ಪ್ರವಾಸಿಗರ ಗಮನಕ್ಕೆ; ಕೊಡಗಿನ ಗಾಜಿನ ಸೇತುವೆ ಬಂದ್.!

ಮಡಿಕೇರಿ: ಕೊಡಗಿನಲ್ಲಿ ಪ್ರವಾಸೋದ್ಯಮ ಕ್ಷೇತ್ರ ಅಭಿವೃದ್ಧಿ ಹೊಂದುತ್ತಿದ್ದು, ಜಿಲ್ಲೆಯಾದ್ಯಂತ ಹಲವಾರು ಹೋಂಸ್ಟೇಗಳು ಮತ್ತು ರೆಸಾರ್ಟ್‌ಗಳು ನಾಯಿಕೊಡೆಗಳಂತೆ ತಲೆ ಎತ್ತಿವೆ. ಇದೀಗ ಕೊಡಗಿನಲ್ಲಿ ಹೊಸ ಟ್ರೆಂಡ್ ಆಗಿ ಪ್ರವಾಸಿಗರನ್ನು ಸೆಳೆಯಲು ಹಲವು ಪ್ರದೇಶಗಳಲ್ಲಿ ಗಾಜಿನ ಸೇತುವೆಗಳನ್ನೂ ನಿರ್ಮಿಸಲಾಗುತ್ತಿದೆ. ಆದರೆ, ಇತ್ತೀಚೆಗಷ್ಟೇ ಉದ್ಘಾಟನೆಗೊಂಡ ಗ್ಲಾಸ್ ಬ್ರಿಡ್ಜ್ ಅನ್ನು ಸೂಕ್ತ ಅನುಮತಿ ಇಲ್ಲದ ಕಾರಣ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಜಿಲ್ಲಾಡಳಿತ ಬಂದ್ ಮಾಡಿದೆ.
ಕೆ ನಿಡುಗಣೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಸುಮಾರು 200 ಮೀಟರ್ ಉದ್ದದ ಗಾಜಿನ ಸೇತುವೆಯು ವಿಶಾಲವಾದ ಹಸಿರು ಮತ್ತು ಪರ್ವತಗಳ ಮಧ್ಯ ನಿರ್ಮಿಸಲಾಗಿದೆ. ಈ ಗಾಜಿನ ಸೇತುವೆಯು ಪ್ರಧಾನ ಪ್ರವಾಸಿ ತಾಣವಾದ ಅಬ್ಬೆ ಜಲಪಾತದ ದಾರಿಯಲ್ಲಿದೆ.
ಈ ಸೇತುವೆಯನ್ನು ನಿರ್ಮಿಸಲು ಖಾಸಗಿಯವರು ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡಿದರೂ, ಸೇತುವೆಯ ಸುರಕ್ಷತೆಗೆ ಸಂಬಂಧಿಸಿದಂತೆ ಯಾವುದೇ ವೈಜ್ಞಾನಿಕ ಕ್ರಮಗಳನ್ನು ತೆಗೆದುಕೊಳ್ಳಲಾಗಿಲ್ಲ. ಹೀಗಾಗಿ ಅದು ಈಗ ದುರ್ಬಲ ಸ್ಥಿತಿಯಲ್ಲಿದೆ. ಜೌಗು ಪ್ರದೇಶದಲ್ಲಿರುವ ಈ ಗಾಜಿನ ಸೇತುವೆಯ ಕೆಳಗಿನ ಸಡಿಲವಾದ ಮಣ್ಣು ಕ್ರಮೇಣ ಕೆಳಕ್ಕೆ ಜಾರುತ್ತಿರುವುದರಿಂದ ಅಪಾಯದ ಸ್ಥಿತಿ ಎದುರಾಗಿದೆ.
ಘಟನಾ ಸ್ಥಳಕ್ಕೆ ಕೊಡಗು ಡಿಸಿ ವೆಂಕಟ್ ರಾಜ ಅವರು ಭೇಟಿ ನೀಡಿ ಪರಿಶೀಲಿಸಿದ ಬಳಿಕ ಗ್ಲಾಸ್ ಬ್ರಿಡ್ಜ್ ಲಾಕ್ ಮಾಡಿದ್ದು, ಬಂದ್ ಮಾಡುವಂತೆ ಆದೇಶಿಸಿದ್ದಾರೆ. “ಇದು ಅಧಿಕೃತ ಗಾಜಿನ ಸೇತುವೆಯಲ್ಲ. ಏಕೆಂದರೆ ಸಂಬಂಧಪಟ್ಟವರು ಯಾವುದೇ ಅಗತ್ಯ ಅನುಮತಿಯನ್ನು ಪಡೆದಿಲ್ಲ. ಈ ಸೇತುವೆಗೆ ಅರಣ್ಯ ಅನುಮತಿ ಇಲ್ಲ. ಸೇತುವೆಯನ್ನು ನಿರ್ಮಿಸುವ ಮುನ್ನ ಮಣ್ಣು ಪರೀಕ್ಷೆ ಸೇರಿದಂತೆ ಯಾವುದೇ ವೈಜ್ಞಾನಿಕ ಕ್ರಮಗಳನ್ನು ಅನುಸರಿಸಿಲ್ಲ. ಗ್ರಾಮ ಪಂಚಾಯಿತಿಯ ಏಕಮಾತ್ರ ನಿರ್ಣಯದ ಮೇರೆಗೆ ಸೇತುವೆಯನ್ನು ನಿರ್ಮಿಸಲಾಗಿದೆ. ಹೀಗಾಗಿ ಪ್ರವಾಸಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಬಂದ್ ಮಾಡಲಾಗುತ್ತಿದೆ ಎಂದು ಡಿಸಿ ವೆಂಕಟ್ ರಾಜ ಅವರು ತಿಳಿಸಿದ್ದಾರೆ.
ಇದೇ ವೇಳೆ ಕೆ.ನಿಡುಗಣೆ ಗ್ರಾ.ಪಂ.ಅಧ್ಯಕ್ಷ ಡೀನ್ ಬೋಪಣ್ಣ ಮಾತನಾಡಿ, ಪಂಚಾಯಿತಿಯೇ ಈ ಗ್ಲಾಸ್ ಬ್ರಿಡ್ಜ್ ಬಂದ್ ಮಾಡುವ ನಿರ್ಧಾರ ಕೈಗೊಂಡಿದೆ. ಈ ಪ್ರದೇಶದಲ್ಲಿ 5 ಇಂಚುಗಳಷ್ಟು ಮಳೆಯಾಗಿದೆ ಮತ್ತು ಗಾಜಿನ ಸೇತುವೆಯ ಪಿಲ್ಲರ್‌ಗಳನ್ನು ಹಾಕಲಾದ ಸ್ಥಳದಲ್ಲಿ ಮಣ್ಣು ಕೆಳಕ್ಕೆ ಜಾರಿದೆ. ಹೀಗಾಗಿ, ಸಾರ್ವಜನಿಕರ ವೀಕ್ಷಣೆಗೆ ನಾವು ಸೇತೆವೆಯನ್ನು ಬಂದ್ ಮಾಡಿದ್ದೇವೆ ಎಂದು ಅವರು ಹೇಳಿದ್ದಾರೆ.
ಅನುಮತಿ ಕುರಿತು ಪ್ರಶ್ನಿಸಿದಾಗ, ಖಾಸಗಿಯವರು ಸಲ್ಲಿಸಿದ ದಾಖಲೆಗಳ ಆಧಾರದ ಮೇಲೆ ಪಂಚಾಯಿತಿ ಅನುಮತಿ ನೀಡಿದೆ.
“ಸರ್ವೆ ಸಂಖ್ಯೆ 62 ಮತ್ತು 51/1 ಇಬ್ಬರು ನಿವಾಸಿಗಳ ಒಡೆತನದಲ್ಲಿದೆ ಮತ್ತು ಗಾಜಿನ ಸೇತುವೆಯ ಮಾಲೀಕರು ಸೇತುವೆಯನ್ನು ನಿರ್ಮಿಸಲು ಭೂ ಮಾಲೀಕರೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಎಲ್ಲ ಅಗತ್ಯ ದಾಖಲೆಗಳನ್ನು ಸಲ್ಲಿಸಿದ ನಂತರ ಸುಮಾರು ಎಂಟು ತಿಂಗಳ ಹಿಂದೆ ಸೇತುವೆಗೆ ಪಂಚಾಯಿತಿ ಅನುಮತಿ ನೀಡಿತ್ತು. ಆದರೆ, ಭೂ ಪರಿವರ್ತನೆಯ ದಾಖಲೆ ಸಲ್ಲಿಸಿಲ್ಲ ಮತ್ತು ಸುಮಾರು ಮೂರು ವರ್ಷಗಳಿಂದ ಯಾವುದೇ ಭೂ ಪರಿವರ್ತನೆ ಅರ್ಜಿಗಳಿಗೆ ಅನುಮತಿ ನೀಡಿಲ್ಲ” ಎಂದು ಅವರು ವಿವರಿಸಿದರು.