ಭೀಕರ ಕಾರು ಅಪಘಾತದ ನಾಲ್ಕು ತಿಂಗಳ ನಂತರ ಕ್ರಿಕೆಟ್ ಅಂಗಣದಲ್ಲಿ ರಿಷಭ್ ಪಂತ್!

ಹೊಸದಿಲ್ಲಿ: ಭೀಕರ ಕಾರು ಅಪಘಾತದಲ್ಲಿ ಗಾಯಗೊಂಡು 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸೇರಿದಂತೆ ಕ್ರಿಕೆಟ್ ಚಟುವಟಿಕೆಗಳಿಂದ ದೂರ ಉಳಿದಿರುವ ಟೀಮ್ ಇಂಡಿಯಾ ವಿಕೆಟ್ ಕೀಪರ್ ರಿಷಭ್ ಪಂತ್ ಮಂಗಳವಾರ ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಇಲ್ಲಿನ ಅರುಣ್ ಜೆಟ್ಲಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಗುಜರಾತ್ ಟೈಟನ್ಸ್ ನಡುವಣ ಪಂದ್ಯದ ವೇಳೆ ಪಂತ್ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದರು.
2022ರ ಡಿಸೆಂಬರ್ 30 ರಂದು ಮುಂಜಾನೆ ಸಂಭವಿಸಿದ್ದ ಭೀಕರ ಕಾರು ಅಪಘಾತದಲ್ಲಿ ರಿಷಭ್ ಪಂತ್ ಗಂಭೀರ ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಹಲವು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಅವರು 2023ರ ಐಪಿಎಲ್ ಟೂರ್ನಿ ಸೇರಿದಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದಲೂ ದೂರ ಉಳಿದಿದ್ದಾರೆ. ಅವರು ಕಮ್‌ಬ್ಯಾಕ್ ಮಾಡಲು ಇನ್ನಷ್ಟು ತಿಂಗಳುಗಳ ಕಾಲಾವಕಾಶ ಅಗತ್ಯವಿದೆ.
ಅಂದಹಾಗೆ ರಿಷಭ್ ಪಂತ್ ಅನುಪಸ್ಥಿತಿಯಲ್ಲಿ ಡೇವಿಡ್ ವಾರ್ನರ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಮಂಗಳವಾರ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ಪಂದ್ಯ ವೀಕ್ಷಿಸಿದ ಪಂತ್, ಕ್ಯಾಪಿಟಲ್ಸ್ ತಂಡದ ಆಟಗಾರರನ್ನು ಹುರಿದುಂಬಿಸಿದರು. ಆದರೆ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ 6 ವಿಕೆಟ್ ಸೋಲು ಅನುಭವಿಸಿತು.
ಶ್ರೇಯಸ್ ಅಯ್ಯರ್ ತಂಡದ ನಾಯಕತ್ವ ತ್ಯಜಿಸಿದ ನಂತರ ಕ್ಯಾಪಿಟಲ್ಸ್ ತಂಡವನ್ನು 2021 ರಿಂದ ರಿಷಭ್ ಪಂತ್ ಮುನ್ನಡೆಸುತ್ತಿದ್ದಾರೆ. 2021 ಹಾಗೂ 2022ರ ಐಪಿಎಲ್ ಟೂರ್ನಿಗಳಲ್ಲಿಯೂ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪಂತ್ ಮುನ್ನಡೆಸಿದ್ದರು. ಆದರೆ, ಕಳೆದ ವರ್ಷಾಂತ್ಯದಲ್ಲಿ ಕಾರು ಅಪಘಾತಕ್ಕೀಡಾದ ಕಾರಣ ಅವರು ಟೂರ್ನಿಯಿಂದ ಹೊರಗುಳಿದಿದ್ದಾರೆ.