ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್ ಗೆ ಟ್ವಿಸ್ಟ್ ದೂರುದಾರೆಯ ಅತ್ತೆಯಿಂದ ಶಾಕಿಂಗ್ ಹೇಳಿಕೆ.!

ಬೆಂಗಳೂರು: ಲೈಂಗಿಕ ದೌರ್ಜನ್ಯ ಎಸಗಿದ್ದಾರೆ (Hassan Pen Drive Case) ಎಂದು ಆರೋಪಿಸಿ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಮಾಜಿ ಸಚಿವ ಎಚ್.ಡಿ.ರೇವಣ್ಣ ವಿರುದ್ಧ ಅವರ ಮನೆ ಕೆಲಸದಾಕೆಯೇ ದೂರು ನೀಡಿದ್ದಾಳೆ. ಇದರಿಂದ ತಂದೆ-ಮಗನ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ವಿವಿಧೆಡೆ ಪ್ರತಿಭಟನೆಗಳು ನಡೆಯುತ್ತಿವೆ. ಆದರೆ, ರೇವಣ್ಣ ಕುಟುಂಬ ತಮ್ಮ ಮೇಲೆ ಯಾವುದೇ ರೀತಿಯ ದೌರ್ಜನ್ಯ ಮಾಡಿಲ್ಲ ಎಂದು ದೂರುದಾರೆಯ ಸಂಬಂಧಿಕರು ಹೇಳಿರುವುದು ಕಂಡುಬಂದಿದೆ.
ಹಾಸನ ಅಶ್ಲೀಲ ವಿಡಿಯೊ ಪ್ರಕರಣದ ಬಗ್ಗೆ ದೂರುದಾರೆಯ ಅತ್ತೆ ಗೌರಮ್ಮ ಸುದ್ದಿಗೋಷ್ಠಿ ನಡೆಸಿದ್ದು, ದೂರುದಾರೆಗೆ ಭವಾನಿ ರೇವಣ್ಣನವರೇ ಸಹಾಯ ಮಾಡಿ ಕೆಲಸ ಕೊಡಿಸಿದ್ದರು. ರೇವಣ್ಣನವರ ಕುಟುಂಬ ನಮ್ಮ ಮೇಲೆ ಯಾವುದೇ ದೌರ್ಜನ್ಯ ಮಾಡಿಲ್ಲ. ದೂರುದಾರೆಯನ್ನು ಕರೆದುಕೊಂಡು ಹೋಗಿ ಇರಿಸಿಕೊಳ್ಳಿ ಎಂದು ನಾವೇ ಭವಾನಿ ಅಮ್ಮನವರಿಗೆ ಹೇಳಿದ್ದೆವು. ಅವರು ಯಾವ ದೌರ್ಜನ್ಯವೂ ಮಾಡಿಲ್ಲ ಎಂದು ತಿಳಿಸಿದ್ದಾರೆ.
ರೇವಣ್ಣ ಅವರ ಮನೆಯಲ್ಲಿ ಮಹಿಳೆಯನ್ನು ನಾಲ್ಕು ವರ್ಷ ಕೆಲಸಕ್ಕೆ ಇರಿಸಿಕೊಂಡಿದ್ದರು ಮತ್ತೆ ನಾನು ಅಲ್ಲಿ ಇರೋದಿಲ್ಲ ಅಂತ ಆಕೆ ಹೇಳಿದ್ದಳು. ಐದು ವರ್ಷದಿಂದ ಸಮಸ್ಯೆ ಇಲ್ಲದೇ, ಈಗ ಯಾಕೆ ದೂರು ಕೊಟ್ಟಳು. ಅವರು ಯಾವುದೇ ದೌರ್ಜನ್ಯವೂ ಮಾಡಿಲ್ಲ. ಯಾರದೋ ಒತ್ತಡದಿಂದ ಮಹಿಳೆ ದೂರು ಕೊಟ್ಟಿದ್ದಾಳೆ. ಭವಾನಿ ರೇವಣ್ಣ ನಮಗೆ ಎಲ್ಲಾ ರೀತಿಯ ಸಹಾಯ ಮಾಡಿದ್ದಾರೆ ಎಂದು ಹೇಳಿದ್ದಾರೆ.
ದೂರುದಾರೆ ಸಾಲ ಮಾಡಿಕೊಂಡಿದ್ದಾಗ, ಭವಾನಿ ರೇವಣ್ಣನವರೇ ಅವರಿಗೆ ಸಹಾಯ ಮಾಡಿ ಕೆಲಸ ಕೊಡಿಸಿದ್ದರು. ಚುನಾವಣೆ ಸಂದರ್ಭದಲ್ಲಿ ರೇವಣ್ಣನವರ ಕುಟುಂಬಕ್ಕೆ ಕೆಟ್ಟ ಹೆಸರು ತರಲು ಈ ರೀತಿ ಮಾಡಿದ್ದಾರೆ. ಹೊಳೆನರಸೀಪುರ ನಗರ ಠಾಣೆಯಲ್ಲಿ ದೂರು ದಾಖಲಾಗಿರುವುದರಲ್ಲಿ ಸತ್ಯವಿಲ್ಲ. ರೇವಣ್ಣನವರ ಮನೆಯಲ್ಲಿ ಯಾರೂ ಕೂಡ ಹಿಂಸೆ ಕೊಟ್ಟಿಲ್ಲ ಎಂದು ತಿಳಿಸಿದ್ದಾರೆ.
ಯಾವುದೋ ಒತ್ತಡಕ್ಕೆ ಸಿಲುಕಿ ದೂರುದಾರೆ ಈ ರೀತಿ ಮಾತನಾಡುತ್ತಿದ್ದಾಳೆ. ಸರಿಯಾದ ಹೆಂಗಸಾಗಿದ್ದರೆ ಐದು ವರ್ಷದ ಹಿಂದೆಯೇ ಪ್ರಶ್ನೆ ಮಾಡಬೇಕಿತ್ತು. ಅಲ್ಲಿಂದ ಇಲ್ಲಿಯವರೆಗೂ ಯಾವುದೇ ವಿಚಾರ ಪ್ರಸ್ತಾಪ ಮಾಡಿಲ್ಲ. ಈಗ ಯಾವುದೋ ದುರುದ್ದೇಶ ಮತ್ತು ಒತ್ತಡದಿಂದ ಈ ರೀತಿ ಮಾಡಿದ್ದಾರೆ. ಅವರ ದೂರಿನಲ್ಲಿ ಯಾವುದೇ ಸತ್ಯವಿಲ್ಲ, ಸರಿಯಾದ ರೀತಿ ತನಿಖೆ ಆಗಬೇಕು. ಪ್ರಕರಣದಿಂದ ನಮ್ಮ ಹಾಗೂ ರೇವಣ್ಣನವರ ಸಂಬಂಧ ಹಾಳಾಗುವ ಹಾಗೆ ಆಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.