ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ವಿರುದ್ಧ ದೂರು ನೀಡಿದ ನಟಿ ಉರ್ಫಿ ಜಾವೇದ್
ಮಹಾರಾಷ್ಟ್ರದ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಚಿತ್ರಾ ಕಿಶೋರ್ ವಾಘ್ ಅವರು ತಮಗೆ ಜೀವ ಬೆದರಿಕೆ ಹಾಕಿದ್ದಾರೆ ಹಾಗೂ ಮಾನಹಾನಿ ಮಾಡುವಂತಹ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿ ನಟಿ ಉರ್ಫಿ ಜಾವೇದ್ ತಮ್ಮ ವಕೀಲರ ಮೂಲಕ ಮಹಾರಾಷ್ಟ್ರ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಅಲ್ಲದೇ, ತಮಗೆ ಜೀವ ಬೆದರಿಕೆ ಇರುವ ಕಾರಣದಿಂದಾಗಿ ರಕ್ಷಣೆ ನೀಡುವಂತೆ ಉರ್ಫಿ ಮನವಿ ಮಾಡಿದ್ದಾರೆ.
ನಟಿ ಉರ್ಫಿ ಜಾವೇದ್ ಮಹಿಳೆಯರ ಮಾನ ಹರಾಜು ಹಾಕುವಂತಹ ಬಟ್ಟೆಗಳನ್ನು ಹಾಕುತ್ತಾರೆ. ಅಶ್ಲೀಲ ಹಾಗೂ ಅಸಭ್ಯವಾಗಿ ನಡೆದುಕೊಡುತ್ತಾರೆ. ಇಂತಹ ನಟಿಯ ಮೇಲೆ ಕ್ರಮ ತಗೆದುಕೊಳ್ಳಬೇಕು ಎಂದು ಚಿತ್ರಾ ಅವರು ಕೆಲ ದಿನಗಳ ಹಿಂದೆಯಷ್ಟೇ ದೂರು ದಾಖಲಿಸಿದ್ದರು. ಅಲ್ಲದೇ, ಅಸಹ್ಯ ಎನ್ನುವಂತಹ ಬಟ್ಟೆಗಳನ್ನು ಹಾಕಿಕೊಂಡು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದಕ್ಕೆ ಚಿತ್ರ ಆಕ್ಷೇಪ ವ್ಯಕ್ತ ಪಡಿಸಿದ್ದರು. ಈ ಹಿನ್ನೆಲೆಯಲ್ಲಿ ರಕ್ಷಣೆ ಕೋರಿ ಉರ್ಫಿ ಮಹಿಳಾ ಆಯೋಗಕ್ಕೆ ಮೊರೆ ಹೋಗಿದ್ದಾರೆ.
ತನ್ನ ವಿಚಿತ್ರ ಕಾಸ್ಟ್ಯೂಮ್ ಮೂಲಕ ಬಾಲಿವುಡ್ ಸಿನಿ ರಂಗದಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಉರ್ಫಿ ಜಾವೇದ್ ಮೇಲೆ ಉರಿದುಕೊಂಡವರೇ ಹೆಚ್ಚು. ಅವಳು ಧರಿಸುವ ಅರೆಬರೆ ಬಟ್ಟೆಯ ಬಗ್ಗೆ ಸಾಕಷ್ಟು ದೂರುಗಳು ಇವೆ. ಈ ವಿಚಾರವಾಗಿ ಅವಳು ಪೊಲೀಸ್ ಸ್ಟೇಶನ್ ಮೆಟ್ಟಿಲೂ ಹತ್ತಿದ್ದಾರೆ. ದುಬೈನಲ್ಲಿ ಪೊಲೀಸ್ ವಿಚಾರಣೆಗೂ ಒಳಗಾಗಿದ್ದಾರೆ. ಸದಾ ವಿವಾದವನ್ನೇ ಬೆನ್ನತ್ತಿ ಹೋಗುವ ಉರ್ಫಿ ಬಗ್ಗೆ ಮೊದಲ ಬಾರಿಗೆ ವ್ಯಕ್ತಿಯೊಬ್ಬರು ಹೆಮ್ಮೆಯಿಂದ ಮಾತನಾಡಿದ್ದಾರೆ. ಅವರನ್ನು ಮಾದರಿಯಾಗಿ ತಗೆದುಕೊಳ್ಳುವಂತೆ ಕರೆಕೊಟ್ಟಿದ್ದಾರೆ.
ಬಾಲಿವುಡ್ ಸಿಂಗರ್ ಯೋ ಯೋ ಹನಿ ಸಿಂಗ್, ಸದ್ಯ ತಮ್ಮ ಆಲ್ಬಂವೊಂದರ ಪ್ರಚಾರದಲ್ಲಿ ತೊಡಗಿದ್ದಾರೆ. ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ‘ಉರ್ಫಿ ಜಾವೇದ್ ಬಗ್ಗೆ ಹಾಡಿಹೊಗಳಿದ್ದಾರೆ. ಉರ್ಫಿ ತನ್ನಿಷ್ಟದಂತೆ ಬದುಕುತ್ತಿರುವ ನಟಿ. ತುಂಬಾ ಧೈರ್ಯವಂತೆ. ಯಾರಿಗೂ ಹೆದರದೇ ತನ್ನ ಬದುಕನ್ನು ಕಟ್ಟಿಕೊಂಡಿದ್ದಾಳೆ. ಹಾಗಾಗಿ ದೇಶದ ಹುಡುಗಿಯರು ಅವಳನ್ನು ನೋಡಿ ಕಲಿತುಕೊಳ್ಳಬೇಕು’ ಎಂದು ಅಚ್ಚರಿಯ ಹೇಳಿಕೆಯನ್ನು ಕೊಟ್ಟಿದ್ದಾರೆ.
ಹನಿ ಸಿಂಗ್ ಇಂಥದ್ದೊಂದು ಮಾತು ಹೇಳುತ್ತಿದ್ದಂತೆಯೇ ಬಾಲಿವುಡ್ ನ ಅನೇಕರು ಗರಂ ಆಗಿದ್ದಾರೆ. ದೇಶದ ಹೆಣ್ಣು ಮಕ್ಕಳು ಯಾರನ್ನು ಮಾದರಿಯಾಗಿ ತಗೆದುಕೊಳ್ಳಬೇಕು ಎಂದು ಗೊತ್ತಿದೆ. ಹನಿ ಸಿಂಗ್ ಬೇಕಾದರೆ ಉರ್ಫಿಯನ್ನು ಮಾದರಿಯಾಗಿ ತಗೆದುಕೊಳ್ಳಲಿ ಎನ್ನುವ ಮಾತುಗಳನ್ನು ಆಡಿದ್ದಾರೆ. ಉರ್ಫಿ ಒಬ್ಬ ಮಾನಸಿಕ ಖಾಯಿಲೆ ಇರುವ ಹುಡುಗಿ. ಆಕೆ ಬದುಕು ಯಾವತ್ತಿಗೂ ಮಾದರಿ ಆಗುವಂಥದ್ದು ಅಲ್ಲ ಎಂದಿದ್ದಾರೆ.
ಅಶ್ಲೀಲ ರೀತಿಯ ಬಟ್ಟೆಗಳನ್ನು ಉರ್ಫಿ ಹಾಕುತ್ತಾರೆ ಎನ್ನುವ ಕಾರಣಕ್ಕಾಗಿ ಮುಂಬೈ ಸೇರಿದಂತೆ ಹಲವು ಕಡೆ ದೂರುಗಳು ದಾಖಲಾಗಿವೆ. ಈ ಕುರಿತು ಉರ್ಫಿ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಮೇಲೆ ಎಷ್ಟೇ ದೂರುಗಳು ಬಂದರೂ, ನನ್ನನ್ನು ಬದಲಿಸಲು ಆಗುವುದಿಲ್ಲ. ನಾನು ಹೇಗಿರಬೇಕೋ ಹಾಗೆಯೇ ಇರುವೆ. ಅದು ನನ್ನ ಸ್ವಾತಂತ್ರ್ಯ. ಯಾವ ದೂರಿಗೂ ನಾನು ಹೆದರುವುದಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.