ಬೆಂಗಳೂರಿನ ರೈಲ್ವೇ ನಿಲ್ದಾಣದಲ್ಲಿ 23 ವರ್ಷದ ಯುವತಿ ಶವ ಡ್ರಮ್ನಲ್ಲಿ ಪತ್ತೆ!
ಬೆಂಗಳೂರು: ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣದ ಗೂಡ್ಸ್ ಪ್ಲಾಟ್ಫಾರ್ಮ್ನ ಬಾಕ್ಸ್ವೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ 23 ವರ್ಷದ ಅಪರಿಚಿತ ಯುವತಿಯ ಶವ ಪತ್ತೆಯಾಗಿದೆ. ದುಷ್ಕರ್ಮಿಗಳು ಪ್ಲಾಸ್ಟಿಕ್ ಕವರ್ನಲ್ಲಿ ಶವ ಇಟ್ಟು ಸೀಲ್ ಮಾಡಿದ್ದಾರೆ. ಇಂದು (ಜ.4) ವಾಸನೆ ಬಂದ ಹಿನ್ನೆಲೆ ಪರಿಶೀಲಿಸಿದಾಗ ಯುವತಿಯ ಶವ ಇರುವುದು ಗೊತ್ತಾಗಿದೆ. ಯಶವಂತಪುರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ನಾಲ್ಕೈದು ದಿನಗಳ ಹಿಂದೆ ಶವವನ್ನು ರೇಲ್ವೆ ನಿಲ್ದಾಣದಲ್ಲಿ ತಂದಿಟ್ಟಿರುವ ಶಂಕೆ ವ್ಯಕ್ತವಾಗಿದೆ. ವಾಸನೆ ಬರದಂತೆ ಮೃತದೇಹವನ್ನು ಸೀಲ್ಡ್ ಕವರ್ನಲ್ಲಿ ಹಾಕಿ, ಬಾಕ್ಸ್ ಮಾಡಿ ಇಡಲಾಗಿದೆ. ಇಂದು ಬೆಳಿಗ್ಗೆ ಕೊಂಚ ಹರಿದ ಕವರ್ನಿಂದ ವಾಸನೆ ಹೊರಗೆ ಬಂದಿದೆ. ಸಮಯ ಕಳೆದಂತೆ ವಾಸನೆ ಹೆಚ್ಚಾಗಿದೆ. ಆಗ ಸ್ಥಳಿಯರು ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಬಂದು ಪರಿಶೀಲನೆ ನಡೆಸಿದ ವೇಳೆ ಮೃತದೇಹದ ಸಂಗತಿ ಇರುವದು ಬಯಲಾಗಿದೆ. ಯಶವಂತಪುರ ರೈಲ್ವೇ ಪೊಲೀಸರು ಸದ್ಯ ಯುವತಿಯ ಗುರುತು ಪತ್ತೆ ಹಚ್ಚುತ್ತಿದ್ದಾರೆ.
ಕಳೆದ ಡಿಸೆಂಬರ್ 6/2022 ರಂದುನಗರದ ಬೇರೆ ರೈಲು ನಿಲ್ದಾಣದಲ್ಲಿ ಮಹಿಳೆ ಮೃತದೇಹ ಪತ್ತೆಯಾಗಿತ್ತು. ಕಳೆದ ಒಂದು ತಿಂಗಳಲ್ಲಿ ಇದು ಸೇರಿ ಎರಡನೇ ಮೃತದೇಹ ಪತ್ತೆಯಾಗಿದೆ. ಕೆಜಿಎಫ್ ನಿಂದ ಬೆಂಗಳೂರಿಗೆ ಬರುತ್ತಿದ್ದ ರೈಲಿನಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಮಹಿಳೆ ಮೃತದೇಹ ಪತ್ತೆಯಾಗಿತ್ತು. ದೇಹವನ್ನು ಬೆಡ್ ಶೀಟ್, ಬಟ್ಟೆಗಳ ನಡುವೆ ತುರುಕಲಾಗಿತ್ತು. ಮಹಿಳೆಯ ಯಾವುದೇ ಗುರುತುಗಳು ಪತ್ತೆಯಾಗಿರಲಿಲ್ಲ. ರೈಲು ಖಾಲಿ ಅಗಿದ್ದರು ಚೀಲವನ್ನು ಯಾರು ತೆಗೆದುಕೊಳ್ಳದೆ ಇದ್ದಾಗ ಅನುಮಾನ ವ್ಯಕ್ತವಾಗಿತ್ತು.
ಅನುಮಾನ ಬಂದು ಸಿಬ್ಬಂದಿ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಪರಿಶೀಲನೆ ಮಾಡಿದಾಗ ಮೃತ ದೇಹ ಪತ್ತೆಯಾಗಿತ್ತು. ಬೈಯಪ್ಪನಹಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಎರಡು ಪ್ರಕರಣಕ್ಕೆ ಸಾಮ್ಯತೆ ಇದೆ ಎನ್ನಲಾಗುತ್ತಿದೆ.