ಭಾರತ್ ಜೋಡೋ ಯಾತ್ರೆ: ರಾಹುಲ್ ಜೊತೆ ಹೆಜ್ಜೆ ಹಾಕುತ್ತಿದ್ದ ಸಂಸದ ಸಂತೋಖ್ ಸಿಂಗ್ ಹೃದಯಾಘಾತಕ್ಕೆ ಬಲಿ
ಭಾರತ್ ಜೋಡೋ ಯಾತ್ರೆಯಲ್ಲಿ(Bharat Jodo Yatra) ಭಾಗಿಯಾಗಿದ್ದ ಜಲಂಧರ್ ಕಾಂಗ್ರೆಸ್ ಸಂಸದ ಸಂತೋಖ್ ಸಿಂಗ್(77)(Santosh Singh Chaudhary) ಹೃದಯಾಘಾತದಿಂದ ನಿಧನರಾಗಿದ್ದಾರೆ. ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾಗ ಹೃದಯಾಘಾತವಾಗಿ ಸಂತೋಖ್ ಸಿಂಗ್ ಅಸ್ವಸ್ಥರಾಗಿದ್ದರು. ಈ ವೇಳೆ ಅವರನ್ನು ಲೂದಿಯಾನದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೆ ಸಂಸದ ಸಂತೋಖ್ ಸಿಂಗ್ ಚೌಧರಿ ಸಾವನ್ನಪ್ಪಿದ್ದಾರೆ.
ಜಲಂಧರ್ ಲೋಕಸಭಾ ಕ್ಷೇತ್ರದ ಸಂಸದ ಸಂತೋಷ್ ಸಿಂಗ್ ಚೌಧರಿ ಅವರು ಶನಿವಾರ ಬೆಳಗ್ಗೆ ಪಂಜಾಬ್ನ ಲೂದಿಯಾನದಲ್ಲಿ ನಡೆಯುತ್ತಿದ್ದ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗಿಯಾಗಿದ್ದರು. ಪ್ರಾಥಮಿಕ ವರದಿಗಳ ಪ್ರಕಾರ ಅವರಿಗೆ ಹೃದಯ ಸ್ತಂಭನವಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಸಂತೋಖ್ ಸಿಂಗ್ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ. ಸಂತೋಖ್ ಸಿಂಗ್ ನಿಧನಕ್ಕೆ ರಾಹುಲ್ ಗಾಂಧಿ, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಸಂತಾಪ ಸೂಚಿಸಿದ್ದಾರೆ.
ಜಲಂಧರ್ ಜಿಲ್ಲೆಯ ಫಿಲ್ಲೌರ್ ಪ್ರದೇಶದ ಮೂಲಕ ಯಾತ್ರೆ ಸಾಗುತ್ತಿದ್ದಾಗ ದುರಂತ ಸಂಭವಿಸಿದೆ. ಫಿಲೌರ್ ವಿಧಾನಸಭಾ ಕ್ಷೇತ್ರವನ್ನು ಸಂತೋಷ್ ಸಿಂಗ್ ಚೌಧರಿ ಅವರ ಪುತ್ರ ವಿಕ್ರಮಜಿತ್ ಚೌಧರಿ ಪ್ರತಿನಿಧಿಸುತ್ತಿದ್ದಾರೆ. 2014 ಮತ್ತು 2019ರಲ್ಲಿ ಎರಡು ಬಾರಿ ಲೋಕಸಭೆ ಚುನಾವಣೆಯಲ್ಲಿ ಸಂತೋಷ್ ಸಿಂಗ್ ಗೆದ್ದಿದ್ದರು.
ಮೃತ ಸಂಸದರು ರಾಹುಲ್ ಅವರೊಂದಿಗೆ ಕುಶ್ತ್ ಆಶ್ರಮದಿಂದ ಹೊರಬಂದಾಗ ಕುಸಿದು ಬಿದ್ದಿದ್ದಾರೆ ಎಂದು ತಿಳಿದುಬಂದಿದೆ. ತಕ್ಷಣ ಅವರನ್ನು ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ಯಾತ್ರೆಯನ್ನು ಸ್ಥಗಿತಗೊಳಿಸಲಾಯಿತು. ಶಾಸಕ ರಾಣಾ ಗುರ್ಜಿತ್ ಸಿಂಗ್ ಮತ್ತು ವಿಜಯ್ ಇಂದರ್ ಸಿಂಗ್ಲಾ ಅವರೊಂದಿಗೆ ರಾಹುಲ್ ಗಾಂಧಿ ಆಸ್ಪತ್ರೆಯಲ್ಲಿ ಸಂಸದರ ಕುಟುಂಬಸ್ಥರನ್ನು ಭೇಟಿ ಮಾಡಿ ಸಂತಾಪ ಸೂಚಿಸಿದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.