ಭಾರತಕ್ಕೆ ಇಂದಿನಿಂದ ಆಸ್ಟ್ರೇಲಿಯಾ 'ಟೆಸ್ಟ್'..!
ನಾಗ್ಪುರ(ಫೆ.09): ಭಾರತ ಹಾಗೂ ಆಸ್ಪ್ರೇಲಿಯಾ ನಡುವಿನ ಬಹುನಿರೀಕ್ಷಿತ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೆ ಗುರುವಾರ ಚಾಲನೆ ದೊರೆಯಲಿದ್ದು, 4 ಪಂದ್ಯಗಳ ಸರಣಿಯ ಮೊದಲ ಪಂದ್ಯ ನಾಗ್ಪುರದಲ್ಲಿ ನಡೆಯಲಿದೆ.
‘ಭಾರತದಲ್ಲಿ ಟೆಸ್ಟ್ ಸರಣಿ ಗೆಲ್ಲುವುದು ಆ್ಯಷಸ್ ಗೆಲುವಿಗಿಂತಲೂ ದೊಡ್ಡದು’ ಎಂದು ಆಸೀಸ್ ಆಟಗಾರರೇ ಹೇಳಿಕೊಂಡಿದ್ದು, ಆ ತಂಡಕ್ಕೆ ಈ ಸರಣಿ ಎಷ್ಟುಮಹತ್ವದಾಗಿದೆ ಎನ್ನುವುದಕ್ಕೆ ಉದಾಹರಣೆ. ಮತ್ತೊಂದೆಡೆ ತವರಿನಲ್ಲಿ ಕಳೆದೊಂದು ದಶಕದಲ್ಲಿ ಸರಣಿ ಸೋಲನ್ನೇ ಕಾಣದ ಭಾರತಕ್ಕೆ ತನ್ನ ಸಾರ್ವಭೌಮತ್ವವನ್ನು ಮುಂದುವರಿಸುವ ತವಕ. ಈ ಸರಣಿಯು ಹಲವು ತಿರುವು, ವೃತ್ತಿಬದುಕು ಬದಲಿಸುವ, ವಿವಾದಗಳಿಗೆ ಸಾಕ್ಷಿಯಾಗುವ ನಿರೀಕ್ಷೆ ಇದ್ದು ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.
ಭಾರತವು ಕೆಲ ಸಮಸ್ಯೆ ಹೊಂದಿದ್ದರೂ, ಸರಣಿ ಗೆಲ್ಲುವ ನೆಚ್ಚಿನ ತಂಡವಾಗೇ ಸರಣಿಗೆ ಕಾಲಿಡಲಿದೆ. ತನ್ನ ನಂ.1 ವೇಗಿ ಬೂಮ್ರಾ ಗಾಯದಿಂದ ಇನ್ನೂ ಚೇತರಿಸಿಕೊಂಡಿಲ್ಲ. ಆಸ್ಪ್ರೇಲಿಯಾದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಗೆಲುವಿನ ರೂವಾರಿ ರಿಷಭ್ ಪಂತ್ ಅಪಘಾತಕ್ಕೀಡಾಗಿ ಆಸ್ಪತ್ರೆ ಸೇರಿದ್ದಾರೆ. ಆದರೆ ಈ ಸಮಸ್ಯೆಗಳಿಗೆ ಪರಿಹಾರವೆಂಬಂತೆ ಭವಿಷ್ಯದ ಸೂಪರ್ ಸ್ಟಾರ್ ಎಂದೇ ಕರೆಸಿಕೊಳ್ಳುತ್ತಿರುವ ಶುಭ್‌ಮನ್ ಗಿಲ್‌ರ ಬಲ ತಂಡಕ್ಕಿದೆ. ‘ರನ್ ಮಷಿನ್’ ಖ್ಯಾತಿಯ ವಿರಾಟ್ ಕೊಹ್ಲಿ ಲಯಕ್ಕೆ ಮರಳಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಆರ್.ಅಶ್ವಿನ್ ಬಗ್ಗೆ ಕಾಂಗರೂ ಪಡೆಗೆ ಈಗಲೂ ಭಯವಿದೆ. ಜೊತೆಗೆ ತವರಿನಲ್ಲಿ ಏಕಾಂಗಿಯಾಗಿ ಪಂದ್ಯ ಗೆಲ್ಲಿಸಬಲ್ಲ ಸಾಮರ್ಥ್ಯವಿರುವ ರವೀಂದ್ರ ಜಡೇಜಾ ತಂಡಕ್ಕೆ ವಾಪಸಾಗಿದ್ದಾರೆ.
ಇನ್ನು ಆಸ್ಪ್ರೇಲಿಯಾ ಗೆಲ್ಲಬೇಕಿದ್ದರೆ ಸ್ಟೀವ್ ಸ್ಮಿತ್ ರಾಶಿ ರಾಶಿ ರನ್ ಕಲೆಹಾಕಬೇಕು. ಹಿಂದಿನ ಸರಣಿಗಳಲ್ಲಿ ಸ್ಮಿತ್ ಮಿಂಚಿದರೂ ಆಸೀಸ್ ಸೋತ್ತಿತ್ತು. ಆಗ ಸ್ಮಿತ್‌ಗೆ ಸೂಕ್ತ ಬೆಂಬಲ ನೀಡಬಲ್ಲ ಬ್ಯಾಟರ್ ತಂಡದಲ್ಲಿ ಇರಲಿಲ್ಲ. ಈ ಬಾರಿ ಸ್ಮಿತ್ ಆಟವನ್ನೂ ಮೀರಿಸಬಲ್ಲ ಮಾರ್ನಸ್ ಲಬುಶೇನ್ ತಂಡದಲ್ಲಿದ್ದಾರೆ. ಇವರಿಬ್ಬರನ್ನು ಕಟ್ಟಿಹಾಕುವುದೇ ಭಾರತೀಯರ ಮುಂದಿರುವ ಬಹುಮುಖ್ಯ ಸವಾಲು.
ಸಂಭವನೀಯ ಆಟಗಾರರ ಪಟ್ಟಿ
ಭಾರತ: ರೋಹಿತ್(ನಾಯಕ), ಗಿಲ್/ರಾಹುಲ್, ಪೂಜಾರ, ಕೊಹ್ಲಿ, ಗಿಲ್/ಸೂರ್ಯ, ಜಡೇಜಾ, ಭರತ್, ಅಶ್ವಿನ್, ಅಕ್ಷರ್/ಕುಲ್ದೀಪ್, ಶಮಿ, ಸಿರಾಜ್
ಆಸ್ಪ್ರೇಲಿಯಾ: ವಾರ್ನರ್, ಖವಾಜ, ಲಬುಶೇನ್, ಸ್ಮಿತ್, ಹೆಡ್, ಹ್ಯಾಂಡ್‌್ಸಕಂಬ್, ಅಲೆಕ್ಸ್ ಕೇರಿ, ಕಮಿನ್ಸ್(ನಾಯಕ), ಏಗಾರ್/ಮರ್ಫಿ, ಲಯನ್, ಬೋಲೆಂಡ್
ಪಿಚ್ ರಿಪೋರ್ಚ್
ನಾಗ್ಪುರ ಪಿಚ್ ಸ್ಪಿನ್ ಸ್ನೇಹಿ ಪಿಚ್ ಆಗಿದ್ದು, ಇಲ್ಲಿ ಬ್ಯಾಟರ್‌ಗಳು ರನ್ ಗಳಿಸಲು ಹೆಚ್ಚಿನ ಪರಿಶ್ರಮ ವಹಿಸಬೇಕಾಗಬಹದು. ಅಶ್ವಿನ್ 3 ಟೆಸ್ಟ್‌ನಲ್ಲಿ 23 ವಿಕೆಟ್ ಕಬಳಿಸಿದ್ದು, ಜಡೇಜಾ 3 ಟೆಸ್ಟ್‌ನಲ್ಲಿ 12 ವಿಕೆಟ್ ಕಿತ್ತಿದ್ದಾರೆ. ಇಲ್ಲಿ ನಡೆದಿರುವ 6 ಟೆಸ್ಟ್‌ಗಳ ಪೈಕಿ 3 ಟೆಸ್ಟ್‌ಗಳು ಇನ್ನಿಂಗ್‌್ಸ ಜಯಕ್ಕೆ ಸಾಕ್ಷಿಯಾಗಿವೆ. ಇನ್ನೆರಡು ಪಂದ್ಯದಲ್ಲಿ 100ಕ್ಕೂ ಹೆಚ್ಚು ರನ್ ಗೆಲುವು ದಾಖಲಾಗಿದೆ.
ಭಾರತಕ್ಕೆ ಆಯ್ಕೆ ಗೊಂದಲ
ರೋಹಿತ್, ಪೂಜಾರ, ಕೊಹ್ಲಿ, ಅಶ್ವಿನ್, ಜಡೇಜಾ, ಶಮಿ. ಈ ಆರು ಮಂದಿ ಹನ್ನೊಂದರ ಬಳಗದಲ್ಲಿ ನಿಶ್ಚಿಯವಾಗಿ ಇರಲಿದ್ದಾರೆ. ಇನ್ನುಳಿದ 5 ಸ್ಥಾನಗಳಿಗೆ ಪೈಪೋಟಿ ಏರ್ಪಡಲಿದೆ. ಶ್ರೇಯಸ್ ಅಯ್ಯರ್ ಜಾಗಕ್ಕೆ ಶುಭ್‌ಮನ್ ಗಿಲ್ ಹಾಗೂ ಸೂರ್ಯಕುಮಾರ್ ಯಾದವ್ ನಡುವೆ ಸ್ಪರ್ಧೆ ಇದೆ. ರೋಹಿತ್ ಜೊತೆ ಇನ್ನಿಂಗ್‌್ಸ ಆರಂಭಿಸುವವರಾರಯರೂ ಎನ್ನುವ ಪ್ರಶ್ನೆಗೂ ಇನ್ನೂ ಸರಿಯಾದ ಉತ್ತರ ಸಿಕ್ಕಿಲ್ಲ. ಲಯದಲ್ಲಿಲ್ಲದ ಕೆ.ಎಲ್.ರಾಹುಲ್‌ಗೆ ಮತ್ತೊಂದು ಅವಕಾಶ ಸಿಗಲಿದೆಯೇ ಎನ್ನುವ ಕುತೂಹಲವಿದೆ. ವಿಕೆಟ್ ಕೀಪರ್ ಸ್ಥಾನವನ್ನು ತಂಡದ ಆಡಳಿತ ಕೆ.ಎಸ್.ಭರತ್‌ಗೆ ನೀಡುತ್ತಾ ಅಥವಾ ಇಶಾನ್ ಕಿಶನ್‌ರನ್ನು ಆಡಿಸುವ ಸಾಹಸಕ್ಕೆ ಕೈಹಾಕುತ್ತಾ ಎನ್ನುವುದೂ ಸ್ಪಷ್ಟವಾಗಿಲ್ಲ. 3ನೇ ಸ್ಪಿನ್ನರ್ ಸ್ಥಾನಕ್ಕೆ ಅಕ್ಷರ ಪಟೇಲ್ ಹಾಗೂ ಕುಲ್ದೀಪ್ ಯಾದವ್ ನಡುವೆ ಯಾರನ್ನು ಆಯ್ಕೆ ಮಾಡಬಹುದು ಎನ್ನುವುದೂ ಇನ್ನೂ ತಿಳಿದಿಲ್ಲ.
ವಿಶ್ವಕಪ್ ಫೈನಲ್ ಲೆಕ್ಕಾಚಾರ ಹೇಗೆ?
* ಆಸ್ಪ್ರೇಲಿಯಾ ವಿರುದ್ಧ ಭಾರತಕ್ಕೆ ಸರಣಿ ಗೆಲುವು ಅಗತ್ಯ
* ಸರಣಿ 2-2ರಲ್ಲಿ ಡ್ರಾಗೊಂಡು, ಕಿವೀಸ್ ವಿರುದ್ಧ ಲಂಕಾ 2-0ಯಲ್ಲಿ ಗೆದ್ದರೆ ಭಾರತ ಔಟ್
* ಸರಣಿ 1-1ರಲ್ಲಿ ಡ್ರಾಗೊಂಡು, ತವರಲ್ಲಿ ವಿಂಡೀಸ್ ವಿರುದ್ಧ ದ.ಆಫ್ರಿಕಾ 2-0ಯಲ್ಲಿ ಗೆದ್ದರೆ ಭಾರತ ಹೊರಕ್ಕೆ
* ಭಾರತ ವಿರುದ್ಧ ಆಸೀಸ್ 0-4ರಲ್ಲಿ ಸೋತು, ಕಿವೀಸ್ ವಿರುದ್ಧ ಲಂಕಾ 2-0ಯಲ್ಲಿ ಗೆದ್ದರೆ ಆಸೀಸ್ ಔಟ್
ತವರಿನಲ್ಲಿ ಭಾರತಕ್ಕೆ ಸತತ 16ನೇ ಸರಣಿ ಗೆಲ್ಲುವ ಗುರಿ
ಭಾರತ ಕಳೆದ 10 ವರ್ಷದಲ್ಲಿ ತವರಿನಲ್ಲಿ 15 ಸರಣಿಗಳನ್ನು ಆಡಿದ್ದು ಎಲ್ಲಾ 15ರಲ್ಲೂ ಗೆದ್ದಿದೆ. ಕೊನೆ ಬಾರಿಗೆ ತವರಲ್ಲಿ ಭಾರತ ಸರಣಿ ಸೋತಿದ್ದು 2012ರಲ್ಲಿ ಇಂಗ್ಲೆಂಡ್ ವಿರುದ್ಧ. ಆ ಬಳಿಕ ತವರಲ್ಲಿ 40 ಟೆಸ್ಟ್‌ಗಳನ್ನು ಆಡಿದ್ದು, 33ರಲ್ಲಿ ಗೆದ್ದಿದೆ. 2ರಲ್ಲಿ ಸೋತಿದ್ದು, ಇನ್ನುಳಿದ 5 ಪಂದ್ಯ ಡ್ರಾಗೊಂಡಿವೆ. ಆಸೀಸ್ ವಿರುದ್ಧ ಸರಣಿ ಜಯಿಸಿ ಸತತ 16ನೇ ಸರಣಿ ಜಯದ ಮೇಲೆ ಕಣ್ಣಿಟ್ಟಿದೆ.
ನಾಗ್ಪುರ ಪಿಚ್: ಬಿಸಿಸಿಐ ಬಗ್ಗೆ ಆಸೀಸ್ ಮಾಧ್ಯಮಗಳ ಟೀಕೆ!
ಭಾರತ ಸರಣಿ ಗೆಲ್ಲಲು ತನ್ನಿಷ್ಟದಂತೆ, ಚೆಂಡು ಅತಿಯಾಗಿ ಸ್ಪಿನ್ ಆಗುವಂತೆ ಪಿಚ್ ಸಿದ್ಧಪಡಿಸಿಕೊಂಡಿದೆ. ಬಿಸಿಸಿಐ ಪಿಚ್ ಕ್ಯುರೇಟರ್‌ಗಳಿಗೆ ಸ್ಪಿನ್ ಪಿಚ್ ಸಿದ್ಧಪಡಿಸುವಂತೆ ಸೂಚನೆ ನೀಡಿದೆ ಎಂದು ಆಸ್ಪ್ರೇಲಿಯಾದ ಮಾಧ್ಯಮಗಳು ವರದಿ ಮಾಡಿವೆ. ಆಸ್ಪ್ರೇಲಿಯಾದ ಅಗ್ರ 7ರಲ್ಲಿ ನಾಲ್ವರು ಎಡಗೈ ಬ್ಯಾಟರ್‌ಗಳಿಗೆ ಅವರಿಗೆ ಕಷ್ಟವಾಗುವಂತೆ ಪಿಚ್‌ನ ಒಂದು ಬದಿಗೆ ನೀರುಣಿಸದೆ ಒಣಗಲು ಬಿಡಲಾಗಿದೆ ಎಂದು ಮಾಧ್ಯಮಗಳು ಟೀಕಿಸಿವೆ. ಈ ನಡುವೆ ಬುಧವಾರ ಭಾರತದ ನಾಯಕ ರೋಹಿತ್ ಶರ್ಮಾ, ನಾಗ್ಪುರ ಕ್ರೀಡಾಂಗಣದ ಪ್ರೆಸ್ ಬಾಕ್ಸ್‌ಗೆ ಭೇಟಿ ಪಿಚ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ, ಟೆಸ್ಟ್ ಕಡೆ ಗಮನ ನೀಡಿ ಆಸ್ಪ್ರೇಲಿಯಾ ಪತ್ರಕರ್ತರ ಕಾಲೆಳೆದ ಪ್ರಸಂಗವೂ ನಡೆಯಿತು.