ಮದುವೆ ವಿಚಾರದಲ್ಲಿ ನಟಿ ತ್ರಿಷಾಗೆ ನಟರೇ ಮೋಸ ಮಾಡಿದರು
ತಮಿಳಿನ ಹೆಸರಾಂತ ನಟಿ ತ್ರಿಷಾ (Trisha) ಮದುವೆ ವಿಚಾರವಾಗಿ ದಿನಕ್ಕೊಂದು ಸುದ್ದಿ ಬರುತ್ತಿವೆ. ಮೊನ್ನೆಯಷ್ಟೇ ‘ಪೊನ್ನಿಯನ್ ಸೆಲ್ವನ್ 2’ ಪತ್ರಿಕಾಗೋಷ್ಠಿಯಲ್ಲಿ ತ್ರಿಷಾ ಮದುವೆ ವಿಚಾರ ಮಾತನಾಡಿದ್ದರು. ‘ಮದುವೆ ಎನ್ನುವುದು ಕನಸಿನ ಮಾತು, ನನ್ನ ಜೀವನ ಅಭಿಮಾನಿಗಳಿಗೆ ಮೀಸಲು’ ಎಂದಿದ್ದರು. ಅಲ್ಲಿಗೆ ನಲವತ್ತರ ಸನಿಹದ ತ್ರಿಷಾ ಮದುವೆ ಆಗಲ್ಲವಾ ಎನ್ನುವ ಅನುಮಾನ ಮೂಡಿತ್ತು.
ಈ ಹಿಂದೆ ತ್ರಿಷಾ ಉದ್ಯಮಿಯೊಬ್ಬರನ್ನು ಮದುವೆ (Marriage) ಆಗಲಿದ್ದಾರೆ ಎಂದು ಸುದ್ದಿ ಆಗಿತ್ತು. ಎಲ್ಲ ಸಿದ್ಧತೆಯನ್ನೂ ಮಾಡಿಕೊಳ್ಳಲಾಗಿತ್ತು. ಆದರೆ, ಕೊನೆ ಕ್ಷಣದಲ್ಲಿ ಮದುವೆ ಕ್ಯಾನ್ಸಲ್ ಆಯಿತು ಎನ್ನುವ ಮಾಹಿತಿ ಹೊರಬಿತ್ತು. ಈ ಹಿಂದೆಯೂ ತ್ರಿಷಾ ಅವರ ಜೀವನದಲ್ಲಿ ಲವ್ ಫೆಲ್ಯೂವರ್ ಆಗಿದ್ದರಿಂದ ಮದುವೆ ವಿಚಾರವನ್ನೇ ಅವರು ಮರೆತಿದ್ದಾರೆ ಎಂದು ಹೇಳಲಾಗಿತ್ತು.
ಈ ಮದುವೆ ವಿಚಾರವಾಗಿ ನಟ, ವಿವಾದಿತ ಯೂಟ್ಯೂಬರ್ ಬೈಲ್ವಾನ್ ರಂಗನಾಥನ್ (Bailwan Ranganathan) ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ. ಇವರ ಹೇಳಿಕೆ ತಮಿಳು ಚಿತ್ರೋದ್ಯಮದಲ್ಲಿ ಭಾರೀ ಸಂಚಲನವನ್ನೇ ಸೃಷ್ಟಿ ಮಾಡಿದೆ. ಇಬ್ಬರು ಸ್ಟಾರ್ ನಟರ ಅಭಿಮಾನಿಗಳು ಬೈಲ್ವಾನ್ ರಂಗನಾಥನ್ ವಿರುದ್ಧ ಹರಿಹಾಯ್ದಿದ್ದಾರೆ.
ತ್ರಿಷಾ ಈವರೆಗೂ ಮದುವೆ ಆಗದೇ ಇರುವುದಕ್ಕೆ ಕಾರಣ ಸ್ಟಾರ್ ನಟರಾದ ಸಿಂಬು (Simbu) ಮತ್ತು ರಾಣಾ (Rana) ಎಂದು ಬೈಲ್ವಾನ್ ಹೇಳಿದ್ದಾರೆ. ಇಬ್ಬರ ಜೊತೆಯೂ ತ್ರಿಷಾ ಲವ್ ಇತ್ತು. ಒಬ್ಬರ ನಂತರ ಒಬ್ಬರು ತ್ರಿಷಾಗೆ ಮೋಸ ಮಾಡಿ ದೂರವಾದರು. ಇದರಿಂದಾಗಿ ತ್ರಿಷಾ ಮದುವೆ ಆಗದೇ ಹಾಗೆಯೇ ಉಳಿದುಕೊಂಡಿದ್ದಾರೆ ಎಂದು ಬೈಲ್ವಾನ್ ಮಾತನಾಡಿದ್ದಾರೆ.
ಬೈಲ್ವಾನ್ ರಂಗನಾಥನ್ ಈ ರೀತಿಯ ಹೇಳಿಕೆಗಳನ್ನು ಕೊಡುವುದು ಇದೇ ಮೊದಲೇನೂ ಅಲ್ಲ. ಈ ಹಿಂದೆ ಅನೇಕ ಕಲಾವಿದರ ಮತ್ತು ನಿರ್ದೇಶಕರ ವಿರುದ್ಧ ಸಾಕಷ್ಟು ಹೇಳಿಕೆಗಳನ್ನು ನೀಡಿದ್ದಾರೆ. ಅವೆಲ್ಲವೂ ವಿವಾದವಾಗಿಯೇ ಕೊನೆಗೊಂಡಿವೆ. ಈ ಬಾರಿ ತ್ರಿಷಾ ಗೂಡಿಗೆ ಅವರು ಕಲ್ಲು ಹೊಡೆದಿದ್ದಾರೆ. ಈ ಕುರಿತು ತ್ರಿಷಾ ಏನು ಹೇಳುತ್ತಾರೋ ಕಾದು ನೋಡಬೇಕು.