ಮರಕ್ಕೆ ಡಿಕ್ಕಿ ಹೊಡೆದ ಕಾರು: ಇಬ್ಬರು ವೈದ್ಯರು, ಓರ್ವ ವಕೀಲ ಸ್ಥಳದಲ್ಲೇ ಸಾವು
![ಮರಕ್ಕೆ ಡಿಕ್ಕಿ ಹೊಡೆದ ಕಾರು](https://urtv24.com/wp-content/uploads/2024/12/1bellary_accident_image.webp)
ಬಳ್ಳಾರಿ: ಮರಕ್ಕೆ ಕಾರು (Car) ಡಿಕ್ಕಿ ಹೊಡೆದು ಇಲ್ಲಿನ ಬಿಮ್ಸೌ ಆಸ್ಪತ್ರೆಯ ಇಬ್ಬರು ವೈದ್ಯರು ಹಾಗೂ ವಕೀಲರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಆಂಧ್ರಪ್ರದೇಶದ (Andhra pradesh) ಅನಂತಪುರ ಜಿಲ್ಲೆ ವಿಡಪನಕಲ್ (Vidapanakal) ಇಂದು ಮುಂಜಾನೆ ಸಂಭವಿಸಿದೆ.
ಬಳ್ಳಾರಿಯ (Ballari ) ನಿವಾಸಿ ಡಾ.ಗೋವಿಂದರಾಜುಲು, ಡಾ.ಯೋಗೇಶ್ ಮತ್ತು ವಕೀಲ ವೆಂಕಟನಾಯ್ಡು (55) ಮೃತ ದುರ್ದೈವಿಗಳು. ಕಾರಿನಲ್ಲಿದ್ದ ಮತ್ತೊಬ್ಬ ಖಾಸಗಿ ಆಸ್ಪತ್ರೆ ವೈದ್ಯ ಅಮರೇಗೌಡ ಪಾಟೀಲ್ ಅವರು ಕೂಡ ತೀವ್ರವಾಗಿ ಗಾಯಗೊಂಡಿದ್ದು ಅವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿದೇಶಿ ಪ್ರವಾಸಕ್ಕೆ ತೆರಳಿದ್ದ ಇವರು ಕಳೆದ ರಾತ್ರಿ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿ ನಂತರ ಅನಂತಪುರ ಮಾರ್ಗವಾಗಿ ಕಾರಿನಲ್ಲಿ ಬಳ್ಳಾರಿಗೆ ವಾಪಸಾಗುತ್ತಿದ್ದ ವೇಳೆ ಮುಂಜಾನೆ 5.30ರ ಸಂದರ್ಭದಲ್ಲಿ ಅಪಘಾತ ನಡೆದಿದೆ.
ಬೆಳಗಿನ ಜಾವ ನಿದ್ದೆ ಮಂಪರಿನಲ್ಲಿ ರಸ್ತೆ ಪಕ್ಕದ ಮರಕ್ಕೆ ಕಾರು ಡಿಕ್ಕಿಯಾಗಿದೆ ಅಪಘಾತದ ರಭಸಕ್ಕೆ ವಾಹನ ಸಂಪೂರ್ಣ ನಜ್ಜುಗುಜಾಗಿದೆ.ಅಪಘಾತ ನಂತರ ಸ್ಥಳೀಯರು ಕಾರಿನಲ್ಲಿದ್ದವರ ರಕ್ಷಣೆಗೆ ಮುಂದಾದರು ಕೂಡ ಅವರ ದೇಹಗಳು ವಾಹನದಲ್ಲಿ ಸಿಲುಕಿತ್ತು.ಪೊಲೀಸರು ಸ್ಥಳಕ್ಕೆ ದಾವಿಸಿ ಪರಿಶೀಲನೆ ನಂತರ ಶವಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ ಬೆಳಿಗ್ಗೆ 6.30ಕ್ಕೆ ಬಳ್ಳಾರಿ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಬೆಂಗಳೂರು ವಿಮಾನ ನಿಲ್ದಾಣದಿಂದ ಅನಂತಪುರ ಮಾರ್ಗವಾಗಿ ಬರುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಬೆಳಗಿನ ಜಾವ ನಿದ್ದೆ ಮಂಪರಿನಲ್ಲಿ ಅಪಘಾತ ಸಂಭವಿಸಿರಬಹುದು ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ.
ಟಿಪ್ಪರ್‌ಗೆ ಡಿಕ್ಕಿ ಹೊಡೆದ ಬೈಕ್ – ಸವಾರ ಸ್ಥಳದಲ್ಲೇ ಸಾವು:
ಬೆಂಗಳೂರು: ಟಿಪ್ಪರ್ ಲಾರಿ ಹಾಗೂ ಬೈಕ್ ನಡುವೆ ನಡೆದ ಅಪಘಾತದಲ್ಲಿ (Accident) ಬೈಕ್ ಚಾಲಕ ಸಾವನ್ನಪ್ಪಿದ ಘಟನೆ ಆನೇಕಲ್‍ನಲ್ಲಿ (Anekal) ನಡೆದಿದೆ.
ಮೃತನನ್ನು ಆನೇಕಲ್ ಪಟ್ಟಣದ ನಿವಾಸಿ ಪ್ರೇಮ್ ಕುಮಾರ್ ಎಂದು ಗುರುತಿಸಲಾಗಿದೆ. ಆನೇಕಲ್ ಪಟ್ಟಣದ ಅನ್ನಪೂರ್ಣೇಶ್ವರಿ ಚಿತ್ರ ಮಂದಿರದ ರಸ್ತೆಯಲ್ಲಿ ಈ ಅಪಘಾತ ನಡೆದಿದೆ. ಒನ್ ವೇನಲ್ಲಿ ವೇಗವಾಗಿ ದ್ವಿಚಕ್ರ ವಾಹನದಲ್ಲಿ ಪ್ರೇಮ್ ಬಂದಿದ್ದಾನೆ. ಈ ವೇಳೆ ಟಿಪ್ಪರ್ ಹಿಂಬದಿ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ್ದಾನೆ.
ಕಲ್ಲನ್ನು ತಪ್ಪಿಸಲು ಹೋಗಿ ಲಾರಿಯತ್ತ ಬೈಕ್‍ನ್ನು ಪ್ರೇಮ್ ತಿರುಗಿಸಿದ್ದಾನೆ. ಮೃತದೇಹವನ್ನು ಆನೇಕಲ್‍ನ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.