ಮಡಿಕೇರಿ ಫರ್ನಿಚರ್ ಅಂಗಡಿಯಲ್ಲಿ ಅವಘಡ – 7 ಗಂಟೆ ಕಾರ್ಯಾಚರಣೆ ನಡೆಸಿದ್ರೂ ನಿಯಂತ್ರಣಕ್ಕೆ ಬಾರದ ಅಗ್ನಿ
ಮಡಿಕೇರಿ: ನಗರದಲ್ಲಿ ಇರುವ ಪೀಠೋಪಕರಣಗಳ ಅಂಗಡಿಯೊಂದರಲ್ಲಿ (Furniture Store) ಸೋಮವಾರ ನಸುಕಿನ ವೇಳೆ ಬೆಂಕಿ (Fire) ಕಾಣಿಸಿಕೊಂಡಿದೆ. ಸತತ 7 ಗಂಟೆಗಳಿಂದ ಅಗ್ನಿಶಾಮಕ ದಳದವರು ಬೆಂಕಿ ನಂದಿಸಲು ಹರಸಾಹಸ ಪಟ್ಟರೂ ಇನ್ನೂ ಅಗ್ನಿ ನಿಯಂತ್ರಣಕ್ಕೆ ಬಂದಿಲ್ಲ ಎಂದು ತಿಳಿಸಿದ್ದಾರೆ.
ನಗರದ ಕೈಗಾರಿಕಾ ಬಡಾವಣೆಯಲ್ಲಿ ಪ್ರಶಾಂತ್ ಫರ್ನಿಚರ್ ಅವರ ದಾಸ್ತಾನು ಮಳಿಗೆಗೆ ಸೋಮವಾರ ನಸುಕಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಕೆನ್ನಾಗಿಲಿಗೆ ಎಷ್ಟು ತೀವ್ರವಾಗಿದೆ ಎಂದರೆ 30 ಲೋಡ್‌ನಷ್ಟು ನೀರು ಖಾಲಿಯಾದರೂ ಬೆಂಕಿ ಇನ್ನೂ ಉರಿಯುತ್ತಿದೆ. ಸ್ಥಳಕ್ಕೆ ಬಂದಿರುವ ಪೊಲೀಸರು ಕೈಗಾರಿಕಾ ಬಡಾವಣೆಯ ಕೋಹಿನೂರ್ ಜಂಕ್ಷನ್‌ಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಸಂಚಾರವನ್ನು ಬಂದ್ ಮಾಡಿದ್ದಾರೆ.
ನೀರು ತುಂಬಿಕೊಂಡ ಅಗ್ನಿಶಾಮಕ ವಾಹನಗಳು ಒಂದರ ಮೇಲೊಂದರಂತೆ ಸ್ಥಳಕ್ಕೆ ಬರುತ್ತಲೇ ಇವೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸಪಡುತ್ತಿದ್ದಾರೆ. ಮರದ ವಸ್ತುಗಳಿಗೆ ಹೊತ್ತಿಕೊಂಡಿರುವ ಬೆಂಕಿಯನ್ನು ನಂದಿಸಲು ಸಾಧ್ಯವಾಗುತ್ತಿಲ್ಲ ಎಂದು ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.
ಕಳೆದ ರಾತ್ರಿ 2 ಗಂಟೆ ವೇಳೆಗೆ ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಫರ್ನಿಚರ್ ಅಂಗಡಿಯೊಳಗೆ ಸಣ್ಣ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ನೋಡನೋಡುತ್ತಲೇ ಬೆಂಕಿಯ ಕೆನ್ನಾಲಿಗೆ ಲಕ್ಷಾಂತರ ರೂ. ಬೆಲೆ ಬಾಳುವ ಮರದ ವಸ್ತುಗಳನ್ನು ಸಂಪೂರ್ಣವಾಗಿ ನಾಶಪಡಿಸಿದೆ. ಫರ್ನಿಚರ್ ಅಂಗಡಿ ಒಳಗೆ ಮೂವರು ಕೂಲಿ ಕಾರ್ಮಿಕರು ಮಲಗುತ್ತಿದ್ದರು. ಬೆಂಕಿ ಕಾಣಿಸಿಕೊಳ್ಳುತ್ತಲೇ ಅವರು ಅಲ್ಲಿಂದ ಹೊರ ಬಂದು ತಮ್ಮ ಪ್ರಾಣವನ್ನು ಉಳಿಸಿಕೊಂಡಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯವನ್ನು ಮುಂದುವರಿಸಿದ್ದಾರೆ.