ಪ್ರಚಾರದ ವೇಳೆ ಕುಸಿದ ರಾಹುಲ್ ಗಾಂಧಿ ಇದ್ದ ವೇದಿಕೆ..!

ಲೋಕಸಭೆ ಎಲೆಕ್ಷನ್ 7ನೇ ಹಂತದ ಮತದಾನ ಬಾಕಿ ಇದ್ದು, ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರ ಮಾಡುತ್ತಿವೆ. ಇಂದು ಬಿಹಾರದಲ್ಲಿ ಮತಶಿಕಾರಿ ಮಾಡುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಿಂತಿದ್ದ ವೇದಿಕೆ ಕುಸಿದಿದೆ. ಪಾಟಲೀಪುತ್ರ ಲೋಕಸಭಾ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಅವರ ಪುತ್ರಿ ಮಿಸಾ ಭಾರ್ತಿ ಅವರ ಪರವಾಗಿ ಪ್ರಚಾರ ಮಾಡಲು ಪಾಲಿಗಂಜ್ ಗೆ ರಾಹುಲ್ ಗಾಂಧಿ ಭೇಟಿ ನೀಡಿದ್ದರು.
ರಾಹುಲ್ ಗಾಂಧಿ ನಿಂತಿದ್ದ ವೇದಿಕೆ ಕುಸಿತ
ರಾಹುಲ್ ಗಾಂಧಿಯನ್ನು ಬೃಹತ್ ವೇದಿಕೆ ಮೇಲೆ ಕರೆದು ಅವರನ್ನು ಆಸನದ ಕಡೆಗೆ ಭಾರತಿ ಅವರು ಕರೆದುಕೊಂಡು ಹೋಗುವಾಗ ವೇದಿಕೆ ಒಂದು ಕಡೆ ಕುಸಿದಿದೆ. ವೇದಿಕೆ ಕುಸಿಯುತ್ತಿದ್ದಂತೆ ಭಾರ್ತಿ ಅವರು ರಾಹುಲ್ ಗಾಂಧಿ ಅವರ ಕೈಯನ್ನು ಹಿಡಿದು ಪಕ್ಕಕ್ಕೆ ಕರೆದುಕೊಂಡು ಹೋಗಿದ್ದಾರೆ. ನಡೆಯುತ್ತಿದ್ದಂತೆ ವೇದಿಕೆ ಕುಸಿದಿದೆ.
ವೇದಿಕೆ ಕುಸಿತದಿಂದ ಕೆಲಕಾಲ ಅದರ ಮೇಲಿದ್ದ ಕಾಂಗ್ರೆಸ್ ನಾಯಕರೆಲ್ಲಾ ತಬ್ಬಿಬ್ಬು ಆಗಿದ್ದಾರೆ. ಕೂಡಲೇ ರಾಹುಲ್ ಗಾಂಧಿ ಅವರ ಬಳಿ ಭದ್ರತಾ ಸಿಬ್ಬಂದಿ ಓಡಿ ಬಂದಿದ್ದಾರೆ. ಆದರೆ ತಮಗೆ ಏನೂ ಆಗಿಲ್ಲ ಎಂದು ಜನರ ಕಡೆ ಕೈ ಬೀಸುತ್ತಲೇ ರಾಹುಲ್ ಗಾಂಧಿ ನಗುತ್ತಲೇ ಅವರನ್ನು ಕಳುಹಿಸಿದ್ದಾರೆ. ಅದೃಷ್ಟವಶಾತ್ ವೇದಿಕೆ ಮೇಲಿದ್ದ ಗಣ್ಯರೆಲ್ಲಾ ಯಾವುದೇ ತೊಂದರೆಗೆ ಒಳಗಾಗದೆ ಅಲ್ಲಿಂದ ಕೆಳಗಿಳಿದಿದ್ದಾರೆ. ರಾಹುಲ್ ಗಾಂಧಿ ಇದ್ದ ವೇದಿಕೆ ಕುಸಿತದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಈಗ ವೈರಲ್ ಆಗುತ್ತಿದೆ.
ಮಿಸಾ ಭಾರ್ತಿ ಪರ ರಾಹುಲ್ ಗಾಂಧಿ ಪ್ರಚಾರ
ಬಿಹಾರದಲ್ಲಿ ಮಹಿಳಾ ರಾಜಕಾರಣಿಯಾಗಿರುವ ಮಿಸಾ ಭಾರ್ತಿ, ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರ ಪುತ್ರಿ. 2014ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಪಾಟಲೀಪುತ್ರ ಕ್ಷೇತ್ರದಿಂದ ರಾಷ್ಟ್ರೀಯ ಜನತಾ ದಳದಿಂದ ಸ್ಪರ್ಧಿಸಿದ್ದರು. 2016ರಲ್ಲಿ ರಾಜ್ಯಸಭಾ ಚುನಾವಣೆಗೆ ಪಕ್ಷದ ನಾಮನಿರ್ದೇಶಿತರಾಗಿದ್ದರು. ಮತ್ತೆ 2019ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಪಾಟಲೀಪುತ್ರದಿಂದಲೇ ಸ್ಪರ್ಧಿಸಿ, ಬಿಜೆಪಿಯ ರಾಮ್ ಕೃಪಾಲ್ ಯಾದವ್ ವಿರುದ್ಧ ಸೋತರು. ಈ ಬಾರಿ 2024ರ ಲೋಕಸಭಾ ಚುನಾವಣೆಯಲ್ಲೂ ಗೆಲುವಿಗಾಗಿ ಶತಾಯಗತಾಯ ಪ್ರಯತ್ನದಲ್ಲಿರುವ ಮಿಸಾ ಭಾರ್ತಿ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ.
7ನೇ ಹಂತದ ಮತದಾನ
ದೇಶದಲ್ಲಿ ಲೋಕಸಭೆ ಚುನಾವಣೆ 7ನೇ ಹಂತ ಹಾಗೂ ಕೊನೆಯ ಮತದಾನ ಜೂನ್ 1 ರಂದು ನಡೆಯಲಿದೆ. ಕೊನೆ ಹಂತದ ಚುನಾವಣೆಯಲ್ಲಿ 8 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ 57 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಬಿಹಾರದಲ್ಲಿ 8 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನೆರವೇರಲಿದೆ. 134 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಇದ್ದಾರೆ. ಬಿಹಾರ ಜೊತೆಗೆ ಚಂಡೀಗಢದಲ್ಲಿ 1 ಕ್ಷೇತ್ರ , ಹಿಮಾಚಲ ಪ್ರದೇಶದಲ್ಲಿ 4 ಕ್ಷೇತ್ರ, ಜಾರ್ಖಂಡ್ 3 ಕ್ಷೇತ್ರ, ಒಡಿಶಾ 6 ಕ್ಷೇತ್ರ, ಪಂಜಾಬ್ 13 ಕ್ಷೇತ್ರ, ಉತ್ತರ ಪ್ರದೇಶ 13 ಕ್ಷೇತ್ರ, ಪಶ್ಚಿಮ ಬಂಗಾಳದಲ್ಲಿ 9 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಜೂನ್ 4 ರಂದು ಲೋಕಸಭೆ ಫಲಿತಾಂಶ ಹೊರ ಬೀಳಲಿದ್ದು, ಪಕ್ಷಗಳ ರಾಜಕೀಯ ಭವಿಷ್ಯ ತಿಳಿಯಲಿದೆ.
VIDEO | A portion of the stage set for Rahul Gandhi's rally in Bihar's Paliganj collapsed as the Congress MP arrived with other party leaders. #LSPolls2024WithPTI #LokSabhaElections2024 pic.twitter.com/lDeQjTUnq6
— Press Trust of India (@PTI_News) May 27, 2024