆರಿಸಿ ತರೋಣ. ಈಗಾಗಲೇ ಜಯ ಸಿಕ್ಕಿದೆ, ಜಯ ಸಿಕ್ಕಿದೆ ಎಂದು ಮೈ ಮರೆಯೋದು ಬೇಡ. ಎಲ್ಲರೂ ಇನ್ನು 90 ದಿವಸ ಕಣ್ಣಲ್ಲಿ ಎಣ್ಣೆ ಹಾಕಿಕೊಂಡು ಕೆಲಸ ಮಾಡೋಣ. ನಮ್ಮ ವಿರೋಧಿಗಳು ಪ್ರಬಲರು ಎಂದು ಕೆಲಸ ಮಾಡೋಣ ಎಂದರು.
ಇನ್ಮುಂದೆ ಸಭೆ ಸಮಾರಂಭ ಕಡಿಮೆ ಮಾಡಿ ಗ್ರಾಮ,ವಾರ್ಡ, ಪಂಚಾಯತಿ ಮಟ್ಟದಲ್ಲಿ ಕೆಲಸ ಬಿಜೆಪಿ ಗೆಲ್ಲಿಸುವ ಕೆಲಸ ಮಾಡಬೇಕು. ಬಿಜೆಪಿ ವರಿಷ್ಠರು ಯಾರಿಗೆ ಟಿಕೆಚ್ ನೀಡುತ್ತಾರೋ ಅವರನ್ನು ಆರಿಸಿ ತರೋಣ ಎಂದು ಹೇಳಿದರು.
ಬಿಜೆಪಿ ನಾಯಕರಾದ ಕಿರಣ ಜಾಧವ, ನಾಗೇಶ ಮನ್ನೋಳಕರ ಮೊದಲಾದವರು ಉಪಸ್ಥಿತರಿದ್ದರು. ಸಭೆಯ ಬಳಿಕ ರಮೇಶ ಜಾರಕಿಹೊಳಿ, ನಾಗೇಶ ಮನ್ನೋಳಕರ ನೇತೃತ್ವದಲ್ಲಿ ಬಾಡೂಟ ವ್ಯವಸ್ಥೆಯನ್ನು ಮಾಡಲಾಗಿತ್ತು. ಸಭೆಗೆ ಆಗಮಿಸಿದ್ದ ಐದು ಸಾವಿರಕ್ಕೂ ಹೆಚ್ಚು ಜನರು ಬಾಡೂಟ ಸವಿದರು.