ಮಗಳ ಬಳಿ ಪ್ರೆಗ್ನೆನ್ಸಿ ಟೆಸ್ಟ್ ಕಿಟ್ ಪತ್ತೆ – ಆ್ಯಸಿಡ್ ಸುರಿದು ತಂದೆ, ತಾಯಿಯಿಂದ ಕೊಲೆ
ಲಕ್ನೋ: ಮಗಳ ಬಳಿ ಪ್ರೆಗ್ನೆನ್ಸಿ ಟೆಸ್ಟ್ ಕಿಟ್ ಇರುವುದನ್ನು ನೋಡಿ ಆಕೆ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ ಪೋಷಕರು ಆಕೆಯನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಕೌಶಂಬಿಯ ಟೆನ್ ಷಾ ಅಲಮಾಬಾದ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನರೇಶ್ ಹಾಗೂ ಆತನ ಪತ್ನಿ ಶೋಭಾದೇವಿ ಸೇರಿ ತಮ್ಮ 21 ವರ್ಷದ ಮಗಳ ಮೇಲೆ ಆ್ಯಸಿಡ್ (Acid) ಸುರಿದು ಕೊಲೆ ಮಾಡಿದ್ದಾರೆ. ಈ ಕೊಲೆಗೆ ಸಂಬಂಧಿಕರಿಬ್ಬರ ಸಹಾಯ ಪಡೆದಿದ್ದಾರೆ.
ಅದಾದ ಬಳಿಕ ತಮ್ಮ ಮಗಳು ಕಾಣೆ ಆಗಿದ್ದಾಳೆ ಎಂದು ನರೇಶ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ. ಘಟನೆಗೆ ಸಂಬಂಧಿಸಿ ಪ್ರಕರಣ ಕೈಗೊಂಡ ಪೊಲೀಸರು ತನಿಖೆ ಆರಂಭಿಸಿದ್ದರು. ಈ ವೇಳೆ ಗ್ರಾಮದ ಹೊರಗಿನ ಕಾಲುವೆಯಿಂದ ವಿರೂಪಗೊಂಡ ಮೃತದೇಹವನ್ನು ಹೊರತೆಗೆಯಲಾಗಿದೆ.
ಈ ಬಗ್ಗೆ ನರೇಶ್ ಹಾಗೂ ಶೋಭಾದೇವಿಯನ್ನು ತನಿಖೆಗೆ ಒಳಪಡಿಸಿದಾಗ ಸತ್ಯಾಂಶ ಬಯಲಾಗಿದೆ. ಆಕೆ ಅನೇಕ ಹುಡುಗರೊಂದಿಗೆ ಫೋನ್‍ನಲ್ಲಿ ಮಾತನಾಡುತ್ತಿದ್ದಳು. ಅಷ್ಟೇ ಅಲ್ಲದೇ ಆಕೆಯ ಬಳಿ ಕೆಲವು ಪ್ರೆಗ್ನೆನ್ಸಿ ಟೆಸ್ಟ್ ಕಿಟ್‍ಗಳು ಪತ್ತೆ ಆಗಿತ್ತು. ಇದರಿಂದಾಗಿ ಆಕೆ ಯಾವುದೋ ಹುಡುಗನೊಂದಿಗೆ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ ಕೊಲೆ ಮಾಡಿರುವುದಾಗಿ ಪೊಲೀಸರಿಗೆ ನರೇಶ್ ತಿಳಿಸಿದ್ದಾನೆ.
ಅಷ್ಟೇ ಅಲ್ಲದೇ ಗುರುತು ಮರೆಮಾಚಲು ದೇಹದ ಮೇಲೆ ಬ್ಯಾಟರಿ ಆ್ಯಸಿಡ್ ಸುರಿದಿದ್ದಾರೆ. ಇದಕ್ಕೆ ನರೇಶ್‍ನ ಸಹೋದರರಾದ ಗುಲಾಬ್ ಹಾಗೂ ರಮೇಶ್ ಕೂಡ ಸಹಾಯ ಮಾಡಿದ್ದು, ಈ ನಾಲ್ವರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.