ಮತದಾನ ಬಳಿಕ ಇವಿಎಂ ಯಂತ್ರಗಳನ್ನೇ ಮರೆತು ಹೋದ ಅಧಿಕಾರಿಗಳು ; ಸಾರ್ವಜನಿಕರಿಂದ ಆಕ್ರೋಶ!
ಚಿಕ್ಕಮಗಳೂರು: ಅತ್ಯಂತ ಜಾಗರೂಕತೆಯಿಂದ ನಡೆಯಬೇಕಾದ ಚುನಾವಣೆಯಲ್ಲಿ ಅಧಿಕಾರಿಗಳು ಎಡವಟ್ಟು ಮಾಡಿಕೊಂಡ ಪ್ರಕರಣವೊಂದು ನಡೆದಿದೆ. ಅದರಲ್ಲೂ ಬಹುಮುಖ್ಯವಾದ ಇವಿಎಂ ಯಂತ್ರಗಳನ್ನೇ ಮತದಾನದ ಬಳಿ ಮರೆತು ಬಿಟ್ಟುಹೋದ ಪ್ರಸಂಗ ನಡೆದಿದೆ.ಚಿಕ್ಕಮಗಳೂರು ನಗರದ ಪೆನ್ಷನ್ ಮೊಹಲ್ಲಾದಲ್ಲಿ ಈ ಘಟನೆ ನಡೆದಿದೆ. ಮತದಾನ ಮುಗಿದ ಬಳಿಕ ಮರಳುವಾಗ ಇವಿಎಂ ಯಂತ್ರಗಳನ್ನು ಅಧಿಕಾರಿಗಳು ಮರೆತು ಕಾಲೇಜಿನಲ್ಲೇ ಬಿಟ್ಟುಹೋಗಿದ್ದಾಗಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕಾಲೇಜಿನಲ್ಲಿ 168 ಹಾಗೂ 169ನೇ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಮತದಾನದ ಬಳಿಕ 169ರ ಮತಗಟ್ಟೆಯಲ್ಲಿನ ಯಂತ್ರಗಳನ್ನು ತೆಗೆದುಕೊಂಡು ಹೋಗಿದ್ದ ಅಧಿಕಾರಿಗಳು, 168ರಲ್ಲಿನ ಯಂತ್ರಗಳನ್ನು ಬಿಟ್ಟುಹೋಗಿದ್ದರು. ನಂತರ ಈ ಮತಯಂತ್ರಗಳನ್ನು ಕಂಡ ಪಕ್ಷಗಳ ಏಜೆಂಟರು, ಸ್ಥಳೀಯರು ಚುನಾವಣಾ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಮೇಲೆ ಅಧಿಕಾರಿಗಳಿಗೆ ಕರೆ ಮಾಡಿದ ಸ್ಥಳೀಯರು, ಇವಿಎಂ ಯಂತ್ರಗಳನ್ನು ಬಿಟ್ಟುಹೋಗಿದ್ದನ್ನು ತಿಳಿಸಿ, ಸ್ಥಳಕ್ಕೆ ಕರೆಸಿದ್ದರು. ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಪೊಲೀಸ್ ಭದ್ರತೆಯಲ್ಲಿ ಮತಯಂತ್ರಗಳನ್ನು ತೆಗೆದುಕೊಂಡು ಹೋದರು. ಪೆನ್ಷನ್ ಮೊಹಲ್ಲಾದ ಬೂತ್ನಲ್ಲಿ 700 ಮತಗಳಿವೆ, ಮತ ಎಣಿಕೆಯ ದಿನ ಅಷ್ಟೂ ಲೆಕ್ಕ ಸರಿಯಾಗಿ ಇರಬೇಕೆಂದು ಸ್ಥಳೀಯರು ತಾಕೀತು ಮಾಡಿ ಕಳಿಸಿದರು.