ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇನ್ಮುಂದೆ ಶಬ್ದರಹಿತ ಕಾರ್ಯಾಚರಣೆ
ಮಂಗಳೂರು: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು (Mangaluru Airport) ಇನ್ಮುಂದೆ ಸೈಲೆಂಟ್ ಆಗಿ ತನ್ನ ಕಾರ್ಯ ಚಟುವಟಿಕೆ ನಡೆಸಲಿದೆ. ಇಂತಹದ್ದೊಂದು ಆದೇಶವನ್ನು ವಿಮಾನ ನಿಲ್ದಾಣದ ಅಧಿಕೃತ ಪ್ರಕಟಣೆ ತಿಳಿಸಿದೆ. ಪ್ರಯಾಣಿಕರು ಶಬ್ದರಹಿತ ಸಂದೇಶಗಳನ್ನಷ್ಟೇ ಪಡೆಯಬಹುದಾಗಿದೆ. ಆದರೆ, ವಿಮಾನದ ಸ್ಥಿತಿಗತಿ, ಪ್ರಕಟಣೆಗಳು ಎಲ್ಲವೂ ಡಿಸ್ಲೇ ಸಿಸ್ಟಂನಲ್ಲಿ (Display System) ಪ್ರದರ್ಶನಗೊಳ್ಳಲಿದೆ.
ಈ ಡಿಸ್ಲೇ ಮೂಲಕನೇ ವಿಮಾನ ಹಾರಾಟ, ಆಗಮನ ಸಮಯ ಹಾಗೂ ವಿಳಂಬ ಸ್ಥಿತಿಯ ಮಾಹಿತಿಯನ್ನ ಟಿವಿ ಪರದೆ ಮೂಲಕ ಪಡೆದುಕೊಳ್ಳಬಹುದಾಗಿದೆ. ಇದಕ್ಕಾಗಿ ಡಿಸ್ಲೇ ಸಿಸ್ಟಂ ಅನ್ನು ವಿಮಾನ ನಿಲ್ದಾಣದ ಒಳಗೆ ಹಾಗೂ ಹೊರಗೆ ವ್ಯವಸ್ಥೆಗೊಳಿಸಲಾಗಿದೆ. ಇದಕ್ಕಾಗಿ ಬೃಹತ್ ಡಿಸ್ಲೇಗಳನ್ನು ಅಳವಡಿಸಲಾಗಿದೆ.
ಇದರ ಜೊತೆಗೆ ವಿಮಾನ ನಿಲ್ದಾಣದ ಟರ್ಮಿನಲ್‌ನಲ್ಲಿರುವ ‘ಮೇ ಐ ಹೆಲ್ಪ್ ಯು’ ಡೆಸ್ಕ್, ಗ್ರಾಹಕ ಸೇವಾ ಸಿಬ್ಬಂದಿಗಳು, ‘ಪ್ರಣಾಮ್’ ಸಿಬ್ಬಂದಿಗಳು ಪ್ರಯಾಣಿಕರಿಗೆ ಅಗತ್ಯ ಮಾಹಿತಿ, ಸಹಾಯವನ್ನು ಮಾಡಲಿದ್ದಾರೆ. ಒಟ್ಟಿನಲ್ಲಿ ಶಬ್ದರಹಿತ ವಿಮಾನ ನಿಲ್ದಾಣವಾಗಿ ಬದಲಾಗಲಿರುವ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ತನ್ನ ಪ್ರಯಾಣಿಕರಿಗೆ ಅನಗತ್ಯ ಶಬ್ದದಿಂದ ಮುಕ್ತವಾಗಿಸಲಿದೆ.