ಬೆಂಗಳೂರು: ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಗೆ ಮನಸೋ ಇಚ್ಛೆ ಇರಿದು ಕೊಂದ ಭಗ್ನ ಪ್ರೇಮಿ!
ಬೆಂಗಳೂರು: ತನ್ನನ್ನು ಆವೈಡ್ ಮಾಡಿದಳೆಂದು ಆಕ್ರೋಶಗೊಂಡ ಯುವಕನೊಬ್ಬ ತನ್ನ ಪ್ರಿಯತಮೆಯನ್ನೇ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಗರದ ಜೀವನ್ ಭಿಮಾ ನಗರ ಠಾಣೆ ವ್ಯಾಪ್ತಿಯ ವಿಂಡ್ ಟನಲ್ ರಸ್ತೆಯಲ್ಲಿ ಇಂದು ಸಂಜೆ (ಫೆಬ್ರವರಿ 28) ನಡೆದಿದೆ. ಆಂಧ್ರಪ್ರದೇಶ ಮೂಲದ ಲೀಲಾಪವಿತ್ರಾ (28) ಕೊಲೆಯಾದ ಯುವತಿಯಾಗಿದ್ದಾಳೆ. ದಿವಾಕರ್ ಹತ್ಯೆ ಮಾಡಿದ ಆರೋಪಿಯಾಗಿದ್ದಾನೆ
ಈತನೂ ಆಂಧ್ರಪ್ರದೇಶ ಮೂಲದವನಾಗಿದ್ದಾನೆ. ಪ್ರಕರಣ ಸಂಬಂಧ ಜೀವನ್ ಭೀಮಾ ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದಿವಾಕರ್ನನ್ನು ಅರೆಸ್ಟ್ ಮಾಡಿದ್ದಾರೆ.
ಲೀಲಾಪವಿತ್ರಾ ಮತ್ತು ದಿವಾಕರ ಎಂಬವರು ಕಳೆದ ಐದು ವರ್ಷಗಳಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದರು. ವಿಂಡ್ ಟನಲ್ ರಸ್ತೆಯಲ್ಲಿರುವ ಕಚೇರಿಯೊಂದರಲ್ಲಿ ಆಕೆ ಕೆಲಸ ಮಾಡುತ್ತಿದ್ದಳು. ಆದರೆ ಇತ್ತೀಚೆಗೆ ಆಕೆ ದಿವಾಕರನಿಂದ ಅಂತರ ಕಾಯ್ದುಕೊಳ್ಳಲು ಆರಂಭಿಸಿದ್ದಾಳೆ. ಎಷ್ಟೇ ಯತ್ನಿಸಿದರೂ ಆಕೆಯನ್ನು ತನ್ನ ದಾರಿಗೆ ತರಲಾಗದೆ ಕೋಪಗೊಂಡ ದಿವಾಕರ, ಆಕೆಯನ್ನು ಹತ್ಯೆ ಮಾಡುವ ಚಿಂತನೆ ನಡೆಸಿದ್ದಾನೆ.
ಅದರಂತೆ ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ವಿಂಡ್ ಟನಲ್ ರಸ್ತೆಯಲ್ಲಿರುವ ಕಚೇರಿಯಿಂದ ಕೆಲಸ ಮುಗಿಸಿ ಹೊರ ಬಂದಾಗ ಯುವತಿಯ ಮೇಲೆ ದಾಳಿ ನಡೆಸಿದ ದಿವಾಕರ, ಚಾಕುವಿನಿಂದ 16ಕ್ಕೂ ಹೆಚ್ಚು ಬಾರಿ ಇರಿದಿದ್ದಾನೆ. ಪರಿಣಾಮವಾಗಿ ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.