ಮಕ್ಕಳ ವೈಯಕ್ತಿಕ ಡೇಟಾ ದುರುಪಯೋಗ – ಟಿಕ್‌ಟಾಕ್‌ಗೆ ಭಾರೀ ದಂಡ ವಿಧಿಸಿದ ಬ್ರಿಟನ್
ಲಂಡನ್: ಮಕ್ಕಳ ವೈಯಕ್ತಿಕ ಡೇಟಾ ದುರುಪಯೋಗ ಸೇರಿದಂತೆ ಹಲವಾರು ಡೇಟಾ ರಕ್ಷಣಾ ಕಾನೂನುಗಳನ್ನು ಉಲ್ಲಂಘಿಸಿರುವ ಕಾರಣಕ್ಕೆ ಚೀನಾ (China) ಒಡೆತನದ ವೀಡಿಯೋ ಹಂಚಿಕೆ ಪ್ಲಾಟ್‌ಫಾರ್ಮ್ ಟಿಕ್‌ಟಾಕ್‌ಗೆ (TikTok) ಬ್ರಿಟನ್ (Britain) ಸುಮಾರು 16 ಮಿಲಿಯನ್ ಡಾಲರ್ (ಸುಮಾರು 130 ಕೋಟಿ ರೂ.) ದಂಡವನ್ನು ವಿಧಿಸಿದೆ.
ವರದಿಗಳ ಪ್ರಕಾರ ಟಿಕ್‌ಟಾಕ್ ನಿಯಮಗಳನ್ನು ಉಲ್ಲಂಘಿಸಿ 13 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸುಮಾರು 10 ಲಕ್ಷ ಮಕ್ಕಳಿಗೆ ವೀಡಿಯೋ ಹಂಚಿಕೆ ಪ್ಲಾಟ್‌ಫಾರ್ಮ್ ಅನ್ನು ಬಳಸಲು ಅವಕಾಶ ನೀಡಿದೆ.
ಮಂಗಳವಾರ ಮಾಹಿತಿ ಆಯುಕ್ತರ ಕಚೇರಿ (ಐಸಿಒ), ಟಿಕ್‌ಟಾಕ್ ಯಾರು, ಯಾವ ವಯಸ್ಸಿನಲ್ಲಿ ತನ್ನ ಪ್ಲಾಟ್‌ಫಾರ್ಮ್ಅನ್ನು ಬಳಸುತ್ತಾರೆ ಎಂಬುದರ ಬಗ್ಗೆ ಸರಿಯಾಗಿ ಗಮನಹರಿಸಿಲ್ಲ. ಮಾತ್ರವಲ್ಲದೇ ಅಪ್ರಾಪ್ತ ಮಕ್ಕಳನ್ನು ನಿರ್ಬಂಧಿಸಲು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲು ಅದು ವಿಫಲವಾಗಿದೆ. ಬಳಕೆದಾರರ ಡೇಟಾವನ್ನು ಹೇಗೆ ಸಂಗ್ರಹಿಸಲಾಗುತ್ತಿದೆ ಹಾಗೂ ಬಳಸಲಾಗುತ್ತಿದೆ ಎಂಬುದರ ಬಗ್ಗೆ ಸರಿಯಾಗಿ ಮಾಹಿತಿಯನ್ನು ಒದಗಿಸಿಲ್ಲ. ಇದೀಗ ದಂಡವನ್ನು 2018ರ ಮೇ ಯಿಂದ 2020ರ ಜುಲೈ ನಡುವಿನ ನಿಯಮ ಉಲ್ಲಂಘನೆಗೆ ವಿಧಿಸಲಾಗಿದೆ ಎಂದು ತಿಳಿಸಿದೆ.
ಮಕ್ಕಳು ಭೌತಿಕ ಜಗತ್ತಿನಲ್ಲಿರುವಂತೆಯೇ ಡಿಜಿಟಲ್ ಜಗತ್ತಿನಲ್ಲಿಯೂ ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಕಾನೂನುಗಳಿವೆ. ಆದರೆ ಟಿಕ್‌ಟಾಕ್ ಆ ಕಾನೂನುಗಳಿಗೆ ಬದ್ಧವಾಗಿಲ್ಲ. ಟಿಕ್‌ಟಾಕ್ ಈ ಬಗ್ಗೆ ಸರಿಯಾಗಿ ಮಾಹಿತಿ ನೀಡಿ, ಉತ್ತಮವಾಗಿ ಕಾರ್ಯನಿರ್ವಹಿಸಬೇಕಿತ್ತು ಎಂದು ಬ್ರಿಟನ್‌ನ ಮಾಹಿತಿ ಆಯುಕ್ತ ಜಾನ್ ಎಡ್ವರ್ಡ್ಸ್ ಹೇಳಿದ್ದಾರೆ.
ಈಗಾಗಲೇ ಟಿಕ್‌ಟಾಕ್ ಅನ್ನು ಭದ್ರತಾ ದೃಷ್ಟಿಯಿಂದ ಹಲವು ದೇಶಗಳಲ್ಲಿ ಬ್ಯಾನ್ ಮಾಡಲಾಗಿದೆ. ಅವುಗಳಲ್ಲಿ ಭಾರತ, ಆಸ್ಟ್ರೇಲಿಯಾ, ಫ್ರಾನ್ಸ್, ಬ್ರಿಟನ್, ಕೆನಡಾ, ನ್ಯೂಜಿಲೆಂಡ್ ದೇಶಗಳು ಸೇರಿವೆ.