ಉಪ್ಪಿನಂಗಡಿ: ಚುನಾವಣ ನೀತಿ ಸಂಹಿತಿ ಜಾರಿಯಾಗುವ ಮುನ್ನವೇ ಮುದ್ರಿತವಾದ ವಿವಾಹ ಆಮಂತ್ರಣ ಪತ್ರದಲ್ಲಿ “ಈ ಬಾರಿಯೂ ನರೇಂದ್ರ ಮೋದಿಯನ್ನು ಪ್ರಧಾನಿ ಮಾಡುವುದೇ ವಧೂವರರಿಗೆ ನೀಡುವ ಉಡುಗೊರೆ’ ಎಂದು ದಾಖಲಿಸಿರುವುದಕ್ಕೆ ವರನ ವಿರುದ್ದ ನೀತಿ ಸಂಹಿತೆ ಜಾರಿ ನಿಗಾ ತಂಡದ ಅಧಿಕಾರಿಗಳು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಮದುವೆ ಆಮಂತ್ರಣದಲ್ಲಿ ಚುನಾವಣಾ ಪ್ರಚಾರ : ನೀತಿ ಸಂಹಿತೆಯಡಿ ಪ್ರಕರಣ ದಾಖಲು
Twitter
Facebook
LinkedIn
WhatsApp
ಕಡಬ ತಾಲೂಕು ಆಲಂತಾಯ ಗ್ರಾಮದ ಶಿವಾರು ಶಿವಪ್ಪ ಗೌಡ ಅವರ ಮಗ ಶಿವಪ್ರಸಾದ್ ಯಾನೆ ರವಿ ಅವರ ವಿವಾಹವು ಕಡಬ ತಾಲೂಕು ಹಳೆನೇರಂಕಿ ಗ್ರಾಮದ ಕೊಳಂಬೆ ಬಾಬು ಗೌಡರ ಮಗಳು ಪ್ರಮೀಳಾ ಕೆ ಅವರೊಂದಿಗೆ ಎ. 18ರಂದು ಗೋಳಿತೊಟ್ಟು ಸಿದ್ದಿವಿನಾಯಕ ಕಲಾ ಮಂದಿರದಲ್ಲಿ ಜರಗಿತ್ತು. ವಿವಾಹದ ಅಂಗವಾಗಿ ಸಿದ್ದಪಡಿಸಲಾದ ಆಮಂತ್ರಣ ಪತ್ರವನ್ನು ಮಾರ್ಚ್ 1ರಂದು ಮುದ್ರಿಸಲಾಗಿದ್ದು, ಈ ಆಮಂತ್ರಣ ಪತ್ರದಲ್ಲಿ “ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತೆ ಪ್ರಧಾನಿ ಮಾಡುವುದೇ ನೀವು ನಮಗೆ ನೀಡುವ ಉಡುಗೊರೆ’ ಎಂದು ಶಿವಪ್ರಸಾದ್ ಅವರು ಉಲ್ಲೇಖಿಸಿದ್ದರು.
ಈ ಬಗ್ಗೆ ಮಾಹಿತಿ ಪಡೆದುಕೊಂಡ ಚುನಾವಣ ನೀತಿ ಸಂಹಿತೆ ಜಾರಿ ನಿಗಾ ತಂಡದ ಅಧಿಕಾರಿಗಳು ಎಪ್ರಿಲ್ 14ರಂದು ವರನ ಮನೆಗೆ ಭೇಟಿ ನೀಡಿ ವಿಚಾರಿಸಿದಾಗ, ತಾನು ಮಾರ್ಚ್ 1ರಂದೇ 800 ಆಮಂತ್ರಣ ಪತ್ರವನ್ನು ಮುದ್ರಿಸಿದ್ದು, ಅದರಲ್ಲಿ ಹತ್ತು ಆಮಂತ್ರಣ ಪತ್ರ ಹೊರತುಪಡಿಸಿ ಎಲ್ಲವನ್ನೂ ಹಂಚಲಾಗಿದೆ. ಚುನಾವಣ ನೀತಿ ಸಂಹಿತೆ ಜಾರಿಯಾಗುವ ಮೊದಲೇ ಆಮಂತ್ರಣ ಪತ್ರವನ್ನು ಮುದ್ರಿಸಿ, ವಿತರಿಸಲಾಗಿದ್ದು ಇದು ಚುನಾವಣ ನೀತಿ ಸಂಹಿತೆಯ ಉಲ್ಲಂಘನೆಯಾಗಿರುವುದಿಲ್ಲ. ಪ್ರಧಾನಿ ಮೋದಿಯ ಮೇಲಿನ ಪ್ರೀತಿ ಹಾಗೂ ರಾಷ್ಟ್ರದ ಮೇಲಿನ ಕಾಳಜಿಯಿಂದ ಇದನ್ನು ಉಲ್ಲೇಖೀಸಲಾಗಿದೆಯೇ ವಿನಃ ಕಾನೂನನ್ನು ಉಲ್ಲಂಘಿಸುವ ಬೇರಾವುದೇ ಉದ್ದೇಶವನ್ನು ಹೊಂದಿರುವುದಿಲ್ಲ ಎಂದು ಲಿಖಿತವಾಗಿ ಮನವಿ ಸಲ್ಲಿಸಿದ್ದರು.
ಬಳಿಕ ಎ.18ರಂದು ವಿವಾಹ ಸಾಂಗವಾಗಿ ನೆರವೇರಿದ್ದು, ಎ.26ರ ಚುನಾವಣೆಯೂ ಮುಗಿದ ಬಳಿಕ ಅಧಿಕಾರಿಗಳು ಪೊಲೀಸ್ ಇಲಾಖೆಗೆ ದೂರು ಸಲ್ಲಿಸಿದ್ದು, ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶನಿವಾರದಂದು ಆಮಂತ್ರಣ ಪತ್ರಿಕೆ ಮುದ್ರಣ ಮಾಡಿದ ಸಂಸ್ಥೆಯ ಮಾಲಕರನ್ನು ಕರೆಯಿಸಿ ಮಹಜರು ಪ್ರಕ್ರಿಯೆಯನ್ನು ನಡೆಸಲಾಯಿತು.