ಮಧ್ವಾಲ್ ಮಾರಕ ದಾಳಿ, ಲಖನೌ ಔಟ್; ಮುಂಬೈಗೆ 81ರನ್‌ಗಳ ಭರ್ಜರಿ ಜಯ
ಚೆನ್ನೈ(ಮೇ.24): ಐಪಿಎಲ್ 2023 2ನೇ ಕ್ವಾಲಿಫೈಯರ್ ಪಂದ್ಯಕ್ಕೆ ಮುಂಬೈ ಇಂಡಿಯನ್ಸ್ ಎಂಟ್ರಿಕೊಟ್ಟಿದೆ. ಲಖನೌ ಸೂಪರ್ ಜೈಂಟ್ಸ್ ವಿರುದ್ಧ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 81 ರನ್ ಗೆಲುವು ದಾಖಲಿಸಿತು. ಈ ಮೂಲಕ ಐಪಿಎಲ್ ಫೈನಲ್ ಪ್ರವೇಶದ ಕನಸು ಜೀವಂತವಾಗಿರಿಸಿದೆ. ಅದೃಷ್ಠ ಮೇಲೆ ಪ್ಲೇ ಆಫ್ ಪ್ರವೇಶಿಸಿದ ಮುಂಬೈ ಇಂಡಿಯನ್ಸ್ ಅದ್ಬುತ ಪ್ರದರ್ಶನದ ಮೂಲಕ ಇತರ ತಂಡಗಳಿಗೆ ನಡುಕ ಹುಟ್ಟಿಸಿದೆ. ಇತ್ತ ಎಲಿಮಿನೇಟರ್ ಪಂದ್ಯದಲ್ಲಿ ಮುಗ್ಗರಿಸಿದ ಲಖನೌ ಸೂಪರ್ ಜೈಂಟ್ಸ್ ಟೂರ್ನಿಯಿಂದ ಹೊರಬಿದ್ದಿದೆ.
ಚಿಪಾಕ್ ಮೈದಾನದಲ್ಲಿ 183 ರನ್ ಟಾರ್ಗೆಟ್ ಚೇಸ್ ಅತ್ಯಂತ ಸವಾಲು. ಆದರೆ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿದ ಲಖನೌ ಸೂಪರ್ ಜೈಂಟ್ಸ್ ತಂಡಕ್ಕೆ ಆಕಾಶ್ ಮಧ್ವಾಲ್ ಆರಂಭದಲ್ಲೇ ಶಾಕ್ ನೀಡಿದರು. ಇನ್ನಿಂಗ್ಸ್ ಆರಂಭಿಸಿದ ಕೆಲ ಹೊತ್ತಲ್ಲೇ ಲಖನೌ ಮೊದಲ ವಿಕೆಟ್ ಕಳೆದುಕೊಂಡಿತು. ಪ್ರೇರಕ್ ಮಂಕಡ್ ಕೇವಲ 3 ರನ್ ಸಿಡಿಸಿ ಔಟಾದರು. ಕೈಲ್ ಮೇಯರ್ಸ್ ಸ್ಫೋಟಕ ಬ್ಯಾಟಿಂಗ್ ಮೂಲಕ ಅಬ್ಬರಿಸುವ ಸೂಚನೆ ನೀಡಿದರು. ಆದರೆ ಕ್ರಿಸ್ ಜೋರ್ಡಾನ್ ಎಸೆತದಲ್ಲಿ ಮೇಯರ್ಸ್ ವಿಕೆಟ್ ಕೈಚೆಲ್ಲಿದರು. ಮೇಯರ್ಸ್ 18 ರನ್ ಸಿಡಿಸಿ ಔಟಾದರು.
ನಾಯಕ ಕ್ರುನಾಲ್ ಪಾಂಡ್ಯ ಕೇವಲ 8 ರನ್ ಸಿಡಿಸಿ ನಿರ್ಗಮಿಸಿದರು. ಆದರೆ ಮಾರ್ಕಸ್ ಸ್ಟೊಯ್ನಿಸ್ ಸ್ಫೋಟಕ ಬ್ಯಾಟಿಂಗ್ ಮೂಲಕ ಮುಂಬೈ ಇಂಡಿಯನ್ಸ್ ತಲೆನೋವು ಹೆಚ್ಚಿಸಿದರು. ಸ್ಟೊಯ್ನಿಸ್‌ಗೆ ಯಾರಿಂದಲೂ ಉತ್ತಮ ಸಾಥ್ ಸಿಗಲಿಲ್ಲ. ಆಯುಷ್ ಬದೋನಿ ಕೇವಲ 1 ರನ್ ಡಿಸಿದರೆ, ನಿಕೋಲಸ್ ಪೂರನ್ ಖಾತೆ ತೆರೆಯುವ ಮುನ್ನವೇ ಪೆವಿಲಿಯನ್ ಸೇರಿದರು.
ನಿಕೋಲಸ್ ಪೂರನ್ ಸ್ಫೋಟಕ ಬ್ಯಾಟಿಂಗ್ ಮೂಲಕ 27 ಎಸೆತದಲ್ಲಿ 40 ರನ್ ಸಿಡಿಸಿದರು. ಆದರೆ ರನೌಟ್‌ಗೆ ಬಲಿಯಾಗುವ ಮೂಲಕ ಲಖನೌ ತಂಡದ ಗೆಲುವಿನ ಆಸೆಗೆ ತಣ್ಣೀರೆರಚಿದರು. ದೀಪಕ್ ಹೂಡ ಹೋರಾಟ ಮುಂದುವರಿಸಿದರು. ಆದರೆ ಅನಗತ್ಯ ರನ್ ಕದಿಯಲು ಹೋದ ಕೆ ಗೌತಮ್ ರನೌಟ್‌ಗೆ ಬಲಿಯಾದರು. ಲಖನೌ ಸೂಪರ್ ಜೈಂಟ್ಸ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ದೀಪಕ್ ಹೂಡ 15 ರನ್ ಸಿಡಿಸಿ ರನೌಟ್ ಆದರು. ಇತ್ತ ರವಿ ಬಿಷ್ಣೊಯ್ 3 ರನ್ ಸಿಡಿಸಿ ನಿರ್ಗಮಿಸಿದರು. ಮೊಹ್ಸಿನ್ ಖಾನ್ ವಿಕೆಟ್ ಪತನದೊಂದಿಗೆ ಲಖನೌ ಸೂಪರ್ ಜೈಂಟ್ಸ್ 16.3 ಓವರ್‌ಗಳಲ್ಲಿ 101 ರನ್‌ಗೆ ಆಲೌಟ್ ಆಯಿತು. ಮುಂಬೈ ಇಂಡಿಯನ್ಸ್ 81 ರನ್ ಬರ್ಜರಿ ಗೆಲುವು ದಾಖಲಿಸಿ 2ನೇ ಕ್ವಾಲಿಫೈಯರ್ ಪಂದ್ಯಕ್ಕೆ ಅರ್ಹತೆ ಪಡೆಯಿತು. ಮೇ. 26 ರಂದು ಮುಂಬೈ ಇಂಡಿಯನ್ಸ್ ಗುಜರಾತ್ ಟೈಟಾನ್ಸ್ ವಿರುದ್ಧ ಹೋರಾಟ ನಡೆಸಲಿದೆ.
ಮುಂಬೈ ಇನ್ನಿಂಗ್ಸ್: ಎಲಿಮಿನೇಟರ್ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ನೇರಾಗಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಅದಕ್ಕೆ ತಕ್ಕ ಆರಂಭ ಸಿಗಲಿಲ್ಲ. ನಾಯಕ ರೋಹಿತ್ ಶರ್ಮಾ 11 ರನ್ ಸಿಡಿಸಿ ನಿರ್ಗಮಿಸಿದರು.ಇಶಾನ್ ಕಿಶನ್ 15 ರನ್ ಸಿಡಿಸಿ ಔಟಾದರು. ಇತ್ತ ಕ್ಯಾಮರೂನ್ ಗ್ರೀನ್ ಹಾಗೂ ಸೂರ್ಯಕುಮಾರ್ ಯಾದವ್ ಜೊತೆಯಾಟದಿಂದ ಮುಂಬೈ ಅಬ್ಬರ ಆರಂಭಗೊಂಡಿತು. ಸೂರ್ಯಕುಮಾರ್ ಯಾದವ್ 33 ರನ್ ಸಿಡಿಸಿದರೆ, ಗ್ರೀನ್ 44 ರನ್ ಕಾಣಿಕೆ ನೀಡಿದರು. ತಿಲಕ್ ವರ್ಮಾ 26, ಟಿಮ್ ಡೇವಿಡ್ 13, ನೆಹಾಲ್ ವಧೇರಾ 23 ರನ್ ಸಿಡಿಸಿದರು. ಅಂತಿಮವಾಗಿ 8 ವಿಕೆಟ್ ನಷ್ಟಕ್ಕೆ 182 ರನ್ ಸಿಡಿಸಿತು.