ಮಕ್ಕಳಲ್ಲಿ ಅತಿಯಾದ ಮೊಬೈಲ್ ಫೋನ್ ಬಳಕೆ; ಎಚ್ಚರವಹಿಸದಿದ್ದಲ್ಲಿ ಮಾನಸಿಕ ಆರೋಗ್ಯಕ್ಕೆ ಹಾನಿಕಾರಕ
ತಂತ್ರಜ್ಞಾನಗಳು ಮುಂದುವರೆಯುತ್ತಿದ್ದಂತೆ ಸಂಬಂಧಗಳ ಬೆಲೆ ಕಡಿಮೆಯಾಗುತ್ತಿದೆ. ಕೋವಿಡ್ ನಂತರದ ದಿನಗಳಲ್ಲಿ ಮಕ್ಕಳು ಸಂಬಂಧಗಳಿಗಿಂತ ಹೆಚ್ಚಾಗಿ ತಂತ್ರಜ್ಞಾನದ ಕಡೆ ಒಲವು ತೋರಿಸುತ್ತಿರುವುದು ಕಂಡುಬರುತ್ತಿದೆ. ಸಾಮಾಜಿಕ ಜಾಲತಾಣ(Social Media) ಗಳಲ್ಲಿ ಸಕ್ರಿಯವಾಗಿದ್ದು, ಅವರ ಜೀವನದ ಪ್ರತಿಯೊಂದು ನೋವು ನಲಿವುಗಳನ್ನು ತಮ್ಮ ಖಾತೆಗಳ ಮೂಲಕ ಹಂಚಿಕೊಳ್ಳುವುದನ್ನು ದೈನಂದಿನ ಜೀವನಕ್ರಮದಲ್ಲಿ ರೂಢಿಸಿಕೊಂಡಿದ್ದಾರೆ. ಜೊತೆಗೆ ವೀಡಿಯೋ ಗೇಮ್‌ಗಳಲ್ಲಿ ದಾಸರಾಗಿರುವುದನ್ನು ಕಾಣಬಹುದು.ಹದಿಹರೆಯದ ವಿದ್ಯಾರ್ಥಿಗಳಲ್ಲಿಮೊಬೈಲ್ ಬಳಕೆ ಹೆಚ್ಚುತ್ತಿರುವುದು ಆತಂಕಕಾರಿ. ಸದಾ ಮೊಬೈಲ್ ಗೇಮ್, ಸಾಮಾಜಿಕ ಜಾಲತಾಣಗಳಲ್ಲಿಸಕ್ರಿಯವಾಗಿರುವುದರಿಂದ ಮಾನಸಿಕ ಸ್ಥಿತಿ ಪ್ರಚೋದನಕಾರಿ ಆಗುತ್ತದೆ. ಇದರ ಪರಿಣಾಮ ಅವರ ನಡುವಳಿಕೆಗಳ ಮೇಲೆ ಆಗುತ್ತಿದೆ. ಇಂತಹ ಮಕ್ಕಳ ಮಾನಸಿಕ ಆರೋಗ್ಯ ಏರುಪೇರಾಗುತ್ತದೆ. ನಕಾರಾತ್ಮಕ ನಡುವಳಿಕೆಗೆ ಪ್ರಯತ್ನಿಸುತ್ತಾರೆ
ಮಕ್ಕಳಿಗೆ ಚಿಕ್ಕವಯಸ್ಸಿನಲ್ಲಿಯೇ ಸ್ಮಾರ್ಟ್ಫೋನ್ ಬಳಕೆಗೆ ಅವಕಾಶ ನೀಡುವುದು ಡಿಜಿಟಲ್ ತಂತ್ರಜ್ಞಾನದಲ್ಲಿ ಅವರು ಮೇಲುಗೈ ಪಡೆಯಲು ಅನುಕೂಲ ಆಗಬಹುದಾದರೂ ಮಾನಸಿಕವಾಗಿ ದುಷ್ಪರಿಣಾಮ ಬೀರಲಿದೆ ಮತ್ತು ಹರೆಯದ ವಯಸ್ಸಿನಲ್ಲಿ ಅವರು ಮಾನಸಿಕ ಸಮಸ್ಯೆಗಳಿಗೆ ತುತ್ತಾಗುವ ಸಾಧ್ಯತೆ ಅಧಿಕವಾಗಿರುತ್ತದೆ ಎಂಬ ಕಳವಳಕಾರಿ ಸಂಗತಿಯನ್ನು ಅಂತಾರಾಷ್ಟ್ರೀಯ ಅಧ್ಯಯನ ವರದಿಯೊಂದು ಬಹಿರಂಗಪಡಿಸಿದೆ.ಸಣ್ಣ ವಯಸ್ಸಿನಲ್ಲಿ ಟ್ಯಾಬ್ಲೆಟ್, ಸ್ಮಾರ್ಟ್ಫೋನ್ ಹೊಂದಿದ ಮಕ್ಕಳು ವಯಸ್ಕರಾಗುತ್ತಲೇ ಆತ್ಮಹತ್ಯಾ ಆಲೋಚನೆ ಮಾಡುತ್ತಾರೆ; ಕೋಪ ಮತ್ತು ಆಕ್ರಮಕ ಸ್ವಭಾವ ಹೊಂದುತ್ತಾರೆ ಎಂಬ ಅಂಶವೂ ಅಮೆರಿಕ ಮೂಲದ ಸೇಪಿಯನ್ ಲ್ಯಾಬ್ಸ್ ಎಂಬ ಸ್ವಯಂಸೇವಾ ಸಂಸ್ಥೆಯು ಭಾರತ ಸೇರಿದಂತೆ 40 ದೇಶಗಳಲ್ಲಿ ಕೈಗೊಂಡ ಅಧ್ಯಯನದಿಂದ ತಿಳಿದುಬಂದಿದೆ. ಆರನೇ ವಯಸ್ಸಿನಲ್ಲಿ ಸ್ಮಾರ್ಟ್ಫೋನ್ ಬಳಸಲಾರಂಭಿಸಿದ ಮಹಿಳೆಯರು ಗಂಭೀರವಾದ ಮಾನಸಿಕ ಸಮಸ್ಯೆಗಳಿಗೆ ತುತ್ತಾಗಿರುವುದು ಕಂಡುಬಂದಿದೆ. ಭಾರತದಲ್ಲಿ 18ರಿಂದ 24ನೇ ವಯಸ್ಸಿನಲ್ಲಿ ಸ್ಮಾರ್ಟ್ಫೋನ್ ಬಳಕೆ ಮಾಡಲಾರಂಭಿಸಿದವರು ಮಾನಸಿಕವಾಗಿ ಆರೋಗ್ಯದಿಂದ ಇರುವುದು ಕಂಡುಬಂದಿರುವುದು ಗಮನಾರ್ಹ ಸಂಗತಿ. ಅಂದರೆ, ವಯಸ್ಕರಾದ ನಂತರವೇ ಮೊಬೈಲ್ಫೋನ್ ಬಳಕೆಗೆ ಅವಕಾಶ ಕೊಡುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ ಎಂಬುದನ್ನು ಇದು ಸೂಚಿಸುತ್ತದೆ. ಹೀಗಾಗಿ, ಚಿಕ್ಕಮಕ್ಕಳು ಸ್ಮಾರ್ಟ್ಫೋನ್ ಬಳಕೆ ತಪ್ಪಿಸಬೇಕು ಎಂಬ ಸ್ಪಷ್ಟ ಸಂದೇಶವನ್ನು ಈ ಅಧ್ಯಯನ ವರದಿ ರವಾನಿಸುತ್ತದೆ.
ಸ್ಮಾರ್ಟ್ಫೋನ್ಗಳ ಯುಗ ಆರಂಭಗೊಂಡ ಮೇಲೆ ಹಾಗೂ ಇಂಟರ್ನೆಟ್ ಸಂಪರ್ಕ ವೆಚ್ಚವು ಅಗ್ಗವಾದ ನಂತರವಂತೂ ಮೊಬೈಲ್ಫೋನ್ ಬಳಕೆ ಪ್ರಮಾಣ ಮಿತಿಮೀರಿದೆ. ವಯಸ್ಕರೇ ಈ ಉಪಕರಣದ ಮೋಹಕ್ಕೆ ಸಿಲುಕಿರುವಾಗ ಮಕ್ಕಳು ಇದರಿಂದ ಹೊರತಾಗಿರಲು ಹೇಗೆ ಸಾಧ್ಯ? ಕೋವಿಡ್ ಸಾಂಕ್ರಾಮಿಕ ಹರಡಿದ ಅವಧಿಯಲ್ಲಿ ಅನ್ಲೈನ್ನಲ್ಲೇ ಪಾಠಗಳು ನಡೆದ ಕಾರಣಕ್ಕಾಗಿ ಅನಿವಾರ್ಯವಾಗಿ ಮಕ್ಕಳ ಕೈಗೆ ಸ್ಮಾರ್ಟ್ಫೋನ್ಗಳನ್ನು ಪಾಲಕರು ಕೊಡುವ ಪರಿಸ್ಥಿತಿ ತಲೆದೋರಿತ್ತು. ಇದಾದ ನಂತರ ಸಾಕಷ್ಟು ಮಕ್ಕಳು ವಿಡಿಯೋ ಗೇಮಿಂಗ್ ಹಾಗೂ ಸಾಮಾಜಿಕ ಜಾಲತಾಣಗಳ ವ್ಯಸನಿಗಳಾಗಿರುವುದು ಖಾಸಗಿ ಸಂಸ್ಥೆಯೊಂದು ದೇಶಾದ್ಯಂತ ನಡೆಸಿದ ಸಮೀಕ್ಷೆಯಲ್ಲಿ ತಿಳಿದುಬಂದಿತ್ತು. ಕೆಲವೊಂದಿಷ್ಟು ಮಕ್ಕಳು ಮೊಬೈಲ್ಫೋನ್ಗಳಲ್ಲಿ ಅಶ್ಲೀಲ ಚಿತ್ರಗಳನ್ನು ವೀಕ್ಷಿಸುತ್ತಿರುವುದು ಹಾಗೂ ಆನ್ಲೈನ್ ಜೂಜಿನಲ್ಲಿ ತೊಡಗಿಕೊಳ್ಳುತ್ತಿದ್ದಾರೆ ಎಂಬ ಸಂಗತಿಯೂ ಬೆಳಕಿಗೆ ಬಂದಿತ್ತು. ಮೊಬೈಲ್ ಗೀಳಿಗೆ ಬೀಳುವ ಮಕ್ಕಳು ದೈಹಿಕ ಚಟುವಟಿಕೆಗಳ ಕೊರತೆಯ ಕಾರಣದಿಂದಾಗಿ ಬೊಜ್ಜು ಬೆಳೆಸಿಕೊಳ್ಳುತ್ತಿದ್ದಾರೆ. ದೃಷ್ಟಿ ದೋಷ ಸೇರಿ ನಾನಾ ಆರೋಗ್ಯ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಇನ್ನು ಮೊಬೈಲ್ಫೋನ್ ಸೂಸುವ ವಿಕಿರಣಗಳು ಆರೋಗ್ಯಕ್ಕೆ ಹಾನಿಕಾರಕ ಹಾಗೂ ಮಕ್ಕಳ ಮೇಲೆ ಇದು ಹೆಚ್ಚು ದುಷ್ಪರಿಣಾಮ ಮಾಡುತ್ತವೆ ಎಂಬುದು ಕೂಡ ಗೊತ್ತಿರುವಂತಹ ಸಂಗತಿಯೇ ಆಗಿದೆ. ಹೀಗಾಗಿ, ಮಕ್ಕಳು ಮಾತ್ರವಲ್ಲದೆ ವಯಸ್ಕರು ಕೂಡ ಮೊಬೈಲ್ಫೋನನ್ನು ಅಗತ್ಯಕ್ಕೆ ತಕ್ಕಂತೆ ಹಿತಮಿತವಾಗಿ ಬಳಸಿದರೆ ಪ್ರಯೋಜನಕಾರಿ; ಇಲ್ಲದಿದ್ದರೆ ಅಪಾಯಕಾರಿ.ಆದ್ದರಿಂದ ಪ್ರತಿಯೊಂದು ಪೋಷಕರೂ ಮಕ್ಕಳ ಬಳಸುವ ಮೊಬೈಲ್ ಫೋನ್ ಸಮಯವನ್ನು ನಿಗದಿಪಡಿಸಬೇಕಿದೆ. ಪ್ರತಿ ದಿನ 2ರಿಂದ ಮೂರು ಗಂಟೆಗಳ ವರೆಗೆ ಸಮಯವನ್ನು ನಿಗದಿ ಪಡಿಸಬೇಕು. ವೀಡಿಯೋ ಗೇಮ್‌ಗಳಲ್ಲಿ ಮಕ್ಕಳನ್ನು ಪ್ರೇರೇಪಿಸುವ ಬದಲು ಆದಷ್ಟು ನಿಮ್ಮ ಬಿಡುವಿನ ಸಮಯದಲ್ಲಿ ಅವರನ್ನು ಹೊರಗಡೆ ಕರೆದುಕೊಂಡು ಹೋಗಬೇಕು. ನಿಮ್ಮ ಮಕ್ಕಳಿಗೆ ನೀವು ಆದಷ್ಟು ಸಮಯ ಕೊಡುವುದು ಅತ್ಯಂತ ಅಗತ್ಯವಾಗಿದೆ. ಇದರಿಂದಾಗಿ ಅವರ ಮಾನಸಿಕ ಸ್ಥಿತಿಯನ್ನು ಆರೋಗ್ಯಗೊಳಿಸಬಹುದಾಗಿದೆ.