ಬೆಂಗಳೂರು ವಿವಿಯಲ್ಲಿ ಚಿರತೆ ಆತಂಕ: ನಾಗರಭಾವಿ ಸರ್ಕಲ್ನಿಂದ ವಿವಿಗೆ ತೆರಳುವ ರಸ್ತೆ ರಾತ್ರಿ 8 ರಿಂದ ಬೆಳಗ್ಗೆ 6ರವರೆಗೆ ಬಂದ್
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲಿ ಚಿರತೆ ಕಾಣಿಸಿಕೊಂಡಿದ್ದು, ವಿದ್ಯಾರ್ಥಿಗಳಲ್ಲಿ ಮತ್ತು ಸಾರ್ವಜನಿಕರಲ್ಲಿ ಆತಂಕ ಮೂಡಿದೆ. ಈ ಹಿನ್ನೆಲೆ ವಿಶ್ವವಿದ್ಯಾಲಯ ಆವರಣಕ್ಕೆ ಸಂಪರ್ಕ ಕಲ್ಪಿಸುವ ಕೆಲ ರಸ್ತೆಗಳನ್ನು ಬಂದ್ ಮಾಡಲಾಗಿದೆ. ನಾಗರಭಾವಿ ಸರ್ಕಲ್ನಿಂದ ವಿಶ್ವವಿದ್ಯಾಲಯಕ್ಕೆ ತೆರಳುವ ರಸ್ತೆಯನ್ನು ರಾತ್ರಿ 8 ರಿಂದ ಬೆಳಗ್ಗೆ 6 ಗಂಟೆವರೆಗೆ ಸಿಬ್ಬಂದಿ ಬಂದ್ ಮಾಡಿ, ಯಾರನ್ನೂ ರಸ್ತೆಯಲ್ಲಿ ಬಿಡದಂತೆ ಸೂಚನೆ ಹೊರಡಿಸಿದ್ದಾರೆ. ಈ ಸಂಬಂಧ ವಾಹನ ಸವಾರರು ಬದಲಿ ಮಾರ್ಗ ಬಳಸಲು ಸೂಚಿಸಿದ್ದು, ಆರ್.ಆರ್.ನಗರ ಕಡೆಯ ರಸ್ತೆ ಸಂಚಾರ ಎಂದಿನಂತೆ ಇರಲಿದೆ. ಯಾವುದೇ ಬದಲಾವಣೆ ಇಲ್ಲ.
ಬೆಂಗಳೂರು ವಿವಿ ಕ್ಯಾಂಪಸ್ನಲ್ಲಿ ಕಾಣಿಸಿಕೊಂಡ ಪ್ರಾಣಿ ಚಿರತೆಯಲ್ಲ, ಕಾಡುಬೆಕ್ಕು: ತಜ್ಞರ ಅಭಿಮತ
ಬೆಂಗಳೂರು ವಿಶ್ವವಿದ್ಯಾಲಯ ಕ್ಯಾಂಪಸ್ನಲ್ಲಿ ಇತ್ತೀಚೆಗೆ ಚಿರತೆ ಕಾಣಿಸಿಕೊಂಡಿದೆ ಎಂದು ಸುದ್ದಿಯಾಗಿತ್ತು. ಆದರೆ ಅದು ಚಿರತೆಯಲ್ಲ, ಅದೇ ಆಕಾರ ಹೋಲುವ ಕಾಡುಬೆಕ್ಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ವನ್ಯಜೀವಿ ಸಂರಕ್ಷಣೆ ಕಾರ್ಯಕರ್ತರು ವಿವರಣೆ ನೀಡಿದ್ದಾರೆ. ಈ ಪ್ರಾಣಿಯು ದಕ್ಷಿಣ ಏಷ್ಯಾದ ಕಾಡುಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಕಳೆದ ಶುಕ್ರವಾರದಿಂದ ಕಾಡುಬೆಕ್ಕಿನ ಸಿಸಿಟಿವಿ ಫೂಟೇಜ್ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಲು ಆರಂಭಿಸಿತ್ತು. ಅದರ ವಿವರಣೆ ಪಠ್ಯದಲ್ಲಿ ಬೆಕ್ಕು ಎಂಬ ಉಲ್ಲೇಖವಿತ್ತು. ಇದೇ ಹೊತ್ತಿಗೆ ಮಾಧ್ಯಮಗಳಲ್ಲಿ ಚಿರತೆಯ ದೃಶ್ಯಾವಳಿಗಳೊಂದಿಗೆ ಬೆಂಗಳೂರು ವಿಶ್ವವಿದ್ಯಾಲಯದ ಸಮೀಪ ಚಿರತೆಯೊಂದು ಕಾಣಿಸಿಕೊಂಡಿದೆ ಎಂಬ ವಿವರಗಳು ಪ್ರಸಾರವಾಗಿದ್ದವು. ಈ ಸುದ್ದಿಯು ಸಾಮಾನ್ಯ ಜನರಲ್ಲಿ ಅನಗತ್ಯ ಆತಂಕ ಹುಟ್ಟುಹಾಕಿತ್ತು.
ಬೆಂಗಳೂರು ಹೊರವಲಯದ ಕಾಡುಗಳಲ್ಲಿ ಚಿರತೆ ಕಾಣಿಸುವುದರಲ್ಲಿ ವಿಶೇಷ ಏನೂ ಇಲ್ಲ. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ವಿಡಿಯೊ ತುಣುಕು ಕಾಡುಬೆಕ್ಕಿನದು. ಅದು ಚಿರತೆ ಅಲ್ಲ. ವಿಡಿಯೊ ಕ್ಲಿಪ್ನಲ್ಲಿದ್ದ ಪ್ರಾಣಿಯ ದೇಹದ ಗಾತ್ರ ಮತ್ತು ಅದರ ಕಿವಿ ಇರುವ ರೀತಿಯನ್ನು ವಿಶ್ಲೇಷಿಸಿದಾಗ ಅದು ಪ್ರೌಢಾವಸ್ಥೆಯಲ್ಲಿರುವ ಕಾಡುಬೆಕ್ಕು ಎಂಬ ಅಂಶ ಮನದಟ್ಟಾಯಿತು. ಆದರೆ ವಿಶ್ವವಿದ್ಯಾಲಯವು ಮಾಧ್ಯಮ ವರದಿಗಳನ್ನು ಆಧರಿಸಿ ಅಷ್ಟು ಹೊತ್ತಿಗೆ ಅಧಿಸೂಚನೆ ಹೊರಡಿಸಿತ್ತು. ಇದು ಸಾರ್ವಜನಿಕರನ್ನು ತಪ್ಪು ಹಾದಿಗೆ ಎಳೆಯಿತು ಎಂದು ಅರಣ್ಯ ಇಲಾಖೆಯ ಆರ್ಎಫ್ಒ ಒಬ್ಬರು ಪ್ರತಿಕ್ರಿಯಿಸಿದರು.
ಕನ್ನಳ್ಳಿ ಸಮೀಪದ ಗಂಗಾಡಿಪುರ ಗ್ರಾಮದ ಮಹಿಳೆಯೊಬ್ಬರು ಬೆಂಗಳೂರು ನಗರ ಆರ್ಎಫ್ಒ ಕಚೇರಿಯನ್ನು ಸಂಪರ್ಕಿಸಿ ತಮ್ಮ ಬಳಿ ಇದ್ದ ವಿಡಿಯೊ ತುಣುಕು ಹಂಚಿಕೊಂಡಿದ್ದರು. ಕೃತಕ ಸೌಂಡ್ ಎಫೆಕ್ಟ್ ಮತ್ತು ಗರ್ಜಿಸುವ ಧ್ವನಿಗಳಿದ್ದ ವಿಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದ ನಂತರ ವಿಷಯ ಏನೆಂದು ಮನದಟ್ಟಾಯಿತು. ಆದರೂ ಅರಣ್ಯ ಇಲಾಖೆ ಸಿಬ್ಬಂದಿ ಇಡೀ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಿದರು. ನಂತರ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಈ ಪ್ರದೇಶದಲ್ಲಿ ಯಾರೊಬ್ಬರಿಗೂ ಚಿರತೆ ಕಾಣಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾಗಿ ಅವರು ಹೇಳಿದರು.