ಬಸ್‌ಗಳ ಮುಖಾಮುಖಿ ಡಿಕ್ಕಿ: ಭೀಕರ ಅಪಘಾತದಲ್ಲಿ 6 ಮಂದಿ ಸಾವು
ಮುಂಬಯಿ: ಮಹಾರಾಷ್ಟ್ರದ ಬುಲ್ದಾನಾ ಜಿಲ್ಲೆಯಲ್ಲಿ ಶನಿವಾರ ಮಧ್ಯರಾತ್ರಿ ಬಸ್‌ಗಳ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆರು ಮಂದಿ ಮೃತಪಟ್ಟಿದ್ದು, 20 ಮಂದಿ ಗಾಯಗೊಂಡಿದ್ದಾರೆ. ಮಲ್ಕಾಪುರ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ 53ರ ನಂದೂರ್ ನಾಕ ಫ್ಲೈ ಓವರ್‌ನಲ್ಲಿ ನಸುಕಿನ 2.30ರ ಸುಮಾರಿಗೆ ಎರಡು ಖಾಸಗಿ ಬಸ್‌ಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.
ಬಾಲಾಜಿ ಟ್ರಾವೆಲ್ಸ್ ಎಂಬ ಸಂಸ್ಥೆಗೆ ಸೇರಿದ ಒಂದು ಬಸ್, ಅಮರನಾಥ ಯಾತ್ರೆಯಿಂದ ಹಿಂಗೋಲಿ ಜಿಲ್ಲೆಗೆ ವಾಪಸ್ ಹೋಗುತ್ತಿತ್ತು. ರಾಯಲ್ ಟ್ರಾವೆಲ್ಸ್‌ಗೆ ಸೇರಿದ ಮತ್ತೊಂದು ಬಸ್ ನಾಶಿಕಂ ಕಡೆ ತೆರಳುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಂದೂರ್ ನಾಕ ಬಳಿ ನಾಸಿಕ್ ಕಡೆಗೆ ತೆರಳುತ್ತಿದ್ದ ಬಸ್, ಟ್ರಕ್ ಒಂದನ್ನು ಓವರ್‌ಟೇಕ್ ಮಾಡಿ ಮುಂದೆ ಹೋದಾಗ ಎದುರು ಬದಿಯಿಂದ ಬಂದ ಮತ್ತೊಂದು ಬಸ್‌ಗೆ ಡಿಕ್ಕಿ ಹೊಡೆದಿದೆ. ಮೂವರು ಮಹಿಳೆಯರು ಸೇರಿದಂತೆ ಆರು ಮಂದಿ ಪ್ರಯಾಣಿಕರು ಮೃತಪಟ್ಟಿದ್ದಾರೆ. ಸುಮಾರು 20 ಮಂದಿ ಗಾಯಗೊಂಡಿದ್ದು, ಅವರನ್ನು ಬುಲ್ದಾನಾದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 32 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರಿಗೆ ಸಮೀಪದ ಗುರುದ್ವಾರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಮೃತರಲ್ಲಿ ಅಮರನಾಥ ಯಾತ್ರೆಯಿಂದ ಮರಳಿ ಬರುತ್ತಿದ್ದ ಬಸ್‌ನ ಚಾಲಕ ಕೂಡ ಸೇರಿದ್ದಾನೆ.
ಅಪಘಾತಕ್ಕೀಡಾದ ಬಸ್‌ಗಳನ್ನು ರಸ್ತೆಯಿಂದ ತೆರವುಗೊಳಿಸಿ, ವಾಹನ ಸಂಚಾರವನ್ನು ಯಥಾಸ್ಥಿತಿಗೆ ತರಲಾಗಿದೆ ಎಂದು ಹೈವೇ ಪೊಲೀಸರು ತಿಳಿಸಿದ್ದಾರೆ. ಬುಲ್ದಾನಾ ಜಿಲ್ಲೆಯಲ್ಲಿ ಇತ್ತೀಚೆಗೆ ಸಂಭವಿಸಿದ ಎರಡನೇ ಭಯಾನಕ ಅಪಘಾತವಿದು. ಜುಲೈ 1ರಂದು ಜಿಲ್ಲೆಯ ಸಮೃದ್ಧಿ ಮಹಾಮಾರ್ಗ ಎಕ್ಸ್‌ಪ್ರೆಸ್‌ವೇನಲ್ಲಿ ಬಸ್‌ನ ಟೈರ್ ಸ್ಫೋಟಗೊಂಡ ಪರಿಣಾಮ ಕಂಬಕ್ಕೆ ಡಿಕ್ಕಿ ಹೊಡೆದಿತ್ತು. ಅದರ ಬಳಿಕ ಕ್ಷಣಮಾತ್ರದಲ್ಲಿ ಬಸ್‌ಗೆ ಬೆಂಕಿ ಹೊತ್ತಿಕೊಂಡಿತ್ತು. ಈ ಭೀಕರ ದುರ್ಘಟನೆಯಲ್ಲಿ ಮೂವರು ಮಕ್ಕಳು ಸೇರಿದಂತೆ ಕನಿಷ್ಠ 25 ಮಂದಿ ಸುಟ್ಟು ಕರಕಲಾಗಿದ್ದರು. ಎಂಟು ಮಂದಿ ಪ್ರಯಾಣಿಕರು ಗಾಯಗೊಂಡಿದ್ದರು.
ಕಳೆದ ಮಂಗಳವಾರವಷ್ಟೇ ಬುಲ್ದಾನಾದ ಘಾಟ್ ಭಾಗದಲ್ಲಿ ಮಹಾರಾಷ್ಟ್ರ ರಾಜ್ಯ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಮಗುಚಿಬಿದ್ದು 10 ಮಂದಿ ಗಾಯಗೊಂಡಿದ್ದರು. ಮೇ ತಿಂಗಳ 23ರಂದು ಬುಲ್ದಾನಾದ ನಾಗಪುರ- ಪುಣೆ ಹೆದ್ದಾರಿಯಲ್ಲಿ ಟ್ರಕ್‌ಗೆ ಬಸ್ ಡಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ಏಳು ಮಂದಿ ಜೀವ ಕಳೆದುಕೊಂಡು, 13 ಮಂದಿ ಗಾಯಗೊಂಡಿದ್ದರು.