ಬಿಜೆಪಿಯ ಮಾಜಿ ಕಾರ್ಪೊರೇಟರ್ ಸೇರಿ ಮೂವರು ಕುಟುಂಬ ಸದಸ್ಯರು ವಿಷ ಸೇವಿಸಿ ಆತ್ಮಹತ್ಯೆ; ಸೂಸೈಡ್ ನೋಟ್ ಪತ್ತೆ
ವಿದಿಶಾ: ಮಧ್ಯಪ್ರದೇಶದಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ನಡೆದಿದೆ. ವಿದಿಶಾ ನಗರದ ಬಂಟಿ ನಗರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಪೋಸ್ಟ್ ಮಾಡಿ ನಂತರ ಪತ್ನಿ, ಇಬ್ಬರು ಮಕ್ಕಳ ಜೊತೆ ಬಿಜೆಪಿ ಮಾಜಿ ಕೌನ್ಸಿಲರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾಜಿ ಕಾರ್ಪೊರೇಟರ್ ಸಂಜೀವ್ ಮಿಶ್ರಾ(45), ಪತ್ನಿ ನೀಲಂ(42), 13 ಮತ್ತು 7 ವರ್ಷದ ಇಬ್ಬರು ಪುತ್ರರ ಶವಗಳು ಮನೆಯಲ್ಲಿ ಪತ್ತೆಯಾಗಿವೆ.
ಬಿಜೆಪಿ ಮಾಜಿ ಕಾರ್ಪೊರೇಟರ್ ಸಂಜೀವ್ ಮಿಶ್ರಾ ಅವರು ಸಾಮಾಜಿಕ ಜಾಲತಾಣದಲ್ಲಿ ಸಂದೇಶವೊಂದನ್ನು ಪೋಸ್ಟ್ ಮಾಡಿ ಬಳಿಕ ತನ್ನ ಇಡೀ ಕುಟುಂಬದ ಜೊತೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಂಜೀವ್ ಮಿಶ್ರಾ ಅವರ ಇಬ್ಬರು ಮಕ್ಕಳು ಅನುವಂಶಿಕ ಕಾಯಿಲೆಯಿಂದ ಬಳಲುತ್ತಿದ್ದು ಇಬ್ಬರು ಗಂಡು ಮಕ್ಕಳನ್ನು ಉಳಿಸಿಕೊಳ್ಳಲು ಆಗುತ್ತಿಲ್ಲ. ತನ್ನ ಶತ್ರುಗಳಿಗೆ ಇಂತಹ ಸ್ಥಿತಿ ಬರಬಾರದು ಎಂದು ತಮ್ಮ ಸಂದೇಶದಲ್ಲಿ ನೋವನ್ನು ತೋಡಿಕೊಂಡಿದ್ದಾರೆ.
ಸಂಜೆ 6 ಗಂಟೆ ಸುಮಾರಿಗೆ, ವಿದಿಶಾ ನಗರ ಮಂಡಲ್ ಉಪಾಧ್ಯಕ್ಷ ಮತ್ತು ಬಿಜೆಪಿ ಮಾಜಿ ಕಾರ್ಪೊರೇಟರ್ ಆಗಿದ್ದ ಸಂಜೀವ್ ಮಿಶ್ರಾ ತಮ್ಮ ಮಕ್ಕಳ ಅನಾರೋಗ್ಯ ಸಮಸ್ಯೆಯ ಬಗ್ಗೆ ಹೆಚ್ಚಿನ ಚಿಂತೆ ಮಾಡಿ ತಲೆ ಕೆಡಿಸಿಕೊಂಡಿದ್ದರು. ಅವರ ಅಸಮಾಧಾನ ಹೆಚ್ಚಾಗಿ ತಮ್ಮ ಮಕ್ಕಳ ಆರೋಗ್ಯ ಸರಿ ಪಡಿಸಲು ತನ್ನಿಂದ ಏನೂ ಮಾಡಲು ಆಗುತ್ತಿಲ್ಲ ಎಂಬ ನೋವು ಕಾಡಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶವೊಂದನ್ನು ಪೋಸ್ಟ್ ಮಾಡಿದ್ದಾರೆ. ದೇವರು ತನ್ನ ಶತ್ರುಗಳ ಮಕ್ಕಳಿಗೂ ಗುಣಪಡಿಸಲಾಗದ ಅನುವಂಶಿಕ ಕಾಯಿಲೆ ನೀಡಬಾರದು ಎಂದು ದುಃಖವನ್ನು ಹಂಚಿಕೊಂಡಿದ್ದಾರೆ. ಇದಾದ ಕೆಲವು ಹೊತ್ತಿನ ಬಳಿಕ ಸಂಜೀವ್ ಮಿಶ್ರಾ ಅವರ ಸಂಬಂಧ ಈ ದುಃಖದ ಪೋಸ್ಟ್ ನೋಡಿ ಆತಂಕಕ್ಕೆ ಒಳಗಾಗಿ ಮಿಶ್ರಾ ಅವರ ಮನೆಯತ್ತ ಧಾವಿಸಿದ್ದಾರೆ. ಈ ವೇಳೆ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಉಮಾಶಂಕರ್ ಭಾರ್ಗವ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಮಿಶ್ರಾ ಅವರ ಪುತ್ರರು ಮಸ್ಕ್ಯುಲರ್ ಡಿಸ್ಟ್ರೋಫಿ ಎಂಬ ಆನುವಂಶಿಕ ಕಾಯಿಲೆಯಿಂದ ಬಳಲುತ್ತಿದ್ದರು, ಇದನ್ನು ಗುಣಪಡಿಸಲಾಗುವುದಿಲ್ಲ ಎಂದು ಹೇಳಲಾಗುತ್ತದೆ. ಆತ್ಮಹತ್ಯೆ ಪತ್ರದಲ್ಲಿ ಮಿಶ್ರಾ ಅವರು ತಮ್ಮ ಮಕ್ಕಳನ್ನು ಉಳಿಸಲು ಸಾಧ್ಯವಾಗದ ಕಾರಣ ಬದುಕಲು ಬಯಸುವುದಿಲ್ಲ ಎಂದು ಹೇಳಿದ್ದಾರೆ. ಅವರ ಪತ್ನಿ ಮತ್ತು ಇಬ್ಬರೂ ಮಕ್ಕಳು ಸಲ್ಫಾಸ್ ಮಾತ್ರೆಗಳನ್ನು ಸೇವಿಸಿದ್ದಾರೆ ಮತ್ತು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.