ಭಾರತದ ಸ್ಪಿನ್ ಜಾಲಕ್ಕೆ ಸಿಲುಕಿದ ಕಾಂಗರೂ ಪಡೆ, 177 ರನ್‌ಗಳಿಗೆ ಆಲೌಟ್!
ಬಾರ್ಡರ್-ಗವಾಸ್ಕರ್ ಟ್ರೋಫಿ (Border Gavaskar Trophy) ಟೆಸ್ಟ್ ಸರಣಿ ಅಂಗವಾಗಿ ಭಾರತ ಹಾಗೂ ಆಸ್ಟ್ರೇಲಿಯಾ (India vs Australia) ನಡುವೆ ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ದಾಳಿಗೆ ತತ್ತರಿಸಿರುವ ಪ್ಯಾಟ್ ಕಮಿನ್ಸ್ ಪಡೆ ತಮ್ಮ ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 177 ರನ್‌ಗಳಿಗೆ ಆಲೌಟ್ ಆಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ (Pat Cummins) ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಹೀಗಾಗಿ ದಾಳಿಗಿಳಿದ ರೋಹಿತ್ ಪಡೆ ಆರಂಭದಿಂದಲೇ ಆಸೀಸ್ ಬ್ಯಾಟರ್ಗಳಿಗೆ ಮುಕ್ತವಾಗಿ ರನ್ಗಳಿಸಲು ಅವಕಾಶ ನೀಡಲಿಲ್ಲ. ಅಂತಿಮವಾಗಿ ತಮ್ಮ ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 64 ಓವರ್ಗಳನ್ನಷ್ಟೇ ಆಡಿದ ಕಾಂಗರೂ ಪಡೆ 177 ರನ್ಗಳಿಸಲಷ್ಟೇ ಶಕ್ತವಾಯಿತು. ಟೀಂ ಇಂಡಿಯಾ ಪರ ರವೀಂದ್ರ ಜಡೇಜಾ (Ravindra Jadej) 5 ವಿಕೆಟ್ ಪಡೆದರೆ, ರವಿಚಂದ್ರನ್ ಅಶ್ವಿನ್ (Ravichandran Ashwin) 3 ವಿಕೆಟ್ ಪಡೆದು ಮಿಂಚಿದರು.
ವಿಕೆಟ್ ಭೇಟೆ ಆರಂಭಿಸಿದ ಸಿರಾಜ್
ಟಾಸ್ ಗೆದ್ದು ಮೊದಲ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡ 2 ರನ್ ಗಳಿಸುವಷ್ಟರಲ್ಲಿ ಸ್ಟಾರ್ ಆರಂಭಿಕರಿಬ್ಬರ ವಿಕೆಟ್ ಕಳೆದುಕೊಂಡಿತು. ನಿರೀಕ್ಷೆಯಂತೆ ಭಾರತದ ವೇಗದ ಬೌಲರ್‌ಗಳು ಆಸ್ಟ್ರೇಲಿಯಾದ ಆರಂಭಕ್ಕೆ ಭಂಗ ತಂದರು. ಉಸ್ಮಾನ್ ಖವಾಜಾ ಮತ್ತು ಡೇವಿಡ್ ವಾರ್ನರ್ ಇಬ್ಬರೂ ಸ್ಟಾರ್ ಆರಂಭಿಕರ ವಿಕೆಟ್ ಪತನವಾಯಿತು. ಆರಂಭಿಕರಿಬ್ಬರೂ ತಲಾ ಒಂದು ರನ್ ಗಳಿಸಿ ಮರಳಿದರು. ಮೊದಲಿಗೆ, ಸಿರಾಜ್ ಪಂದ್ಯದ ತಮ್ಮ ಮೊದಲ ಓವರ್‌ನ ಮೊದಲ ಎಸೆತದಲ್ಲಿಯೇ ಖವಾಜಾ ಅವರನ್ನು ಎಲ್ಬಿ ಬಲೆಗೆ ಬೀಳಿಸುವುದರೊಂದಿಗೆ ವಿಕೆಟ್ ಭೇಟೆ ಆರಂಭಿಸಿದರು. ನಂತರ, ಮೂರನೇ ಓವರ್‌ನ ಆರಂಭದಲ್ಲಿ ಶಮಿ ಡೇವಿಡ್ ವಾರ್ನರ್ ವಿಕೆಟ್ ಪಡೆದರು. ವಾರ್ನರ್ ಅವರನ್ನು ಶಮಿ ಕ್ಲೀನ್ ಬೌಲ್ಡ್ ಮಾಡಿದರು.
ಲಬುಶೇನ್ ಅತ್ಯಧಿಕ ಸ್ಕೋರ್
ಆರಂಭಿಕ 2 ವಿಕೆಟ್ಗಳ ಪತನದ ನಂತರ ಜೊತೆಯಾದ ಸ್ಟೀವ್ ಸ್ಮಿತ್ ಹಾಗೂ ಲಬುಶೇನ್ ಉಸಿರುಗಟ್ಟಿದ ಆಸೀಸ್ ಇನ್ನಿಂಗ್ಸ್ಗೆ ಮರುಜನ್ಮ ನೀಡಿದರು. ಈ ಇಬ್ಬರು ಮೂರನೇ ವಿಕೆಟ್ಗೆ 82 ರನ್ಗಳ ಜೊತೆಯಾಟ ಹಂಚಿಕೊಂಡರು. ಈ ಹಂತದಲ್ಲಿ 49 ರನ್ ಗಳಿಸಿ ಆಡುತ್ತಿದ್ದ ಲಬುಶೇನ್ಗೆ ಜಡೇಜಾ ಪೆವಿಲಿಯನ್ ಹಾದಿ ತೋರುವ ಮೂಲಕ ಈ ಜೊತೆಯಾಟಕ್ಕೆ ಅಂತ್ಯ ಹಾಡಿದರು. ನಂತರ ಬಂದ ಮ್ಯಾಥ್ಯೂ ರೆನ್‌ಶಾ ಕೂಡ ಒಂದೇ ಎಸೆತಕ್ಕೆ ಎಲ್ಬಿ ಬಲೆಗೆ ಬಿದ್ದು ಖಾತೆ ತೆರೆಯದೆ ಪೆವಿಲಿಯನ್ ಸೇರಿಕೊಂಡರು.
ಈ ನಡುವೆ ಆರಂಭದಲ್ಲೇ ಕೊಹ್ಲಿ ನೀಡಿದ ಜೀವದಾನವನ್ನು ಬಳಸಿಕೊಂಡು ಬಿಗ್ ಇನ್ನಿಂಗ್ಸ್ ಆಡುವ ಸೂಚನೆ ನೀಡಿದ್ದ ಸ್ಮಿತ್ ಕೂಡ ವೈಯಕ್ತಿಕ 37 ರನ್ಗಳಿಸಿದ್ದಾಗ ಜಡೇಜಾಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡರು. ಬಳಿಕ ಪೀಟರ್ ಹ್ಯಾಂಡ್ಸ್ಕಾಂಬ್ (31 ರನ್) ಹಾಗೂ ಅಲೆಕ್ಸ್ ಕ್ಯಾರಿ (36 ರನ್)ಕೊಂಚ ಹೊತ್ತು ಪ್ರತಿರೋಧ ತೋರಿದ್ದು ಬಿಟ್ಟರೆ, ಆಸೀಸ್ ಪಾಳಯದ ಮತ್ತ್ಯಾವ ಬ್ಯಾಟರ್ಗೂ ಭಾರತದ ದಾಳಿ ಮುಂದೆ ನೆಲೆಯೂರಲಾಗಲಿಲ್ಲ.
ಜಡೇಜಾಗೆ 5 ವಿಕೆಟ್
ಬರೋಬ್ಬರಿ 6 ತಿಂಗಳುಗಳ ಕಾಲ ಕ್ರಿಕೆಟ್ನಿಂದ ದೂರ ಉಳಿದಿದ್ದ ಜಡೇಜಾ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. ಸ್ಪಿನ್ನರ್ಗಳಿಗೆ ಹೆಚ್ಚು ನೆರವಾಗುವ ಈ ಪಿಚ್ನಲ್ಲಿ ತನ್ನ ಹಳೆಯ ಶೈಲಿಯಲ್ಲಿಯೇ ಬೌಲಿಂಗ್ ಮಾಡಿದ ಜಡೇಜಾ ಆಸೀಸ್ ಪಾಳಯದ ಪ್ರಮುಖ 5 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಅದರಲ್ಲೂ ತಂಬ್ಸ್ ಅಪ್ ಮಾಡಿ ಜಡೇಜಾರನ್ನು ಕೆರಳಿಸುವ ಕೆಲಸ ಮಾಡಿದ್ದ ಸ್ಟೀವ್ ಸ್ಮಿತ್ರನ್ನು ನಂತರದ ಎಸೆತದಲ್ಲಿಯೇ ಕ್ಲೀನ್ ಬೌಲ್ಡ್ ಮಾಡಿದ್ದು ಮಾತ್ರ ಎಲ್ಲರನ್ನೂ ಅಚ್ಚರಿಗೊಳಿಸಿತು.