ಮಂಗಳೂರು : 25 ಅಡಿ ಆಳದ ಬಾವಿಗಿಳಿದು ಚಿರತೆ ರಕ್ಷಿಸಿದ ಮಹಿಳೆ
ಮುದ್ದಾದ ನಾಯಿ, ಬೆಕ್ಕುಗಳ ಜೊತೆ ಆಡೋಕೆ ಚೆನ್ನಾಗಿರುತ್ತದೆ.. ಸಿಂಹ, ಹುಲಿ. ಚಿರತೆಯನ್ನೆಲ್ಲಾ ಕಂಡ್ರೆ ಯಾರಿಗೆ ತಾನೇ ಪ್ರೀತಿಯಿದೆ ಹೇಳಿ. ಅವುಗಳನ್ನು ಏನಿದ್ರೂ ದೂರದಿಂದಷ್ಟೇ ಬೋನಿನಲ್ಲಿ ನೋಡೋದು ಚೆಂದ. ಹತ್ರ ಹೋಗೋಕೆ ಎಲ್ಲರೂ ಬಾಯಿ ಬಿಡ್ತಾರೆ. ಅದರ ದೊಡ್ಡ ದೊಡ್ಡ ಕಣ್ಣುಗಳು, ಉಗುರು, ನಡೆಯುವ ಠೀವಿಯನ್ನು ನೋಡಿದ್ರೇನ ಭಯವಾಗುತ್ತೆ. ಆದ್ರೆ ಮಂಗಳೂರಿನಲ್ಲೊಬ್ಬ ಮಹಿಳೆ ಬಾವಿಯೊಳಗಿದ್ದ ಒಂದು ವರ್ಷದ ಚಿರತೆಯನ್ನು ರಕ್ಷಿಸಿದ್ದಾರೆ. ಪಶು ವೈದ್ಯೆಯಾಗಿರುವ ಡಾ.ಮೇಘನಾ ಧೈರ್ಯಕ್ಕೆ ಊರವರು ಮೆಚ್ಚುಗೆ ಸೂಚಿಸಿದ್ದಾರೆ.
ದಕ್ಷಿಣಕನ್ನಡ ಜಿಲ್ಲೆಯ ಕಿನ್ನಿಗೋಳಿ ಸಮೀಪದ ನಿಡ್ಡೋಡಿ ಚರ್ಚ್ ಸಮೀಪವಿರುವ ಮನೆಯ ಬಾವಿಗೆ ಶುಕ್ರವಾರ ರಾತ್ರಿ ಚಿರತೆ (Leopard)ಯೊಂದು ಬಿದ್ದಿತ್ತು. ಶನಿವಾರ ಮಧ್ಯಾಹ್ನ ಮನೆಯವರಿಗೆ ವಿಷಯ ತಿಳಿದಿದ್ದು, ಕೂಡಲೇ ಅರಣ್ಯ ಅಧಿಕಾರಿಗಳಿಗೆ (Forest officers) ತಿಳಿಸಿದರು. ಅರಣ್ಯ ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಚಿರತೆಯನ್ನು ರಕ್ಷಿಸಲು ಬೋನು ತಂದು ಅದಕ್ಕೆ ಕೋಳಿಮರಿಯನ್ನು ಕಟ್ಟಿಬಾವಿಗೆ ಇರಿಸಿ ಹಲವು ಪ್ರಯತ್ನ ಮಾಡಲಾಯಿತು. ಆದರೂ ಚಿರತೆ ಬೋನಿನೊಳಗೆ (Cage) ಬರಲ್ಲಿಲ್ಲ. ನಂತರ ಮಂಗಳೂರಿನ ವನ್ಯಜೀವಿ ರಕ್ಷಣಾ ಮತ್ತು ಸಂಶೋಧನಾ ಕೇಂದ್ರವಾದ ಚಿಟ್ಟೆಪಿಲಿ ಸಂಸ್ಥೆಯ ನೆರವಿನಿಂದ ರಕ್ಷಣಾ ಕಾರ್ಯಾಚರಣೆ (Rescue operation) ಮುಂದುವರಿಸಲಾಯಿತು.
ಬಾವಿಯೊಳಗೆ ಇಳಿದು ಚಿರತೆಯನ್ನು ರಕ್ಷಿಸಿದ ಮೇಘನಾ
ಬರೋಬ್ಬರಿ 36 ಗಂಟೆಗಳ ಕಾಲ ಚಿರತೆ ಬೋನಿನೊಳಗೇ ಸಿಕ್ಕಿ ಹಾಕಿಕೊಂಡಿತ್ತು. ನಂತರ ಚಿಟ್ಟೆಪಿಲ ತಂಡದ ಪಶು ವೈದ್ಯರಾದ ಡಾ.ಮೇಘನಾ ಪೆಮ್ಮಯ್ಯ ತಾವೇ ಬಾವಿ (Well)ಯೊಳಗೆ ಇಳಿದು ಚಿರತೆಯನ್ನು ರಕ್ಷಿಸಲು ನಿರ್ಧರಿಸಿದರು. ಬಾವಿ ಬರೋಬ್ಬರಿ 25 ಅಡಿ ಆಳವಿದ್ದರೂ ಚಿರತೆಯನ್ನು ರಕ್ಷಿಸುವ ಸಾಹಸಕ್ಕೆ ಮುಂದಾದರು. ಮೇಘನಾ ಬೋನಿನ ಒಳಗೆ ಕೂತು ಬಾವಿಯ ಒಳಗೆ ಬೋನನ್ನು ಇಳಿಸಿ ಅಲ್ಲಿಂದಲೇ ಇಂಜೆಕ್ಷನ್ ಹೊಡೆದು ಚಿರತೆಯ ಪ್ರಜ್ಞೆ ತಪ್ಪಿಸಿ ಚಿರತೆಯನ್ನು ಬೋನಿಗೆ ತರಲಾಯಿತು. ಸತತ 20 ಗಂಟೆಯ ಕಾರ್ಯಾಚರಣೆಯಲ್ಲಿ ಮಂಗಳೂರು ಪಶು ವೈದ್ಯರಾದ ಡಾ.ಯಶ್ವಿನ್, ಡಾ.ಪೃಥ್ವಿ, ಡಾ.ನಫಿಶ ಮತ್ತು ಡಾ.ಮೇಘನಾ ಅವರ ತಂಡ (Team) ಪಾಲ್ಗೊಂಡಿತು.
‘ಚಿರತೆಯನ್ನು ರಕ್ಷಿಸಲು ಬಾವಿಗೆ ಇಳಿಯುವ ಮುನ್ನ ಹಲವು ವಿಚಾರಗಳ ಬಗ್ಗೆ ಗಮನ ಹರಿಸಬೇಕಿತ್ತು. ಚಿರತೆ ಎರಡು ದಿನಗಳಿಂದ ಆಹಾರ, ನೀರಿಲ್ಲದೆ ಸುಸ್ತಾಗಿತ್ತು. ಚಿರತೆಯ ಬಗ್ಗೆ ಬಾವಿಯ ಮೇಲಿನಿಂದ ನೋಡಿದಾಗ ಯಾವುದೇ ವಿಚಾರ ಗೊತ್ತಾಗುತ್ತಿರಲ್ಲಿಲ್ಲ. ಹಲವು ಸಲಕರಣೆಗಳ ಸಹಾಯದಿಂದ ಚಿರತೆಯನ್ನು ರಕ್ಷಿಸಲು ಯತ್ನಿಸಿದರೂ ಸಾಧ್ಯವಾಗಲ್ಲಿಲ್ಲ. ಹೀಗಾಗಿ ಅನಿವಾರ್ಯವಾಗಿ ಬೋನಿಗೆ ಜೊತೆಗೆ ಕೆಳಗೆ ಇಳಿದು ಚಿರತೆಯನ್ನು ರಕ್ಷಿಸಬೇಕಾಯಿತು’ ಎಂದು ಮೇಘನಾ ಹೇಳಿದ್ದಾರೆ.
ಸಾಹಸ ಕಾರ್ಯವಲ್ಲ, ಕೆಲಸದ ಭಾಗವಷ್ಟೇ ಎಂದ ಮೇಘನಾ
‘ನನಗೆ ಯಾವುದೇ ಅಪಾಯವಾಗದಂತೆ ಬೋನು ಹೆಚ್ಚು ಸುರಕ್ಷಿತವಾಗಿದೆ ಎಂಬುದು ನನಗೆ ತಿಳಿದಿತ್ತು. ಬಾವಿಯೊಳಗೆ ಇಳಿದ ಕೂಡಲೇ ನಾನು ಶಾಂತವಾಗಿದ್ದ ಚಿರತೆಗೆ ಇಂಜೆಕ್ಷನ್ ಚುಚ್ಚಿದೆ. ನಂತರ ಬೋನಿನ ಸಹಾಯದಿಂದ ಮೇಲಕ್ಕೆ ಕರೆತರಲಾಯಿತು. ನಾನು ಮಾಡಿರುವುದು ನನ್ನ ಕೆಲಸದ ಭಾಗವಷ್ಟೇ. ಮೊದಲ ಪ್ರಯತ್ನದಲ್ಲೇ ಚಿರತೆಯನ್ನು ರಕ್ಷಿಸಿರುವುದಕ್ಕೆ ನಮಗೆ ಖುಷಿಯಿಂದೆ’ ಎಂದು ಮೇಘನಾ ತಿಳಿಸಿದ್ದಾರೆ.
ವಲಯದ ಅರಣ್ಯ ಅಧಿಕಾರಿ ಹೇಮಗಿರಿ ಅಂಗಡಿ, ಡಿವೈಆರ್‌ಎಫ್‌ಒ ಮಂಜುನಾಥ್ ಗಂಗಯ್ಯ, ಬೀಟ್ ಫಾರೆಸ್ಟರ್ ಮಂಜುನಾಥ್ ಎಸ್.ಡಿ., ರಾಜು ಎಲ್‌ಜೆ, ಶಿವಕುಮಾರ್, ಸಂದೀಪ್, ಸಂತೋಷ್, ಶಂಕರ್, ಶಿವಾನಂದ್ ಬಂಗಳ್ಳಿ ಇವರ ತಂಡದ ನೇತೃತ್ವದಲ್ಲಿ ಕಾರ್ಯಾಚರಣೆ ನಡೀತು. ಸ್ಥಳೀಯರಾದ ಸ್ಟ್ಯಾನಿ ಪಿಂಟೊ, ಸಂದೀಪ್, ಅನಿಷಾ ಡಾಫ್ ನಿ , ಡಿನಿಸ್ ಡಿಸೋಜಾ, ಕ್ಯಾಶ್ವಿನ್ ,ಜಾನ್ಸನ್, ವಾಲ್ಟರ್, ರಿಚರ್ಡ್, ಅಶ್ವಿನಿ, ರಾಯ್ಸನ್, ದೀಪಕ್, ರಫೀಕ್, ಜೀವನ್, ಗಿರು ಮತ್ತಿತರರು ಕಾರ್ಯಾಚರಣೆಗೆ ಸಹಕರಿಸಿದರು.