ಫೆ.14 ಗೋವುಗಳನ್ನು ಅಪ್ಪಿಕೊಳ್ಳುವ ದಿನ ರದ್ದು
ನವದೆಹಲಿ: ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ (Animal Welfare Board) ಫೆಬ್ರವರಿ 14ರಂದು ಪ್ರೇಮಿಗಳ ದಿನವನ್ನು (Valentine’s Day) ಆಚರಿಸುವ ಬದಲು ಗೋವುಗಳನ್ನು ಅಪ್ಪಿಕೊಳ್ಳುವ ದಿನವನ್ನಾಗಿ (Cow Hug Day) ಆಚರಿಸಲು ಕರೆ ನೀಡಿತ್ತು. ಆದರೆ ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾದ ಹಿನ್ನೆಲೆ ಈ ನಿರ್ಧಾರವನ್ನು ಮಂಡಳಿ ಹಿಂಪಡೆದಿದೆ.
ಫೆಬ್ರವರಿ 14ರಂದು ವಿಶ್ವದೆಲ್ಲೆಡೆ ಪ್ರೇಮಿಗಳ ದಿನವನ್ನಾಗಿ ಆಚರಿಸಲಾಗುತ್ತದೆ. ಆದರೆ ಈ ದಿನವನ್ನು ಭಾರತದಲ್ಲಿ ಹಸುಗಳನ್ನು ಅಪ್ಪಿಕೊಳ್ಳುವ ದಿನವನ್ನಾಗಿ ಆಚರಿಸಲು ಪ್ರಾಣಿ ಕಲ್ಯಾಣ ಮಂಡಳಿ ಕೆಲ ದಿನಗಳ ಹಿಂದೆ ಕರೆ ನೀಡಿತ್ತು. ಹಸುಗಳನ್ನು ಅಪ್ಪಿಕೊಳ್ಳುವುದರಿಂದ ಹಲವು ಪ್ರಯೋಜನಗಳಿವೆ, ಆದ್ದರಿಂದ ಪ್ರೇಮಿಗಳ ದಿನದಂದು ಹಸುಗಳನ್ನು ಅಪ್ಪಿಕೊಳ್ಳುವ ದಿನವನ್ನಾಗಿ ಆಚರಿಸಲು ತಿಳಿಸಿತ್ತು.
ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಟೀಕೆ ವ್ಯಕ್ತವಾಗಿತ್ತು. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡ ಉದ್ಧವ್ ಠಾಕ್ರೆ ಅವರ ಶಿವಸೇನೆ ಬಣ ಬಿಲಿಯನೇರ್ ಕೈಗಾರಿಕೋದ್ಯಮಿ ಗೌತಮ್ ಅದಾನಿ ಅವರು ಪ್ರಧಾನಿಗೆ ಪವಿತ್ರ ಹಸು ಎಂದು ಹೇಳಿ ಕಿಡಿಕಾರಿತ್ತು
ಪಶ್ಚಿಮ ಬಂಗಾಳದ ರಾಜ್ಯಸಭಾ ಸದಸ್ಯ ಟಿಎಂಸಿಯ ಸಂತನು ಸೇನ್, ಮುಖ್ಯವಾಹಿನಿಯ ಸಮಸ್ಯೆಗಳಿಂದ ಗಮನವನ್ನು ಬೇರೆಡೆಗೆ ತಿರುಗಿಸಲು ಹಸುವನ್ನಪ್ಪಿಕೊಳ್ಳುವ ದಿನಕ್ಕೆ ಕರೆ ನೀಡಲಾಗಿದೆ. ಇದು ಹುಸಿ ಹಿಂದುತ್ವ ಹಾಗೂ ಹುಸಿ ದೇಶಭಕ್ತಿಯಾಗಿದೆ ಎಂದು ಛೇಡಿಸಿದ್ದರು.
ನಾನು ರೈತ ಸಮುದಾಯದಿಂದ ಬಂದವನು, ಕೇವಲ ಒಂದು ದಿನವಲ್ಲ, ನಾನು ಪ್ರತಿ ದಿನ ನನ್ನ ಹಸುವನ್ನು ಅಪ್ಪಿಕೊಳ್ಳುತ್ತೇನೆ. ಇದು ನಿರುದ್ಯೋಗ ಮತ್ತು ಹಣದುಬ್ಬರದಂತಹ ಸಮಸ್ಯೆಗಳ ಬಗೆಗಿನ ಗಮನವನ್ನು ಬೇರೆಡೆಗೆ ತಿರುಗಿಸಲು ಮಾಡಿರುವ ಷಡ್ಯಂತ್ರವಾಗಿದೆ ಎಂದು ಕಾಂಗ್ರೆಸ್‌ನ ರಜನಿ ಪಾಟೀಲ್ ಕಿಡಿಕಾರಿದ್ದರು.