ಬೆಂಗಳೂರಿನ ಲಾಡ್ಜ್ ಕೊಠಡಿಯಲ್ಲಿ ತಹಶೀಲ್ದಾರ್ ಜಕ್ಕಣಗೌಡರ್ ಸಾವು!

ಶಿವಮೊಗ್ಗ: ತೀರ್ಥಹಳ್ಳಿ ತಹಸೀಲ್ದಾರ್ ಆಗಿ ಕಳೆದ ಒಂದು ವರ್ಷದಿಂದ ಕಾರ್ಯ ನಿರ್ವಹಿಸುತ್ತಿದ್ದ ಜಿ ಬಿ ಜಕ್ಕಣಗೌಡರ್ (55) ಮಂಗಳವಾರ ರಾತ್ರಿ ಬೆಂಗಳೂರಿನ ವಸತಿ ಗೃಹವೊಂದರಲ್ಲಿ ನಿಧನರಾಗಿದ್ದಾರೆ.
ಜಕ್ಕಣ್ಣಗೌಡ ಅವರು ಕೋರ್ಟ್ ಕೆಲಸಕ್ಕೆಂದು ಬೆಂಗಳೂರಿಗೆ ಆಗಮಿಸಿ ಕಪಾಲಿ ಥಿಯೇಟರ್ ಸಮೀಪದ ವೈಭವ್ ಲಾಡ್ಜ್ ನಲ್ಲಿ ಉಳಿದುಕೊಂಡಿದ್ದರು. ಆದ್ರೆ, ಅಕ್ಟೋಬರ್ 16 ರಂದು ರಾತ್ರಿ 9ರ ಸುಮಾರಿಗೆ ಅವರು ರೂಮ್ನಲ್ಲಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಒಂದೆಡೆ ಹೃದಯಾಘಾತದಿಂದ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದರೆ ಮತ್ತೊಂದೆಡೆ ಈ ಸಾವಿನ ಸುತ್ತ ಅನುಮಾನಗಳು ಹುಟ್ಟಿಕೊಂಡಿವೆ.
ಮೂಲತಃ ಗದಗ ನಗರದವರಾದ ಜಕ್ಕಣಗೌಡರ್ ಮಂಗಳವಾರ ಇಲಾಖೆ ಕಾರ್ಯದ ನಿಮಿತ್ತ ಬೆಂಗಳೂರಿಗೆ ತೆರಳಿದ್ದರು. ರಾತ್ರಿ 11 ಗಂಟೆ ವರೆಗೂ ಸಿಬ್ಬಂದಿಯೊಂದಿಗೆ ಮೊಬೈಲ್‌ನಲ್ಲಿ ಮಾತನಾಡಿದ್ದು, ನಂತರ ಯಾವುದೇ ಕರೆಗಳನ್ನು ಸ್ವೀಕರಿಸಿರಲಿಲ್ಲ. ಅನುಮಾನದಿಂದ ಅವರು ವಾಸ್ತವ್ಯ ಮಾಡಿದ್ದ ವಸತಿ ಗೃಹದ ಕೊಠಡಿಯನ್ನು ಪರಿಶೀಲಿಸಿದಾಗ ಮೃತಪಟ್ಟಿರುವುದು ಗೊತ್ತಾಗಿದೆ. ಹೃದಯಾಘಾತದಿಂದ ಸಾವು ಸಂಭವಿಸಿರಬಹುದೆಂದು ಶಂಕಿಸಲಾಗಿದೆ. ಅವರಿಗೆ ಪತ್ನಿ, ಇಬ್ಬರು ಪುತ್ರಿಯರು ಇದ್ದಾರೆ.
ತೀರ್ಥಹಳ್ಳಿಯಲ್ಲಿತಹಸೀಲ್ದಾರ್ ಆಗಿ ಉತ್ತಮ ಹೆಸರು ಗಳಿಸಿದ್ದ ಜಿ.ಬಿ.ಜಕ್ಕಣಗೌಡರ್ ಇನ್ನು ಮೂರು ತಿಂಗಳಲ್ಲಿ ಉಪವಿಭಾಗಾಧಿಕಾರಿ ಹುದ್ದೆಗೆ ಪದೋನ್ನತಿ ಹೊಂದಲಿದ್ದರು. ಗದಗದಲ್ಲಿ ಗುರುವಾರ ಅಂತ್ಯಕ್ರಿಯೆ ನಡೆಯಲಿದೆ.
ಇನ್ನು ತೀರ್ಥಹಳ್ಳಿಯ ಹಶೀಲ್ದಾರ್ ಜಕ್ಕಣ್ಣಗೌಡರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಬೆಂಗಳೂರಿನಲ್ಲಿದ್ದ ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಕೂಡಲೇ ಲಾಡ್ಜ್ ಆಗಮಿಸಿದ್ದಾರೆ. ಹಾಗೇ ಸ್ಥಳಕ್ಕೆ ಇನ್ನು ಉಪ್ಪಾರ ಪೇಟೆ ಪೊಲೀಸ್ ಠಾಣೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆ ಮಾಡಿದ ಬಳಿಕ ಸಾವಿನ ಸತ್ಯಾಸತ್ಯತೆ ತಿಳಿಯಲಿದೆ.
ಇನ್ನು ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ ಆರಗ ಜ್ಞಾನೇಂದ್ರ, ಸರಳ ಸಜ್ಜನಿಕೆಯ ಜೊತೆ ತುಂಬಾ ಸಮಾದಾನದ ವ್ಯಕ್ತಿತ್ವ ಹೊಂದಿದ್ದ ಜಕ್ಕಣ್ಣಗೌಡರ ಅಕಾಲಿಕ ಸಾವು. ದುಖಃವನ್ನು ಬರಿಸುವ ಶಕ್ತಿ ಭಗವಂತ ಅವರ ಕುಟುಂಬದವರಿಗೆ ನೀಡಲೆಂದು ಪ್ರಾರ್ಥಿಸಿದರು.
ಪ್ರಕರಣ ಕುರಿತು ಬೆಂಗಳೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಗುರುವಾರ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಶವವನ್ನು ಕುಟುಂಬಸ್ಥರಿಗೆ ನೀಡಲಿದ್ದಾರೆ. ಆ ಬಳಿಕ ಗದಗದಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಶಿವಮೊಗ್ಗ ಡಿಸಿ ಮಾಹಿತಿ ನೀಡಿದ್ದಾರೆ.
ಬಿಜೆಪಿ ಶಾಸಕ ಮುನಿರತ್ನ ಜೈಲಿನಿಂದ ಬಿಡುಗಡೆ:
ಬೆಂಗಳೂರು: ಮಹಿಳೆಯೊಬ್ಬರ ಮೇಲಿನ ಅತ್ಯಾಚಾರ ಆರೋಪ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ರಾಜರಾಜೇಶ್ವರಿನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರು ಪರಪ್ಪನ ಅಗ್ರಹಾರ ಜೈಲಿನಿಂದ ಬುಧವಾರ ಬೆಳಿಗ್ಗೆ ಬಿಡುಗಡೆಯಾದರು.

20 ಕ್ಕೂ ಹೆಚ್ಚು ದಿನಗಳಿಂದ ಜೈಲಿನಲ್ಲಿದ್ದ ಶಾಸಕರು ಬುಧವಾರ ಬಿಡುಗಡೆಯಾಗಿ, ಜೈಲಿನಿಂದ ನೇರವಾಗಿ ತಮ್ಮ ನಿವಾಸದ ಕಡೆ ತೆರಳಿದರು. ಜೈಲಿನಿಂದ ಶಾಸಕರ ಬಿಡುಗಡೆ ಹಿನ್ನೆಲೆ ಬೆಂಬಲಿಗರು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ವೈಯಾಲಿಕಾವಲ್‌ನಲ್ಲಿರುವ ಮುನಿರತ್ನ ನಿವಾಸದೆದುರು ಬೆಂಬಲಿಗರು ಸಂಭ್ರಮಿಸಿದರು.
ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಮುನಿರತ್ನ ಅವರಿಗೆ ಮಂಗಳವಾರ ಶರತ್ತುಬದ್ಧ ಜಾಮೀನು ನೀಡಿತ್ತು. 1 ಲಕ್ಷ ರೂ. ಪರ್ಸನಲ್ ಬಾಂಡ್ ಮತ್ತು ಇಬ್ಬರ ಶೂರಿಟಿ ನೀಡುವಂತೆ ಷರತ್ತು ವಿಧಿಸಿತ್ತು
ಶಾಲೆ ಆವರಣದಲ್ಲಿ ಕುಸಿದು ಬಿದ್ದು ಶಿಕ್ಷಕ ಸಾವು
ಬೆಂಗಳೂರು: ವಿದ್ಯಾರ್ಥಿಗಳಿಗೆ ವಾಲಿಬಾಲ್ ತರಬೇತಿ ನೀಡುತ್ತಿದ್ದಾಗ ಶಾಲೆ ಆವರಣದಲ್ಲಿಯೇ ಕುಸಿದು ಬಿದ್ದು ಶಿಕ್ಷಕರೊಬ್ಬರು ಮೃತಪಟ್ಟಿರುವ ಘಟನೆ ಶಿವಮೊಗ್ಗ (Shivamogga) ಜಿಲ್ಲೆಯ ಸಾಗರದಲ್ಲಿ ನಡೆದಿದೆ. ಗಜಾನನ ಹಿರೇಮಠ್ (46)ಮೃತ ಶಿಕ್ಷಕ. ಇವರು ಸಾಗರ ಪಟ್ಟಣದ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಬುಧವಾರ ಮಧ್ಯಾಹ್ನ ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳಿಗೆ ವಾಲಿಬಾಲ್ ತರಬೇತಿ ನೀಡುತ್ತಿದ್ದರು. ಈ ವೇಳೆ ಶಿಕ್ಷಕ ಕುಸಿದು ಬಿದ್ದಿದ್ದಾರೆ. ತಕ್ಷಣ ಸ್ಥಳದಲ್ಲಿದ್ದವರು ಸಾಗರ (Sagara) ಉಪ ವಿಭಾಗೀಯ ಆಸ್ಪತ್ರೆಗೆ ಅವರನ್ನು ಕರೆದೊಯ್ಯುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ.
ಪತ್ನಿ, ಆಕೆ ಪ್ರಿಯಕರನ ಕೊಲೆ ಮಾಡಿ ವ್ಯಕ್ತಿ ಆತ್ಮಹತ್ಯೆ:
ಬೆಂಗಳೂರು: ಶೀಲ ಶಂಕಿಸಿ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಬರ್ಬರವಾಗಿ ಹತ್ಯೆ ಮಾಡಿ ಬಳಿಕ ಪತಿ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ (Bengaluru) ಆರ್‌ಬಿಐ ಲೇಔಟ್ ಸಮೀಪದ ಸೋಮೇಶ್ವರ ಬಡಾವಣೆಯಲ್ಲಿ ನಡೆದಿದೆ.
ನಿರ್ಮಾಣ ಹಂತದ ಕಟ್ಟಡದಲ್ಲಿ ಮರದ ತುಂಡಿನಿಂದ ಪತ್ನಿ ಹಾಗೂ ಆಕೆಯ ಪ್ರಿಯಕರನ ಮೇಲೆ ಹಲ್ಲೆ ನಡೆಸಿ, ಪತಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಡಬಲ್ ಮರ್ಡರ್ ಮಾಡಿದ ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕೋಣನಕುಂಟೆ (Konanakunte) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕೋಣನಕುಂಟೆ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.