ಮಂಗಳೂರು ವಿಮಾನ ನಿಲ್ದಾಣ : ಬಳಕೆದಾರರ ಶುಲ್ಕ ಏರಿಕೆ
ಮಂಗಳೂರು : ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2026ರ ಮಾರ್ಚ್ ವರೆಗೆ “ಯೂಸರ್ ಡೆವಲಪ್‌ಮೆಂಟ್ ಫೀ’ (ಯುಡಿಎಫ್) ಅಥವಾ ಬಳಕೆದಾರರ ಶುಲ್ಕವನ್ನು ಏರಿಸಲು ನಿರ್ಧರಿಸಲಾಗಿದೆ. ವಿಮಾನ ನಿಲ್ದಾಣಗಳ ಆರ್ಥಿಕ ನಿಯಂತ್ರಣ ಪ್ರಾಧಿಕಾರವು ಅನುಮತಿ ನೀಡಿದೆ.
ಸದ್ಯ ಮಂಗಳೂರು ವಿಮಾನ ನಿಲ್ದಾಣದಲ್ಲಿ ಯುಡಿಎಫ್ ಅನ್ನು ನಿರ್ಗಮನ ಪ್ರಯಾಣಿಕರು ಮಾತ್ರ ಪಾವತಿಸುತ್ತಿದ್ದಾರೆ. ಆದರೆ ಫೆಬ್ರವರಿಯಿಂದ ಆಗಮನ ಪ್ರಯಾಣಿಕರು ಕೂಡ ಈ ಶುಲ್ಕ ಪಾವತಿಸಬೇಕಿದೆ. ಪ್ರಸ್ತುತ ದೇಶೀಯ ಪ್ರಯಾಣಿಕರಿಗೆ ವಿಧಿಸಲಾಗುವ ಶುಲ್ಕ ರೂ. 150 ರೂ. ಹಾಗೂ ಅಂತಾರಾಷ್ಟ್ರೀಯ ಪ್ರಯಾಣಿಕರು 825 ರೂ. ಪಾವತಿಸಬೇಕಿದೆ.
ಎಪ್ರಿಲ್‌ನಿಂದ ದೇಶೀಯ ನಿರ್ಗಮನ ಪ್ರಯಾಣಿಕರು 150 ರೂ. ಬದಲು 560 ರೂ. ಪಾವತಿಸಬೇಕು. ಈ ಶುಲ್ಕ ಪ್ರತೀ ವರ್ಷ ಏರಲಿದೆ. ಅಂ.ರಾ. ನಿರ್ಗಮನ ಪ್ರಯಾಣಿಕರು ಈಗ 825 ಪಾವತಿಸುತ್ತಿದ್ದರೆ ಈ ಶುಲ್ಕ ಎಪ್ರಿಲ್‌ನಿಂದ 1,015 ಆಗಲಿದ್ದು, ಮುಂದಿನ ವರ್ಷ ಮತ್ತೆ ಏರಲಿದೆ. ಆಗಮನ ದೇಶೀಯ ಪ್ರಯಾಣಿಕರು ಎಪ್ರಿಲ್‌ನಿಂದ ಮೊದಲ ಬಾರಿಗೆ 150 ರೂ. ಶುಲ್ಕ ಪಾವತಿಸಲಿದ್ದು ಮುಂದಿನ ವರ್ಷ ಮಾರ್ಚ್ ಬಳಿ ಕ 240 ಪಾವತಿಸಬೇಕಾಗಿದೆ.
ಕಳೆದ 12 ವರ್ಷದಿಂದ ಬಳಕೆದಾರರ ಶುಲ್ಕವನ್ನು ಏರಿಕೆ ಮಾಡಿರಲಿಲ್ಲ. ಈಗ ವಿಮಾನ ನಿಲ್ದಾಣವನ್ನು ಅಂ.ರಾ. ಮಟ್ಟದಲ್ಲಿ ಮೇಲ್ದರ್ಜೆಗೇರಿಸುವುದು, ರನ್‌ವೇ ವಿಸ್ತರಣೆ ಸಹಿತ ವಿವಿಧ ಅಭಿವೃದ್ಧಿ ನಡೆಸುವ ಕಾರಣದಿಂದ ಶುಲ್ಕ ಏರಿಕೆಗೆ ನಿರ್ಧರಿಸಲಾಗಿದೆ ಎಂದು ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ.
ಈ ಮಧ್ಯೆ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಈಗಿರುವ ದರವು ಫೆಬ್ರವರಿ ಹಾಗೂ ಮಾರ್ಚ್‌ಗೆ ಮಾತ್ರ ಅನ್ವಯವಾಗುವಂತೆ 80 ರೂ. ಇಳಿಕೆಯಾಗಲಿದ್ದು, ಎಪ್ರಿಲ್‌ನಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ.