ಪ್ರಿಯಕರನ ಜೊತೆ ಸೇರಿ ಹೆತ್ತ ಮಕ್ಕಳನ್ನೇ ಕೊಂದ ತಾಯಿ
ಲಕ್ನೋ: ಪ್ರಿಯಕರನ ಜೊತೆ ಸೇರಿ ಮಹಿಳೆಯೊಬ್ಬಳು ತನ್ನ ಮಕ್ಕಳನ್ನು ಕೊಲೆಗೈದ ಘಟನೆ ಉತ್ತರಪ್ರದೇಶದ (Uttar Pradesh) ಮೀರತ್ನಲ್ಲಿ (Meerut) ನಡೆದಿದೆ.
ಈ ಘಟನೆ ಬುಧವಾರ ನಡೆದಿದ್ದು, ಮಹಿಳೆ ಹಾಗೂ ಅಲ್ಲಿನ ಸ್ಥಳೀಯ ಕೌನ್ಸಿಲರ್ (Councillor) ಸೌದ್ ಪರಸ್ಪರ ಪ್ರೀತಿಸುತ್ತಿದ್ದರು. ಹೀಗಾಗಿ ಮಹಿಳೆ ಪ್ರೇಮಿಯ ಜೊತೆ ಸೇರಿ ತನ್ನ 10 ವರ್ಷದ ಮಗ ಹಾಗೂ 6 ವರ್ಷದ ಮಗಳನ್ನು ಕೊಂದು ಬಳಿಕ ಶವಗಳನ್ನು ಕಾಲುವೆಗೆ ಎಸೆದಿದ್ದಾರೆ. ಅಲ್ಲದೇ ಮಕ್ಕಳ ಹತ್ಯೆಯಲ್ಲಿ (Murder) ನೆರೆಮನೆಯವರೂ ಭಾಗಿಯಾಗಿದ್ದು, ಇಲ್ಲಿಯವರೆಗೆ ಆರು ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಗಳನ್ನು ತನ್ನ ಮನೆಯಲ್ಲಿ ಕೊಂದು, ಮಗನನ್ನು ಪಕ್ಕದ ಮನೆಯಲ್ಲಿ ಕೊಲೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಮೂವರು ಮಹಿಳೆಯರು ಹಾಗೂ ಮೂವರು ಪುರುಷರು ಭಾಗಿಯಾಗಿದ್ದಾರೆ. ಮಕ್ಕಳು ನಾಪತ್ತೆಯಾಗಿದ್ದಾರೆಂದು ಕೇಸು ದಾಖಲಾದ ಬಳಿಕ ನಿಜಾಂಶ ಬೆಳಕಿಗೆ ಬಂದಿದೆ ಎಂದು ನಗರದ ಎಸ್ಪಿ (SP) ಪಿಯೂಷ್ ಸಿಂಗ್ ತಿಳಿಸಿದ್ದಾರೆ.
ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳೆಲ್ಲರನ್ನು ಬಂಧಿಸಲಾಗಿದೆ. ಮಕ್ಕಳ ಮೃತದೆಹ ಇಲ್ಲಿಯವರೆಗೆ ಪತ್ತೆಯಾಗದ ಹಿನ್ನೆಲೆ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.