ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ – ತೃತೀಯಲಿಂಗಿಗೆ 7 ವರ್ಷ ಜೈಲು ಶಿಕ್ಷೆ

ತಿರುವನಂತರಪುರಂ: ಕೇರಳ (Kerala) ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ತೃತೀಯಲಿಂಗಿಯೊಬ್ಬರು (Transgender) ಜೈಲು ಶಿಕ್ಷೆಗೆ ಗುರಿಯಾಗಿರುವ ಪ್ರಸಂಗ ನಡೆದಿದೆ.
ಏಳು ವರ್ಷಗಳ ಹಿಂದೆ ಬಾಲಕನೊಬ್ಬನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಿರುವನಂತಪುರಂ ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯವು, ರಾಜ್ಯದಲ್ಲಿ ಮೊದಲ ಬಾರಿಗೆ ತೃತೀಯಲಿಂಗಿಗೆ ದೋಷಿ ಎಂದು ತೀರ್ಪು ನೀಡಿದೆ.
ವಿಶೇಷ ನ್ಯಾಯಾಧೀಶ ಆಜ್ ಸುದರ್ಶನ್ ಅವರು, 16 ವರ್ಷದ ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಚಿರಾಯಿಂಕೀಝು ಸಮೀಪದ ಅನಾಥಲವಟ್ಟಂ ಮೂಲದ ತೃತೀಯಲಿಂಗಿ ಸಚ್ಚು ಸ್ಯಾಮ್ಸನ್ ಅಲಿಯಾಸ್ ಶೆಫಿನಾ (34) ಅವರಿಗೆ ಏಳು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 25,000 ದಂಡ ವಿಧಿಸಿದ್ದಾರೆ.
ದಂಡದ ಮೊತ್ತವನ್ನು ಪಾವತಿಸದಿದ್ದಲ್ಲಿ ಹೆಚ್ಚುವರಿ ವರ್ಷ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ನ್ಯಾಯಾಲಯ ಆದೇಶಿಸಿದೆ.
ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆರ್.ಎಸ್.ವಿಜಯ್ ಮೋಹನ್, ವಕೀಲರಾದ ಎಂ.ಮುಬೀನಾ ಮತ್ತು ಆರ್.ವೈ.ಅಖಿಲೇಶ್ ಅವರು ಸಂತ್ರಸ್ತ ಪರ ವಾದ ಮಂಡಿಸಿ, ”2016ರ ಫೆಬ್ರವರಿ 23ರಂದು ಆರೋಪಿ ಚಿರಾಯಾಂಕಿಝ್‌ನಿಂದ ತಿರುವನಂತಪುರಕ್ಕೆ ರೈಲಿನಲ್ಲಿ ಬರುತ್ತಿದ್ದ ಸಂತ್ರಸ್ತನನ್ನು ಭೇಟಿಯಾಗಿದ್ದಾರೆ. ನಂತರ ಬಾಲಕನನ್ನು ಕರೆದುಕೊಂಡು ಹೋದಾಗ ಘಟನೆ ನಡೆದಿದೆ. ಬಾಲಕನಿಗೆ ಅಸ್ವಾಭಾವಿಕ ಲೈಂಗಿಕ ಕಿರುಕುಳ ನೀಡಿದ್ದಾರೆ. ಹುಡುಗ ಆರೋಪಿಯೊಂದಿಗೆ ಹೋಗಲು ನಿರಾಕರಿಸಿದಾಗ ಬೆದರಿಕೆ ಹಾಕಿದ್ದರು” ಎಂದು ತಿಳಿಸಿದ್ದರು.
ಚಿತ್ರಹಿಂಸೆಗೆ ಹೆದರಿದ ಬಾಲಕ ಈ ವಿಚಾರವನ್ನು ಮನೆಯವರಿಗೆ ತಿಳಿಸಿರಲಿಲ್ಲ. ಮತ್ತೆ ಆರೋಪಿಯು ಬಾಲಕನಿಗೆ ಫೋನ್ ಮೂಲಕ ಹಲವು ಬಾರಿ ಕರೆ ಮಾಡಿ ನೋಡುವಂತೆ ಪೀಡಿಸುತ್ತಿದ್ದರು. ಫೋನ್‌ನಲ್ಲಿ ನಂಬರ್ ಬ್ಲ್ಯಾಕ್ ಮಾಡಿದಾಗ ಫೇಸ್‌ಬುಕ್ ಮೆಸೆಂಜರ್‌ನಲ್ಲಿ ಸಂದೇಶ ಕಳುಹಿಸಿ ಕಿರುಕುಳ ನೀಡುತ್ತಿದ್ದರು. ಇದನ್ನು ಗಮನಿಸಿದ ತಾಯಿ ಆರೋಪಿ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರ ನಿರ್ದೇಶನದಂತೆ ಆರೋಪಿಯನ್ನು ತಂಬಾನೂರಿಗೆ ಬರುವಂತೆ ಸಂದೇಶ ಕಳುಹಿಸಿದ್ದರು. ಅಲ್ಲಿಗೆ ಬಂದ ತೃತೀಯಲಿಂಗಿಯನ್ನು ಪೊಲೀಸರು ಬಂಧಿಸಿದ್ದರು.