ಮಡಿಕೇರಿ : ಹುಲಿ ದಾಳಿಗೆ ಕಾರ್ಮಿಕ ಯುವಕ ಬಲಿ
ಮಡಿಕೇರಿ: ನರಭಕ್ಷಕ ಹುಲಿಯ (Tiger) ಬಾಯಿಗೆ ಸಿಲುಕಿ ಕಾರ್ಮಿಕ ಯುವಕನೋರ್ವ ಮೃತಪಟ್ಟ ಘಟನೆ ಕೊಡಗು-ಕೇರಳ ಗಡಿಭಾಗವಾದ ಚೂರಿಕಾಡು (Churikadau) ಬಳಿ ನಡೆದಿದೆ.
ಪಿರಿಯಾಪಟ್ಟಣ ತಾಲೂಕಿನ ಪಂಚವಳ್ಳಿ ಗ್ರಾಮದ ಕಾರ್ಮಿಕ ಚೇತನ್ (18) ಹುಲಿ ದಾಳಿಗೆ ಬಲಿಯಾದ ಯುವಕ. ಭಾನುವಾರ ಮಧ್ಯಾಹ್ನದ ವೇಳೆ ತನ್ನ ದೈನಂದಿನ ಕಾಫಿ ಕೆಲಸದಲ್ಲಿ ತೊಡಗಿದ್ದ ಸಂದರ್ಭ ತೋಟದಲ್ಲಿದ್ದ ನರಭಕ್ಷಕ ಹುಲಿ ಯುವಕನ ಮೇಲೆ ದಾಳಿ ನಡೆಸಿ ಕೊಂದು ಹಾಕಿದೆ.
ಚೇತನ್ ತಂದೆ ಕಾರ್ಮಿಕ ಮಧು ತನ್ನ ಮಗನನ್ನು ಹುಡುಕಿಕೊಂಡು ಬರುತ್ತಿದ್ದ ವೇಳೆ ತೋಟದ ಮಾರ್ಗದಲ್ಲಿ ಹುಲಿಯು ಮತ್ತೆ ಪ್ರತ್ಯಕ್ಷಗೊಂಡಿದೆ. ಹುಲಿ ಮಧು ಮೇಲೂ ದಾಳಿ ಮಾಡಿ ಹೊಟ್ಟೆಯ ಭಾಗಕ್ಕೆ ಗಾಯಗೊಳಿಸಿದೆ. ಈ ವೇಳೆ ಮಧು ಜೋರಾಗಿ ಕಿರುಚಿಕೊಂಡಿದ್ದು, ಹುಲಿಯು ಮತ್ತೆ ಕಾಫಿ ತೋಟದಲ್ಲಿ ಮರೆಯಾಗಿದೆ.
ಈ ವಿಷಯ ತಿಳಿದ ಕಾಫಿ ತೋಟದ ಮಾಲೀಕರು ಸಂಬಂಧಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಹೊಂದಿಕೊಂಡಿರುವ ಪ್ರದೇಶದ ಅಂಚಿನಲ್ಲಿ ಈ ಘಟನೆ ನಡೆದಿದ್ದು ಸುದ್ದಿ ತಿಳಿದ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅರಣ್ಯ ಇಲಾಖೆಯ ಎಸಿಎಫ್ ಗೋಪಾಲ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತಪಟ್ಟ ಯುವಕ ಚೇತನ್ ತಂದೆ ಮಧುವಿಗೆ ಆರಂಭಿಕವಾಗಿ 2.50 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಲಾಗಿದೆ. ಒಟ್ಟು 15 ಲಕ್ಷ ರೂ. ಪರಿಹಾರ ನೀಡುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕುಟ್ಟ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.