ಬಾಲಿವುಡ್ ಸ್ಟಾರ್ ಜೋಡಿಯ ಮನೆ ನುಗ್ಗಿ ಹೊಡಿತೀನಿ : ಕಂಗನಾ ರಣಾವತ್ ಗರಂ
ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್ ಕಳೆದ ಒಂದು ವಾರದಿಂದ ಸಿಕ್ಕಾಪಟ್ಟೆ ಕೋಪ ಮಾಡಿಕೊಂಡಿದ್ದಾರೆ. ತಮ್ಮ ಮೇಲೆ ಬೇಹುಗಾರಿಕೆ ಮಾಡಲಾಗುತ್ತಿದೆ ಎನ್ನುವುದರಿಂದ ಹಿಡಿದು ತಾವೊಬ್ಬ ಹುಚ್ಚಿ, ಏನು ಬೇಕಾದರೂ ಮಾಡುವುದಕ್ಕೆ ರೆಡಿ, ಮನೆಗೆ ನುಗ್ಗಿ ಹೊಡಿತೀನಿ ಎನ್ನುವವರೆಗೆ ತಾಳ್ಮೆ ಕಳೆದುಕೊಂಡಿದ್ದಾರೆ. ಅದಕ್ಕೆ ಕಾರಣ ಏನು ಎನ್ನುವುದು ಅವರ ಅಭಿಮಾನಿಗಳಿಗೆ ಯಕ್ಷ ಪ್ರಶ್ನೆಯಾಗಿದೆ.
ಬಾಲಿವುಡ್ ಜೋಡಿಯೊಂದು ತಮಗೆ ವಿಪರೀತ ಕಿರುಕುಳ ನೀಡುತ್ತಿದೆ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, ಆ ಜೋಡಿಯ ಬಗ್ಗೆ ಕಿಡಿಕಾರಿದ್ದಾರೆ. ನೀವು ಹೀಗೆಯೇ ಮುಂದುವರೆದರೆ, ನಿಮ್ಮ ಮನೆಗೆ ನುಗ್ಗಿ ಹೊಡೆಯುತ್ತೇನೆ ಎಂದು ಅವರಿಗೆ ಎಚ್ಚರಿಕೆ ಕೊಟ್ಟಿದ್ದಾರೆ. ಆದರೆ, ಆ ಜೋಡಿ ಯಾರು ಎನ್ನುವುದನ್ನು ಅವರು ತಿಳಿಸಿಲ್ಲ. ಆ ಜೋಡಿಗೂ ಇವರಿಗೆ ಇಷ್ಟೊಂದು ದ್ವೇಷ ಯಾಕೆ ಎನ್ನುವುದನ್ನೂ ಅವರು ಹೇಳಿಕೊಂಡಿಲ್ಲ.
ಮೊನ್ನೆಯಷ್ಟೇ ಎಮರ್ಜನ್ಸಿ ಚಿತ್ರಕ್ಕಾಗಿ ಇಡೀ ಆಸ್ತಿಯನ್ನು ಅಡವಿಟ್ಟಿದ್ದೇನೆ ಎಂದು ಕಂಗನಾ ಬರೆದುಕೊಂಡಿದ್ದರು. ತನ್ನೆಲ್ಲ ಆಸ್ತಿಯನ್ನು ಈ ಚಿತ್ರಕ್ಕಾಗಿ ಮುಡುಪಿಟ್ಟ ವಿಚಾರವನ್ನು ಭಾವುಕರಾಗಿಯೇ ಅವರು ಹಂಚಿಕೊಂಡಿದ್ದಾರೆ. ಈ ಕಾರಣದಿಂದಾಗಿ ಏನಾದರೂ ಅವರು ಡಿಪ್ರೆಷನ್ ಗೆ ಹೋಗಿದ್ದಾರಾ ಎನ್ನುವ ಚರ್ಚೆ ಕೂಡ ನಡೆಯುತ್ತಿದೆ. ನಿರ್ದೇಶನ, ನಟನೆ ಜೊತೆ ನಿರ್ಮಾಣಕ್ಕೂ ಅವರು ಇಳಿದಿರುವುದರಿಂದ ಕಂಗನಾ ಆರೋಗ್ಯದಲ್ಲಿ ಏರುಪೇರು ಆಗಿರಬಹುದಾ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.