ಭೀಕರ ರಸ್ತೆ ಅಪಘಾತ: ಇಬ್ಬರು ಸಾವು, 10 ಜನರಿಗೆ ಗಂಭೀರ ಗಾಯ
ಮಂಡ್ಯ: ಮಂಡ್ಯ ಜಿಲ್ಲೆಯ ಶಿಂಷಾದ ಮಾರಮ್ಮ ದೇವಸ್ಥಾನ ಮುಗಿಸಿ ವಾಪಸ್ಸಾಗುತ್ತಿದ್ದಾಗ ಮಳವಳ್ಳಿ ಬಳಿ ಮಹೀಂದ್ರಾ ಶೈಲೋ ಕಾರು -ಬೊಲೊರೊ ಗೂಡ್ಸ್ ವಾಹನ ನಡುವೆ ಡಿಕ್ಕಿಯಾಗಿದ್ದು, ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇನ್ನು ಈ ದುರ್ಘಟನೆಯಲ್ಲಿ 10ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.
ಮಳವಳ್ಳಿಯಲ್ಲಿ ಇಂದು ಸಂಜೆ ಮಹೀಂದ್ರಾ ಶೈಲೋ ಕಾರು -ಬೊಲೊರೊ ಗೂಡ್ಸ್ ವಾಹನ ನಡುವೆ ಡಿಕ್ಕಿಯಾಗಿ ನಡೆದಿರುವ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇನ್ನು ಉಳಿದಂತೆ ಕಾರಿನಲ್ಲಿ ಹಾಗೂ ಬುಲೇರೋದಲ್ಲಿದ್ದ ವಾಹನ ಚಾಲಕ ಸೇರಿದಂತೆ 10ಕ್ಕೂ ಅಧಿಕ ಮಂದಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಇನ್ನು ಎರಡೂ ವಾಹನಗಳು ಮುಖಾಮುಖಿ ಡಿಕ್ಕಿಯಾಗಿದ್ದು, ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಇನ್ನು ಬುಲೇರೋ ಸರಕು ಸಾಗಣೆ ವಾಹನದ ಮುಂಭಾಗ ನಜ್ಜುಗುಜ್ಜಾಗಿದೆ.
ಈ ಘಟನೆಯಲ್ಲಿ ಮದಲಿಯಮ್ಮ(50), ಜೋಸ್ಮಿನ್ ಮೇರಿ(60) ಮೃತ ಮಹಿಳೆಯರಾಗಿದ್ದಾರೆ. ಇವರು ಕೊಳ್ಳೇಗಾಲ ತಾಲ್ಲೂಕಿನ ಶಿಂಷಾ ಬಳಿಯ ಜಾಗೇರಿ ಗ್ರಾಮದವರು. ಮಂಡ್ಯ ಜಿಲ್ಲೆ, ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಗ್ರಾಮದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 209 ರಲ್ಲಿ ದುರ್ಘಟನೆ ನಡೆದಿದೆ. ಇನ್ನು ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದವರು ಶಿಂಷಾದ ಮಾರಮ್ಮ ದೇವಸ್ಥಾನ ಮುಗಿಸಿ ವಾಪಸ್ಸಾಗುತ್ತಿದ್ದರು. ಆದರೆ, ಈ ಮನೆಯನ್ನು ಮುಟ್ಟುವ ಮೊದಲೇ ಮಸಣವನ್ನು ಸೇರಿದ್ದಾರೆ.
ಮಳವಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ: ಅಪಘಾತ ನಡೆದ ಕೂಡಲೇ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ಮಾಡಿ ಪರಿಶೀಲನೆ ಮಾಡಿದ್ದಾರೆ. ಗಾಯಾಳುಗಳನ್ನು ಆಂಬುಲೆನ್ಸ್ ಮೂಲಕ ಮಳವಳ್ಳಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಗಾಯಾಳುಗಳನ್ನು ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆಯನ್ನು ನೀಡಿ ನಂತರ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಘಟನೆ ಬೆಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಗಂಡನನ್ನು ಕಳೆದುಕೊಂಡು ಕೂಲಿ ನಾಲಿ ಮಾಡಿ ಜೀವನ ಸಾಗಿಸುತ್ತಿದ್ದ ಒಂಟಿ ಮಹಿಳೆಯ ಹತ್ಯೆ:
ಬೆಂಗಳೂರು: ಮನೆಯಲ್ಲಿ ಒಬ್ಬಂಟಿಯಾಗಿ ನೆಲೆಸಿದ್ದ ಮಹಿಳೆಯೋರ್ವಳನ್ನು (Woman) ದುಷ್ಕರ್ಮಿಗಳು ಚಾಕುವಿನಿಂದ ಇರಿದು ಕೊಲೆ(Murder) ಮಾಡಿ ಪರಾರಿಯಾಗಿರುವ .ಘಟನೆ ಬೆಂಗಳೂರಿನ (Bengaluru) ಕೆಆರ್ ಪುರಂನ ಟಿಸಿ ಪಾಳ್ಯದಲ್ಲಿ ನಡೆದಿದೆ. ಟಿ.ಸಿ.ಪಾಳ್ಯದಲ್ಲಿ ನೆಲೆಸಿದ್ದ ಬಳ್ಳಾರಿ(Bellary) ಮೂಲದ ಅಂಬಿಕಾ (40) ಕೊಲೆಯಾದ ಮಹಿಳೆ. ಮೃತಳ ಮನೆಯಿಂದ ಬರುತ್ತಿದ್ದ ದುರ್ವಾಸನೆ ಬರುತ್ತಿದ್ದರಿಂದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಮನೆ ಬಾಗಿಲು ಮುರಿದು ಒಳ ಪ್ರವೇಶಿಸಿ ಪರಿಶೀಲಿಸಿದಾಗ ಮಹಿಳೆಯ ಕೊಳತೆ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ನಾಲ್ಕು ದಿನಗಳ ಹಿಂದೆಯೇ ಈ ಹತ್ಯೆ ನಡೆದಿದೆ ಎಂದು ತಿಳಿದುಬಂದಿದೆ.
ಬಳಿಕ ಅಂಬಿಕಾಳ ಮೊಬೈಲ್‌ನಲ್ಲಿ ನಂಬರ್ ಪಡೆದು ಆಕೆಯ ಕುಟುಂಬದವರಿಗೆ ಘಟನೆ ಬಗ್ಗೆ ಮಾಹಿತಿ ನೀಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತ ಅಂಬಿಕಾ ಬಳ್ಳಾರಿ ಜಿಲ್ಲೆ ಶಿರಗುಪ್ಪ ತಾಲೂಕಿನ ಎಚ್.ಹೊಸಹಳ್ಳಿ ಗ್ರಾಮದವಳಾಗಿದ್ದು, ನಗರದಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಳು. ಟಿ.ಸಿ.ಪಾಳ್ಯದ ಗಾರ್ಡನ್ ಸಿಟಿ ಕಾಲೇಜು ಸಮೀಪ ಅಂಬಿಕಾ ನೆಲೆಸಿದ್ದಳು. ಹಲವು ತಿಂಗಳ ಹಿಂದೆಯೇ ಅನಾರೋಗ್ಯ ಹಿನ್ನೆಲೆಯಲ್ಲಿ ಆಕೆಯ ಪತಿ ಸಹ ಮೃತಪಟ್ಟಿದ್ದ. ಇಬ್ಬರು ಮಕ್ಕಳ ಪೈಕಿ ಹಿರಿಯ ಮಗ ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಓದುತ್ತಿದ್ದಾನೆ. ಈ ಕೃತ್ಯಕ್ಕೆ ನಿಖರ ಕಾರಣ ಗೊತ್ತಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಏ.3ರಂದು ತನ್ನ ನೆರೆಮನೆಯ ಮಹಿಳೆಯನ್ನು ಭೇಟಿಯಾಗಿ ಅಂಬಿಕಾ ಮಾತನಾಡಿದ್ದಳು. ನಂತರ ಆಕೆ ಹೊರಗೆ ಎಲ್ಲೂ ಕಾಣಿಸಿಕೊಂಡಿಲ್ಲ. ಹೀಗಾಗಿ ಏ.4 ಅಥವಾ ಏ.5ರಂದು ಆಕೆಯ ಮನೆಗೆ ಬಂದಿರುವ ಪರಿಚಿತರೇ ಹತ್ಯೆ ಮಾಡಿದ್ದಾರೆ. ಮೃತಳ ದೇಹದಲ್ಲಿ ನಾಲ್ಕೈದು ಬಾರಿ ಚೂರಿ ಇರಿತದ ಗುರುತುಗಳು ಮರಣೋತ್ತರ ಪರೀಕ್ಷೆಯಲ್ಲಿ ಪತ್ತೆಯಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.